ಕನ್ನಡಪ್ರಭ ವಾರ್ತೆ ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿನ ಕುಡಿವ ನೀರಿನ ಕೆರೆಯಲ್ಲಿ ಬುಧವಾರ ಬೆಳಗ್ಗೆ ಬಾಲಕಿಯೋರ್ವಳು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಜರುಗಿದೆ. ಬಾಲಕಿ ಸಾವಿಗೆ ಗ್ರಾಪಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಬಾಲಕಿ ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ಭುವನೇಶ್ವರಿ ಛಟ್ರಿ (14) ಬುಧವಾರ ಬೆಳಗ್ಗೆ ನೀರು ತರಲು ಕೆರೆಗೆ ಹೋದಾಗ ಈ ದುರ್ಘಟನೆ ನಡೆದಿದ್ದು, ಇದು ಗ್ರಾಪಂ ಆಡಳಿತ ನಿರ್ಲಕ್ಷ್ಯವೇ ಬಾಲಕಿಯ ಸಾವಿಗೆ ಕಾರಣ, ಈ ಹಿಂದೆಯೇ ಹಲವಾರು ಬಾರಿ ಕೆರೆಯಲ್ಲಿ ನೀರು ತುಂಬಲು ಸರಿಯಾದ ಮೆಟ್ಟಿಲು ನಿರ್ಮಿಸಿ,ಕೆರೆಯಲ್ಲಿ ಕುಡಿವ ನೀರು ತರಲು ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಸಾವಿಗೆ ಗ್ರಾಪಂ ಅಧಿಕಾರಿಗಳೇ ಕಾರಣ ಎಂದು ಗ್ರಾಪಂ ಕಚೇರಿಯ ಮುಂಭಾಗದಲ್ಲಿಯೇ ಶವವಿರಿಸಿ ಪ್ರತಿಭಟನೆ ನಡೆಸಿದರು.ನಂತರ ಘಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ, ಪ್ರತಿಭಟನಾ ನಿರತರ ಮನವೊಲಿಸಿದರು.