ನಾಗ್ಪುರ: ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಬಲವಾಗಿ ಕಾಡಿದ್ದ ವರುಣ್, 14 ವಿಕೆಟ್ ಕಬಳಿಸಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ, ಅವರನ್ನು ಏಕದಿನ ಸರಣಿಗೂ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಉಪನಾಯಕ ಶುಭ್‌ಮನ್ ಗಿಲ್ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು. ಬಳಿಕ ಬಿಸಿಸಿಐ ಅಧಿಕೃತ ಪ್ರಕಟಣೆ ಸಹ ನೀಡಿತು.
ವರುಣ್‌ರನ್ನು ಪ್ರಮುಖವಾಗಿ ಭಾರತೀಯ ಬ್ಯಾಟರ್‌ಗಳ ಅಭ್ಯಾಸಕ್ಕೆ ನೆರವಾಗಲು ತಂಡದಲ್ಲಿ ಉಳಿಸಿಕೊಳ್ಳಲು ಕೋಚ್ ಗೌತಮ್ ಗಂಭೀರ್ ನಿರ್ಧರಿಸಿದರು ಎನ್ನಲಾಗಿದೆ. ಈಗಾಗಲೇ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಇದ್ದಾರೆ. ಹೀಗಾಗಿ, ವರುಣ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಬೇಕಿದ್ದರೆ, ತಂಡದ ಆಡಳಿತ ಸಾಕಷ್ಟು ಲೆಕ್ಕಾಚಾರ ನಡೆಸಬೇಕಿದೆ.ಫೆ.19ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೂ ವರುಣ್‌ರನ್ನು ಆಯ್ಕೆ ಮಾಡಬಹುದು ಎನ್ನುವ ಚರ್ಚೆ ಶುರುವಾಗಿದ್ದು, ಫೆ.12ರೊಳಗೆ ಅಂತಿಮ ತಂಡವನ್ನು ಪ್ರಕಟಿಸಬೇಕಿದೆ.ಚಾಂಪಿಯನ್ಸ್ ಟ್ರೋಫಿಗೆ ಬೂಮ್ರಾ ಅನುಮಾನ?
ನವದೆಹಲಿ: ಭಾರತ ತಂಡದ ತಾರಾ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಇದೇ ತಿಂಗಳು 19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದ್ದಾರೆಯೇ ಇಲ್ಲವೇ ಎನ್ನುವ ಅನುಮಾನ ಶುರುವಾಗಿದೆ. ಮಂಗಳವಾರ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ, ತಂಡದ ಪಟ್ಟಿಯಿಂದ ಜಸ್‌ಪ್ರೀತ್ ಬೂಮ್ರಾ ಅವರ ಹೆಸರನ್ನು ಕೈಬಿಟ್ಟಿದೆ.ಕೆಲ ದಿನಗಳ ಹಿಂದೆ ಸರಣಿಗೆ ತಂಡ ಪ್ರಕಟಗೊಂಡಾಗ, ಬೂಮ್ರಾ 3ನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲೆರಡು ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ ಎಂದು ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ತಿಳಿಸಿದ್ದರು. ಆದರೆ, ಸದ್ಯ 3ನೇ ಏಕದಿನ ಪಂದ್ಯದಿಂದಲೂ ಬೂಮ್ರಾ ಹೊರಬಿದ್ದಿದ್ದು, ಅವರು ಚಾಂಪಿಯನ್ಸ್ ಟ್ರೋಫಿ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.ಬೆನ್ನು ನೋವಿನಿಂದ ಬಳಲುತ್ತಿರುವ ಬೂಮ್ರಾ, ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲ ಪಾಲ್ಗೊಂಡಿದ್ದಾರೆ.