ಭಾರತಕ್ಕೆ ಹೊಸ ಸ್ಟಾರ್‌ ಸುದರ್ಶನ್‌!

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಈ ವರೆಗೆ ಐಪಿಎಲ್‌ ಹಾಗೂ ದೇಸಿ ಟೂರ್ನಿಗಳಲ್ಲಿ ಅಬ್ಬರಿಸುತ್ತಿದ್ದ ತಮಿಳುನಾಡಿದ ಸಾಯಿ ಸುದರ್ಶನ್‌ ಸದ್ಯ ಭಾರತ ತಂಡದಲ್ಲೂ ಮಿಂಚುತ್ತಿದ್ದು, ಹೊಸ ಭರವಸೆ ಮೂಡಿಸಿದ್ದಾರೆ

ಗೆಬೆರ್ಹಾ: ಟೀಂ ಇಂಡಿಯಾದಲ್ಲಿ ಮತೋರ್ವ ಯುವ ಆಟಗಾರನ ಉದಯವಾಗಿದೆ. ಈ ವರೆಗೆ ಐಪಿಎಲ್‌ ಹಾಗೂ ದೇಸಿ ಟೂರ್ನಿಗಳಲ್ಲಿ ಅಬ್ಬರಿಸುತ್ತಿದ್ದ ತಮಿಳುನಾಡಿದ ಸಾಯಿ ಸುದರ್ಶನ್‌ ಸದ್ಯ ಭಾರತ ತಂಡದಲ್ಲೂ ಮಿಂಚುತ್ತಿದ್ದು, ಹೊಸ ಭರವಸೆ ಮೂಡಿಸಿದ್ದಾರೆ.

22ರ ಹರೆಯದ ಸುದರ್ಶನ್‌ ಮಂಗಳವಾರ ದ.ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಅರ್ಧಶತಕ ಬಾರಿಸಿದರು. ಮೊದಲ ಏಕದಿನ ಪಂದ್ಯದ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿದ್ದ ಸುದರ್ಶನ್‌ 55 ರನ್‌ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. 2ನೇ ಪಂದ್ಯದಲ್ಲೂ ಅವರು ಅತ್ಯಾಕರ್ಷಕ 62 ರನ್‌ ಸೇರಿಸಿ ತಂಡಕ್ಕೆ ನಿರ್ಣಾಯಕ ಘಟ್ಟದಲ್ಲಿ ನೆರವಾಗಿದ್ದಾರೆ.ಭಾರತ ತಂಡದಲ್ಲಿ ಈಗಾಗಲೇ ಹಲವು ಪ್ರತಿಭಾವಂತ ಆಟಗಾರರಿದ್ದು, ತಂಡದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ನಡುವೆ ಸುದರ್ಶನ್‌ ಕೂಡಾ ತಂಡದಲ್ಲಿ ಖಾಯಂ ಸ್ಥಾನದ ರೇಸ್‌ಗೆ ಧುಮುಕಿದ್ದಾರೆ.ದೇಸಿ ಟೂರ್ನಿಗಳ ಬಳಿಕಭಾರತ ತಂಡದಲ್ಲಿ ಅಬ್ಬರಸುದರ್ಶನ್‌ 2021ರ ನವೆಂಬರ್‌ನಲ್ಲಿ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಆಡಲು ಶುರುವಿಟ್ಟ ಬಳಿಕ ತಿರುಗಿ ನೋಡಿಲ್ಲ. ಆ ಬಳಿಕ ರಣಜಿ, ಐಪಿಎಲ್‌ ಹಾಗೂ ಭಾರತ ‘ಎ’ ತಂಡದ ಪರ ಸಿಕ್ಕ ಅವಕಾಶಗಳನ್ನೆಲ್ಲಾ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್‌ ಪರ ಆಡುತ್ತಿರುವ ಸುದರ್ಶನ್‌ ಕಳೆದ ಆವೃತ್ತಿಯಲ್ಲಿ ತಂಡ ಫೈನಲಲ್‌ಗೇರಲು ಪ್ರಮುಖ ಪಾತ್ರ ವಹಿಸಿದ್ದರು.--2023ರಲ್ಲಿ ಏಕದಿನದಲ್ಲಿರಾಹುಲ್‌ ಸಾವಿರ ರನ್‌ಈ ಸಾಧನೆ ಮಾಡಿದ 4ನೇ ಭಾರತೀಯಭಾರತದ ಏಕದಿನ ತಂಡದ ಹಂಗಾಮಿ ನಾಯಕ ಕೆ.ಎಲ್‌.ರಾಹುಲ್‌ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ್ದಾರೆ. ಈ ವರ್ಷ ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿ ಕ್ಯಾಲೆಂಡರ್‌ ವರ್ಷದಲ್ಲಿ ಏಕದಿನದಲ್ಲಿ ಸಾವಿರ ರನ್‌ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.ಈಗಾಗಲೇ ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 2023ರಲ್ಲಿ ಏಕದಿನಲ್ಲಿ 1000+ ರನ್‌ ಗಳಿಸಿದ್ದಾರೆ. ಗಿಲ್‌ 63.36ರ ಸರಾಸರಿಯಲ್ಲಿ 1584 ರನ್‌ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದಾರೆ. ವಿಶ್ವಕಪ್‌ನಲ್ಲಿ ಏಕದಿನದ 50 ಶತಕಗಳ ವಿಶ್ವದಾಖಲೆ ನಿರ್ಮಿಸಿದ್ದ ಕೊಹ್ಲಿ ಈ ವರ್ಷ ಒಟ್ಟಾರೆ ಏಕದಿನಲ್ಲಿ 72.47ರ ಸರಾಸರಿಯಲ್ಲಿ 1377 ರನ್‌ ಕಲೆಹಾಕಿದ್ದಾರೆ. ಇನ್ನು ರೋಹಿತ್‌ 52.29ರ ಸರಾಸರಿಯಲ್ಲಿ 1255 ರನ್‌ ಗಳಿಸಿದ್ದಾರೆ.

Share this article