ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ : ಇಂದು ಕರ್ನಾಟಕ vs ಬರೋಡಾ ಕ್ವಾರ್ಟರ್‌ ಫೈನಲ್‌

KannadaprabhaNewsNetwork |  
Published : Jan 11, 2025, 12:48 AM ISTUpdated : Jan 11, 2025, 04:09 AM IST
ಕರ್ನಾಟಕ ಆಟಗಾರರು | Kannada Prabha

ಸಾರಾಂಶ

ಅಭೂತಪೂರ್ವ ಲಯದಲ್ಲಿರುವ ಮಯಾಂಕ್‌. ಬಲ ಹೆಚ್ಚಿಸಿದ ದೇವದತ್‌, ಪ್ರಸಿದ್ಧ್‌. ರಾಜ್ಯ ತಂಡ ಈ ಬಾರಿ ಅಭೂತಪೂರ್ವ ಪ್ರದರ್ಶನ ತೋರಿದ್ದು, ಗುಂಪು ಹಂತದಲ್ಲಿ ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಧಿಸಿದೆ.

ವಡೋದರಾ: ಈ ಬಾರಿ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಶನಿವಾರ ಆರಂಭಗೊಳ್ಳಲಿವೆ. 4 ಬಾರಿ ಚಾಂಪಿಯನ್‌ ಕರ್ನಾಟಕ ತಂಡಕ್ಕೆ ಬರೋಡಾ ಸವಾಲು ಎದುರಾಗಲಿದ್ದು, ಸತತ 3ನೇ ಬಾರಿ ಸೆಮಿಫೈನಲ್‌ ಪ್ರವೇಶಿಸುವ ಕಾತರದಲ್ಲಿದೆ. 

ಪಂದ್ಯಕ್ಕೆ ಇಲ್ಲಿನ ಮೋತಿಬಾಗ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ರಾಜ್ಯ ತಂಡ ಈ ಬಾರಿ ಅಭೂತಪೂರ್ವ ಪ್ರದರ್ಶನ ತೋರಿದ್ದು, ಗುಂಪು ಹಂತದಲ್ಲಿ ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಧಿಸಿ ನೇರವಾಗಿ ಕ್ವಾರ್ಟರ್‌ ಪ್ರವೇಶಿಸಿದೆ. ಮಯಾಂಕ್ ಮುಂಚೂಣಿಯಲ್ಲಿ ನಿಂತು ತಂಡವನ್ನು ನಾಕೌಟ್‌ ತಲುಪಿಸಿದ್ದಾರೆ. 

ಅವರು 7 ಪಂದ್ಯಗಳಲ್ಲಿ 4 ಶತಕ, 1 ಅರ್ಧಶತಕ ಒಳಗೊಂಡ 613 ರನ್‌ ಕಲೆಹಾಕಿ, ಟೂರ್ನಿಯ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಸಮರ್ಥ್‌ ಆರ್‌., ಅನೀಶ್‌ ಕೆ.ವಿ. ಕೂಡಾ ಮಿಂಚುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಬೇಕಿದೆ. ದೇವದತ್‌ ಪಡಿಕ್ಕಲ್‌ ತಂಡಕ್ಕೆ ಮರಳಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಬೌಲಿಂಗ್‌ ವಿಭಾಗದಲ್ಲಿ ಶ್ರೇಯಸ್‌ ಗೋಪಾಲ್‌, ಕೌಶಿಕ್‌ ಮೊನಚು ದಾಳಿ ಸಂಘಟಿಸುತ್ತಿದ್ದರೂ, ಇತರರಿಂದ ಸೂಕ್ತ ಬೆಂಬಲ ಸಿಗಬೇಕಿದೆ. ಪ್ರಸಿದ್ಧ್‌ ಕೃಷ್ಣ ಈ ಪಂದ್ಯದಲ್ಲಿ ಆಡಿದರೆ ಬೌಲಿಂಗ್‌ ಪಡೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಮತ್ತೊಂದೆಡೆ ಬರೋಡಾ ‘ಇ’ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ನೇರವಾಗಿ ಕ್ವಾರ್ಟರ್‌ ಪ್ರವೇಶಿಸಿದೆ.

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ । ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

05ನೇ ಪಂದ್ಯ: ಕರ್ನಾಟಕ ಹಾಗೂ ಬರೋಡಾ ಏಕದಿನದಲ್ಲಿ 5ನೇ ಬಾರಿ ಮುಖಾಮುಖಿಯಾಗುತ್ತಿವೆ. ಈ ವರೆಗಿನ 4 ಪಂದ್ಯಗಳಲ್ಲಿ ಇತ್ತಂಡಗಳು 2-2 ಗೆಲುವಿನ ದಾಖಲೆ ಹೊಂದಿವೆ.

ಕಳೆದೆರಡು ಬಾರಿಯೂ ಸೆಮೀಸ್‌ಗೇರಿದ್ದ ರಾಜ್ಯ

ಕರ್ನಾಟಕ ತಂಡ 2019-20ರಲ್ಲಿ ಕೊನೆ ಬಾರಿ ಚಾಂಪಿಯನ್‌ ಆಗಿತ್ತು. ಆ ಬಳಿಕ 4 ಆವೃತ್ತಿಗಳ ಪೈಕಿ 3ರಲ್ಲಿ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. 2020-21ರಲ್ಲಿ ಸೆಮೀಸ್‌ ತಲುಪಿದ್ದ ತಂಡ 2021-22ರಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಸೋತಿತ್ತು. 2022-23, 2023-24ರಲ್ಲಿ ಸೆಮಿಫೈನಲ್‌ನಲ್ಲೇ ಸೋತು ಹೊರಬಿದ್ದಿವೆ. 5 ವರ್ಷ ಬಳಿಕ ತಂಡ ಮತ್ತೆ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ.

ಮಹಾರಾಷ್ಟ್ರ ತಂಡಕ್ಕೆ ಪಂಜಾಬ್‌ ಸವಾಲು

ಶನಿವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಮಹಾರಾಷ್ಟ್ರ ಹಾಗೂ ಪಂಜಾಬ್‌ ಮುಖಾಮುಖಿಯಾಗಲಿವೆ. ಮಹಾರಾಷ್ಟ್ರ ‘ಬಿ’ ಗುಂಪಿನ 7 ಪಂದ್ಯಗಳಲ್ಲಿ 6ರಲ್ಲಿ ಜಯಗಳಿಸಿ ಅಗ್ರಸ್ಥಾನ ಪಡೆದಿತ್ತು. ಪಂಜಾಬ್‌ ‘ಸಿ’ ಗುಂಪಿನಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು 2ನೇ ಸ್ಥಾನಿಯಾಗಿದ್ದರೂ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಟೂರ್ನಿಯ ಮತ್ತೆರಡು ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಭಾನುವಾರ ನಿಗದಿಯಾಗಿವೆ.

PREV

Recommended Stories

ಇಂದಿನಿಂದ ದುಲೀಪ್‌ ಟ್ರೋಫಿ ಫೈನಲ್‌
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಭರ್ಜರಿ ಅಭ್ಯಾಸ