ಟೊರೊಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ 2024ರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.3, ಅಮೆರಿಕದ ಹಿಕರು ನಕಮುರಾ ವಿರುದ್ಧ ಸತತ 2ನೇ ಗೆಲುವು ಸಾಧಿಸಿದ್ದಾರೆ. ಇದರ ಹೊರತಾಗಿಯೂ ವಿದಿತ್ ಅವರು ನಕಮುರಾ ಜೊತೆ ಜಂಟಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಇಬ್ಬರೂ ತಲಾ 4.5 ಅಂಕಗಳನ್ನು ಹೊಂದಿದ್ದಾರೆ.ಭಾನುವಾರ ರಾತ್ರಿ ನಡೆದ ಮುಕ್ತ ವಿಭಾಗದ 9ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಆರ್.ಪ್ರಜ್ಞಾನಂದ ಹಾಗೂ ಡಿ.ಗುಕೇಶ್ ಡ್ರಾಗೆ ತೃಪ್ತಿಪಟ್ಟುಕೊಂಡರು.
ಇವರಿಬ್ಬರ ನಡುವಿನ ಮೊದಲ ಮುಖಾಮುಖಿಯೂ ಡ್ರಾದಲ್ಲಿ ಅಂತ್ಯಗೊಂಡಿತ್ತು. ಸದ್ಯ ಗುಕೇಶ್ 5.5 ಅಂಕದೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 5 ಅಂಕದೊಂದಿಗೆ 2ನೇ ಸ್ತಾನ ಕಾಯ್ದುಕೊಂಡಿದ್ದಾರೆ.ಇದೇ ವೇಳೆ ಮಹಿಳಾ ವಿಭಾಗದಲ್ಲಿ ಆರ್.ವೈಶಾಲಿ ಮತ್ತೊಂದು ಸೋಲನುಭವಿಸಿದ್ದಾರೆ. ಅವರು ಚೀನಾದ ಝೊಂಗ್ಯು ಟಾನ್ ವಿರುದ್ದ ಪರಾಭವಗೊಂಡರು. ಕೊನೆರು ಹಂಪಿ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಕೊನೆರು 4 ಅಂಕದೊಂದಿಗೆ ಜಂಟಿ 5ನೇ, ವೈಶಾಲಿ 2.5 ಅಂಕದೊಂದಿಗೆ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದಾರೆ.
ಆಶಾ, ಸಜನಾ ಭಾರತ ಮಹಿಳಾ ತಂಡಕ್ಕೆ ಆಯ್ಕೆ
ನವದೆಹಲಿ: ಡಬ್ಲ್ಯುಪಿಎಲ್‌ನಲ್ಲಿ ಕ್ರಮವಾಗಿ ಆರ್‌ಸಿಬಿ ಹಾಗೂ ಮುಂಬೈ ತಂಡದ ಪರ ಮಿಂಚಿದ್ದ ಆಶಾ ಶೋಭನಾ ಹಾಗೂ ಸಜನಾ ಸಜೀವನ್ ಚೊಚ್ಚಲ ಬಾರಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಏ.28ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಸೋಮವಾರ ಭಾರತ ತಂಡ ಪ್ರಕಟಿಸಲಾಯಿತು. ಕರ್ನಾಟಕದ ಶ್ರೇಯಾಂಕ ಪಾಟೀಲ್ ಕೂಡಾ ತಂಡದಲ್ಲಿದ್ದಾರೆ.ತಂಡ: ಹರ್ಮನ್‌ಪ್ರೀತ್(ನಾಯಕಿ), ಸ್ಮೃತಿ, ಶಫಾಲಿ, ಹೇಮಲತಾ, ಸಜನಾ, ರಿಚಾ, ಯಸ್ತಿಕಾ, ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮನ್‌ಜೋತ್, ಶ್ರೇಯಾಂಕ, ಸೈಕಾ ಇಶಾಕ್, ಆಶಾ, ರೇಣುಕಾ, ಟಿಟಾಸ್ ಸಧು.