ಮತ್ತೆ ಮಯಾಂಕ್‌ ಶತಕ: ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್‌ಗೆ ಲಗ್ಗೆ

KannadaprabhaNewsNetwork |  
Published : Jan 06, 2025, 01:00 AM ISTUpdated : Jan 06, 2025, 03:59 AM IST
ಮಯಾಂಕ್‌ | Kannada Prabha

ಸಾರಾಂಶ

ನಾಗಲ್ಯಾಂಡ್‌ ವಿರುದ್ಧ 9 ವಿಕೆಟ್‌ ಜಯ. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ, ನೇರವಾಗಿ ಕ್ವಾರ್ಟರ್‌ಗೆ. ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಜ.11ಕ್ಕೆ ಬರೋಡಾ ವಿರುದ್ಧ ಸೆಣಸು.

ಅಹಮದಾಬಾದ್‌: ಈ ಬಾರಿ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ ರಾಜ್ಯ ತಂಡ ನಾಗಲ್ಯಾಂಡ್‌ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿತು. 

ಈ ಮೂಲಕ ‘ಸಿ’ ಗುಂಪಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 24 ಅಂಕ ಸಂಪಾದಿಸಿ ಅಗ್ರಸ್ಥಾನಿಯಾಯಿತು. 2ನೇ ಸ್ಥಾನಿಯಾದ ಪಂಜಾಬ್‌(24 ಅಂಕ) ಪ್ರಿ ಕ್ವಾರ್ಟರ್‌ ತಲುಪಿತು. ಮೊದಲು ಬ್ಯಾಟ್‌ ಮಾಡಿದ ನಾಗಲ್ಯಾಂಡ್‌ 48.3 ಓವರ್‌ಗಳಲ್ಲಿ 206 ರನ್‌ಗೆ ಆಲೌಟಾಯಿತು. ಚೇತನ್‌ ಬಿಸ್ತ್‌ 77, ನಾಯಕ ರೊಂಗ್ಸನ್ ಜೊನಾಥನ್‌ 51 ರನ್‌ ಸಿಡಿಸಿದರು. ರಾಜ್ಯದ ಪರ ಸ್ಪಿನ್ನರ್ ಶ್ರೇಯಸ್‌ ಗೋಪಾಲ್‌ 4, ಅಭಿಲಾಶ್‌ ಶೆಟ್ಟಿ 2 ವಿಕೆಟ್‌ ಕಿತ್ತರು.

ಸ್ಪರ್ಧಾತ್ಮಕ ಗುರಿಯನ್ನು ಕರ್ನಾಟಕ ತಂಡ 37.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಅಭೂತಪೂರ್ವ ಲಯದಲ್ಲಿರುವ ನಾಯಕ ಮಯಾಂಕ್‌ ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದರು. ಅವರು 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 116 ರನ್‌ ಸಿಡಿಸಿದರೆ, ಅನೀಶ್‌ ಕೆ.ವಿ. ಔಟಾಗದೆ 82 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.ಸ್ಕೋರ್‌: ನಾಗಲ್ಯಾಂಡ್‌ 48.3 ಓವರಲ್ಲಿ 206/10 (ಚೇತನ್‌ ಔಟಾಗದೆ 77, ಜೊನಾಥನ್‌ 51, ಶ್ರೇಯಸ್‌ 4-24), ಕರ್ನಾಟಕ 37.5 ಓವರಲ್ಲಿ 207/1 (ಮಯಂಕ್‌ ಔಟಾಗದೆ 116, ಅನೀಶ್‌ ಔಟಾಗದೆ 82, ಇಮ್ಲಿವಟಿ 1-38)

ಪಂದ್ಯಶ್ರೇಷ್ಠ: ಮಯಾಂಕ್‌ ಅಗರ್‌ವಾಲ್‌.

ರಾಜ್ಯಕ್ಕೆ ಕ್ವಾರ್ಟರಲ್ಲಿ ಬರೋಡಾ ಸವಾಲು

ಕರ್ನಾಟಕ ತಂಡ ಜ.11ರಂದು ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಬರೋಡಾ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ವಡೋದರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ‘ಇ’ ಗುಂಪಿನಲ್ಲಿದ್ದ ಬರೋಡಾ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು, 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ಜ.15, 16ಕ್ಕೆ ಸೆಮಿಫೈನಲ್‌, ಜ.18ಕ್ಕೆ ಫೈನಲ್‌ ನಡೆಯಲಿದೆ.

ವಿದರ್ಭ, ಗುಜರಾತ್‌ ಕ್ವಾರ್ಟರ್‌ಗೆ: ಮುಂಬೈ, ಉ.ಪ್ರದೇಶ ಹೊರಕ್ಕೆ

ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಅಗ್ರ ಸ್ಥಾನ ಪಡೆದ ತಂಡಗಳಾದ ಕರ್ನಾಟಕ, ವಿದರ್ಭ, ಗುಜರಾತ್‌, ಮಹಾರಾಷ್ಟ್ರ, ಬರೋಡಾ, 2ನೇ ಸ್ಥಾನಿ ಪಂಜಾಬ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದವು. ಇತರ 4 ಗುಂಪುಗಳಲ್ಲಿ 2ನೇ ಸ್ಥಾನ ಪಡೆದ ಬೆಂಗಾಲ್‌, ಹರ್ಯಾಣ, ರಾಜಸ್ಥಾನ, ತಮಿಳುನಾಡು ಪ್ರಿ ಕ್ವಾರ್ಟರ್‌ ಪ್ರವೇಶಿಸಿದವು. ಆದರೆ ಮುಂಬೈ, ಉತ್ತರ ಪ್ರದೇಶ ಸೇರಿ ಪ್ರಮುಖ ತಂಡಗಳು ಗುಂಪು ಹಂತದಲ್ಲೇ ಹೊರಬಿದ್ದವು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!