17ನೇ ಆವೃತ್ತಿ ಐಪಿಎಲ್‌ಗೆ ಮಾ.22ರಂದು ಚಾಲನೆ

KannadaprabhaNewsNetwork | Updated : Feb 21 2024, 11:35 AM IST

ಸಾರಾಂಶ

ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹು ನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ.

ನವದೆಹಲಿ: ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹು ನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. 

ಟೂರ್ನಿ ಮಾರ್ಚ್‌ 22ರಂದು ಆರಂಭಗೊಳ್ಳುವುದಾಗಿ ಸ್ವತಃ ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಮಾಹಿತಿ ನೀಡಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆ ಇದ್ದರೂ ಟೂರ್ನಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.

ಟೂರ್ನಿ ಆರಂಭದ ಬಗ್ಗೆ ಕೆಲ ತಿಂಗಳುಗಳಿಂದ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಮಾ.22ರಂದೇ ಈ ಬಾರಿ ಐಪಿಎಲ್‌ ಶುರುವಾಗಬಹುದು ಎಂದು ಹೇಳಲಾಗುತ್ತಿತ್ತು. 

ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬಗ್ಗೆ ಗೊಂದಲದಲ್ಲಿದ್ದ ಬಿಸಿಸಿಐ ಅಥವಾ ಐಪಿಎಲ್‌ ಆಡಳಿತ ಮಂಡಳಿ ಈ ವರೆಗೂ ಟೂರ್ನಿ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್‌, ‘ಲೋಕಸಭೆ ಚುನಾವಣೆ ಇದ್ದರೂ ಭಾರತದಲ್ಲೇ ಟೂರ್ನಿಯನ್ನು ನಡೆಸುತ್ತೇವೆ. ಮಾ.22ಕ್ಕೆ ಟೂರ್ನಿ ಆರಂಭಿಸಲು ಎದುರು ನೋಡುತ್ತಿದ್ದೇವೆ. 

ಚುನಾವಣೆ ಕಾರಣದಿಂದಾಗಿ ಟೂರ್ನಿಯ ವೇಳಾಪಟ್ಟಿ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ಟೂರ್ನಿಯ ಮೊದಲ 15 ದಿನದ ವೇಳಾಪಟ್ಟಿ ಪ್ರಕಟಿಸುತ್ತೇವೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಇತರ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ಜೂನ್ 1ರಿಂದ ಆರಂಭಗೊಳ್ಳಲಿರುವ ಕಾರಣ ಐಪಿಎಲ್‌ ಕೂಡಾ ಬೇಗನೇ ಮುಕ್ತಾಯಗೊಳಿಸುವ ಅನಿವಾರ್ಯತೆ ಬಿಸಿಸಿಐಗೆ ಇದೆ. ಹೀಗಾಗಿ ಮೇ 26ರಂದು ಐಪಿಎಲ್‌ ಫೈನಲ್‌ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

2019ರಲ್ಲೂ ಭಾರತದಲ್ಲೇನಡೆದಿದ್ದ ಪೂರ್ಣ ಐಪಿಎಲ್‌ಲೋಕಸಭೆ ಚುನಾವಣೆ ಕಾರಣಕ್ಕೆ ಐಪಿಎಲ್ ಬೇರೆ ದೇಶದಲ್ಲಿ ನಡೆಯಬಹುದು ಎಂದು ಆರಂಭದಲ್ಲಿ ಊಹಾಪೋಹ ಹರಡಿದ್ದವು. ಆದರೆ ಅದನ್ನು ಐಪಿಎಲ್‌ ಮುಖ್ಯಸ್ಥ ಅಲ್ಲಗಳೆದಿದ್ದಾರೆ.

ಈ ಮೊದಲು 2009ರಲ್ಲಿ ಲೋಕಸಭೆ ಚುನಾವಣೆ ಕಾರಣಕ್ಕೆ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. 

ಆ ಬಳಿಕ 2014ರಲ್ಲಿ ಆರಂಭದ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದರೆ, ಬಳಿಕ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಾಗಿತ್ತು. 2019ರಲ್ಲಿ ಚುನಾವಣೆ ಹೊರತಾಗಿಯೂ ಟೂರ್ನಿಯನ್ನು ಭಾರತದಲ್ಲೇ ನಡೆಸಲಾಗಿತ್ತು.

Share this article