ವೆಂಕಟೇಶ್‌ ಪ್ರಸಾದ್‌ ಕೆಎಸ್‌ಸಿಎ ನೂತನ ಅಧ್ಯಕ್ಷ : ಬ್ರಿಜೇಶ್‌ ಪಟೇಲ್‌ ಬಣಕ್ಕೆ ನಿರಾಸೆ

KannadaprabhaNewsNetwork |  
Published : Dec 08, 2025, 01:15 AM IST
Venkatesh Prasad

ಸಾರಾಂಶ

ಹಲವು ಬಾರಿ ಕೋರ್ಟ್‌ ಮೆಟ್ಟಿಲೇರಿ, ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಭಾನುವಾರ ನೆರವೇರಿತು. ಭಾರತದ ಮಾಜಿ ಕ್ರಿಕೆಟಿಗ, ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್‌ ಪ್ರಸಾದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. 

 ಬೆಂಗಳೂರು :  ಹಲವು ಬಾರಿ ಕೋರ್ಟ್‌ ಮೆಟ್ಟಿಲೇರಿ, ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಭಾನುವಾರ ನೆರವೇರಿತು. ಭಾರತದ ಮಾಜಿ ಕ್ರಿಕೆಟಿಗ, ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್‌ ಪ್ರಸಾದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಗೇಮ್‌ ಚೇಂಜರ್ಸ್‌ ತಂಡದ ಬಹುತೇಕ ಸದಸ್ಯರು ಗೆಲುವು ಸಾಧಿಸಿದರು.

ಬ್ರಿಜೇಶ್‌ ಪಟೇಲ್‌ ನೇತೃತ್ವದ ತಂಡಕ್ಕೆ ತೀವ್ರ ನಿರಾಸೆ

ಮಾಜಿ ಕ್ರಿಕೆಟಿಗ, ಹಿರಿಯ ಕ್ರಿಕೆಟ್‌ ಆಡಳಿತಾಧಿಕಾರಿ ಬ್ರಿಜೇಶ್‌ ಪಟೇಲ್‌ ನೇತೃತ್ವದ ತಂಡಕ್ಕೆ ತೀವ್ರ ನಿರಾಸೆ ಉಂಟಾಯಿತು. ಅವರ ಬಣದಿಂದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ, ಪತ್ರಿಕೋದ್ಯಮಿ ಕೆ.ಎನ್‌.ಶಾಂತಕುಮಾರ್‌ ಸೋಲು ಕಂಡರು. 1900ಕ್ಕೂ ಅಧಿಕ ಮತಗಳ ಪೈಕಿ ಒಟ್ಟು 1307 ಮತಗಳು ಚಲಾವಣೆಗೊಂಡವು. ಬೆಳಗ್ಗೆ 11ರಿಂದ ಸಂಜೆ 7ರ ವರೆಗೂ ಮತದಾನ ನಡೆಯಿತು. 7 ಗಂಟೆ ಬಳಿಕ ಮತ ಎಣಿಕೆ ಕಾರ್ಯ ನಡೆದು, ರಾತ್ರಿ 8.30ರ ವೇಳೆಗೆ ಫಲಿತಾಂಶ ಹೊರಬಿತ್ತು.

ಮತ ಚಲಾಯಿಸಲು ಒಟ್ಟು 20 ಬೂತ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬೂತ್‌ನಲ್ಲಿ ಸಂಗ್ರಹವಾಗಿದ್ದ ಮತಪತ್ರಗಳನ್ನು ಚುನಾವಣಾ ಸಿಬ್ಬಂದಿ ಎಣಿಕೆ ಮಾಡಿದರು. ಮೊದಲ ಸುತ್ತಿನಲ್ಲೇ ಮುನ್ನಡೆ ಪಡೆದ ವೆಂಕಟೇಶ್‌ ಪ್ರಸಾದ್‌, ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡರು. ಅವರು ಒಟ್ಟು 749 ಮತಗಳನ್ನು ಪಡೆದರೆ, ಶಾಂತಕುಮಾರ್‌ 558 ಮತ ಗಳಿಸಿದರು.

ಉಪಾಧ್ಯಕ್ಷ ಹುದ್ದೆಗೆ ಮಾಜಿ ಕ್ರಿಕೆಟಿಗ ಸುಜಿತ್‌ ಸೋಮಸುಂದರ್‌ ಆಯ್ಕೆಯಾದರು. ವೆಂಕಿ ಬಣದ ಸುಜಿತ್‌ಗೆ 719 ಮತಗಳು ಸಿಕ್ಕರೆ, ಬ್ರಿಜೇಶ್‌ ಬಣದ ವಿನೋದ್‌ ಶಿವಪ್ಪಗೆ

588 ಮತಗಳು ದೊರೆತವು.

ಪ್ರಸಾದ್‌ ಬಣದಿಂದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ ಮಾಡಿದ್ದ ಸಂತೋಷ್‌ ಮೆನನ್‌, ಆ ಹುದ್ದೆಗೆ ಮತ್ತೊಮ್ಮೆ ಆಯ್ಕೆಯಾದರು. ಈ ಹಿಂದೆ ಅವರು, 2019ರಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಸಂತೋಷ್‌ 675 ಮತ ಪಡೆದರೆ, ಕಳೆದ ಅವಧಿಯಲ್ಲಿ ಖಜಾಂಚಿಯಾಗಿದ್ದ, ಕಾಲ್ತುಳಿತ ಘಟನೆ ನಡೆದ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಇ.ಎಸ್‌.ಜಯರಾಂ 632 ಮತ ಗಳಿಸಿ ವೀರೋಚಿತ ಸೋಲು ಅನುಭವಿಸಿದರು. ಖಜಾಂಚಿ ಸ್ಥಾನವೂ ವೆಂಕಿ ಬಣಕ್ಕೇ ಒಲಿಯಿತು. ಎಂ.ಎಸ್‌.ವಿನಯ(571 ಮತ) ವಿರುದ್ಧ ಬಿ.ಎನ್‌.ಮಧುಕರ್‌(736 ಮತ) ಜಯ ಸಾಧಿಸಿದರು. ಬ್ರಿಜೇಶ್‌ ಬಣಕ್ಕೆ 1 ಹುದ್ದೆ: ಬ್ರಿಜೇಶ್‌ ಪಟೇಲ್‌ ಬಣದಿಂದ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಪೈರ್‌ ಬಿ.ಕೆ.ರವಿ 669 ಮತ ಪಡೆದು, ವೆಂಕಿ ಬಣದ ಅಭ್ಯರ್ಥಿಯಾಗಿದ್ದ ಎ.ವಿ.ಶಶಿಧರ (638 ಮತ) ಅವರನ್ನು ಸೋಲಿಸಿದರು. ಗಣ್ಯರಿಂದ ಮತದಾನ: ಖ್ಯಾತ ಕ್ರಿಕೆಟಿಗರಾದ ಜಿ.ಆರ್‌.ವಿಶ್ವನಾಥ್‌, ಬಿ.ಎಸ್‌.ಚಂದ್ರಶೇಖರ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸುನಿಲ್‌ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಟ, ನಿರ್ದೇಶಕ ಜೈ ಜಗದೀಶ್‌ ಸೇರಿ ಅನೇಕ ಗಣ್ಯರು ಮತ ಚಲಾಯಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಮೌಲ್ಯ ಭಾರೀ ಕುಸಿತ!
ಭಾರತಕ್ಕೆ 101 ರನ್‌ ಗೆಲುವು - 1ನೇ ಟಿ20 : ದ.ಆಫ್ರಿಕಾ ಮೇಲೆ ಭಾರತ ಸವಾರಿ