ವಿಜಯ್‌ ಹಜಾರೆ ಏಕದಿನ : ಕರ್ನಾಟಕಕ್ಕೆ ಎದುರಾಗಲಿದೆ ಬಲಿಷ್ಠ ಪಂಜಾಬ್‌ ಸವಾಲು -ಸ್ಫೋಟಕ ಬ್ಯಾಟರ್‌ಗಳಿಂದ ಚಾಲೆಂಜ್‌

KannadaprabhaNewsNetwork | Updated : Dec 26 2024, 04:02 AM IST

ಸಾರಾಂಶ

ಕರ್ನಾಟಕಕ್ಕೆ ಎದುರಾಗಲಿದೆ ಬಲಿಷ್ಠ ಪಂಜಾಬ್‌ ಸವಾಲು. ರಾಜ್ಯದ ಬೌಲರ್‌ಗಳಿಗೆ ಪಂಜಾಬ್‌ನ ಸ್ಫೋಟಕ ಬ್ಯಾಟರ್‌ಗಳಿಂದ ಚಾಲೆಂಜ್‌. ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿ ಕರ್ನಾಟಕ.

ಅಹಮದಾಬಾದ್: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 2 ಗೆಲುವುಗಳೊಂದಿಗೆ ಶುಭಾರಂಭ ಮಾಡಿರುವ ಕರ್ನಾಟಕಕ್ಕೆ ಗುರುವಾರ ಬಲಿಷ್ಠ ಪಂಜಾಬ್‌ ಸವಾಲು ಎದುರಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ದಾಖಲೆ ಮೊತ್ತವನ್ನು ಬೆನ್ನತ್ತಿ ಗೆದ್ದಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಪುದುಚೇರಿ ವಿರುದ್ಧ ರೋಚಕ ಜಯ ಒಲಿಸಿಕೊಂಡಿತ್ತು. ಪಂಜಾಬ್‌ಗೂ ಸೋಲಿನ ರುಚಿ ತೋರಿಸಿ ಹ್ಯಾಟ್ರಿಕ್‌ ಗೆಲುವು ದಾಖಲಿಸಲು ಮಯಾಂಕ್‌ ಅಗರ್‌ವಾಲ್‌ ಪಡೆ ಕಾತರಿಸುತ್ತಿದೆ.

ಪಂಜಾಬ್‌ ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದ್ದು, ಕರ್ನಾಟಕ ಬೌಲರ್‌ಗಳ ಕೌಶಲ್ಯ ಹಾಗೂ ತಾಳ್ಮೆಯ ಪರೀಕ್ಷೆ ನಡೆಯಲಿದೆ.

ನಾಯಕ ಅಭಿಷೇಕ್‌ ಶರ್ಮಾ, ಪ್ರಭ್‌ಸಿಮ್ರನ್‌ ಸಿಂಗ್‌, ಅನ್ಮೋಲ್‌ಪ್ರೀತ್‌, ರಮಣ್‌ದೀಪ್‌, ಸನ್‌ವೀರ್‌ ಸಿಂಗ್‌ ಹೀಗೆ ಯಾವುದೇ ಬಲಿಷ್ಠ ದಾಳಿಯನ್ನು ಸದೆಬಡಿಯಬಲ್ಲ ಬಲಿಷ್ಠ ಬ್ಯಾಟರ್‌ಗಳನ್ನು ಪಂಜಾಬ್‌ ಹೊಂದಿದೆ. ಹೀಗಾಗಿ, ರಾಜ್ಯದ ಬೌಲರ್‌ಗಳಾದ ವಾಸುಕಿ ಕೌಶಿಕ್‌, ವಿದ್ಯಾಧರ್‌ ಪಾಟೀಲ್‌, ವೈಶಾಖ್‌ ವಿಜಯ್‌ಕುಮಾರ್‌, ಶ್ರೇಯಸ್‌ ಗೋಪಾಲ್‌, ಪ್ರವೀಣ್‌ ದುಬೆ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಜ್ಯದ ಕೆ.ಎಲ್‌.ಶ್ರೀಜಿತ್‌, ಪದುಚೇರಿ ವಿರುದ್ಧ ಆರ್‌.ಸ್ಮರಣ್‌ ಶತಕ ಸಿಡಿಸಿದ್ದರು. ನಾಯಕ ಮಯಾಂಕ್‌ರ ಅನುಭವದ ಜೊತೆಗೆ ಯುವ ಪ್ರತಿಭೆಗಳಾದ ಕೆ.ವಿ.ಅನೀಶ್‌, ನಿಕಿನ್‌ ಜೋಸ್‌ ಬಲವೂ ತಂಡಕ್ಕಿದೆ. ಅಭಿನವ್‌ ಮನೋಹರ್‌ ಸ್ಫೋಟಕ ಆಟದ ಮೂಲಕ ತಂಡಕ್ಕೆ ನೆರವಾಗಬಲ್ಲರು.

ಕರ್ನಾಟಕದ ಬ್ಯಾಟರ್‌ಗಳಿಗೆ ಟೀಂ ಇಂಡಿಯಾ ವೇಗಿ ಅರ್ಶ್‌ದೀಪ್‌ ಸಿಂಗ್‌ರಿಂದ ಸವಾಲು ಎದುರಾಗಲಿದೆ. ಮಯಾಂಕ್‌ ಮಾರ್ಕಂಡೆ ಪಂಜಾಬ್‌ನ ಮುಂಚೂಣಿ ಸ್ಪಿನ್ನರ್‌. ಈ ಇಬ್ಬರ ವಿರುದ್ಧ ಕರ್ನಾಟಕ ಎಚ್ಚರಿಕೆಯಿಂದ ಆಡಬೇಕಿದೆ.

ಪಂಜಾಬ್‌ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ, 2ನೇ ಪಂದ್ಯದಲ್ಲಿ ನಾಗಾಲ್ಯಾಂಡ್‌ ವಿರುದ್ಧ ದೊಡ್ಡ ಗೆಲುವುಗಳನ್ನು ಸಾಧಿಸಿ ಅತ್ಯುತ್ತಮ ನೆಟ್‌ ರನ್‌ರೇಟ್‌ ಸಂಪಾದಿಸಿದೆ.

ಎಲೈಟ್‌ ‘ಸಿ’ ಗುಂಪಿನಲ್ಲಿ ಪಂಜಾಬ್‌ ಹಾಗೂ ಕರ್ನಾಟಕ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಗ್ರಸ್ಥಾನ ಪಡೆಯಲಿದ್ದು, ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವೆನಿಸಿದೆ. ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

Share this article