ವಿಶ್ವ ನಂ.1 ಕಾರ್ಲ್‌ಸನ್‌ ವಿರುದ್ಧ ಗೆದ್ದ ವಿಶ್ವ ಚಾಂಪಿಯನ್‌ ಗುಕೇಶ್‌

Sujatha NR | Published : Jun 3, 2025 5:22 AM

ವಿಶ್ವ ನಂ.1 ಚೆಸ್‌ ಪಟು ಮಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಹಾಲಿ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ ಸೇಡು ತೀರಿಸಿಕೊಂಡಿದ್ದಾರೆ

 ಸ್ಟ್ಯಾವಂಜರ್‌(ನಾರ್ವೆ): ವಿಶ್ವ ನಂ.1 ಚೆಸ್‌ ಪಟು ಮಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಹಾಲಿ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ ಸೇಡು ತೀರಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ನಾರ್ವೆ ಚೆಸ್‌ ಟೂರ್ನಿಯ 6ನೇ ಸುತ್ತಿನ ಮುಖಾಮುಖಿಯಲ್ಲಿ ಗುಕೇಶ್‌ ಗೆಲುವು ಸಾಧಿಸಿದರು. ಕ್ಲಾಸಿಕಲ್‌ ಚೆಸ್‌ನಲ್ಲಿ ಗುಕೇಶ್‌ಗೆ ಇದು ಕಾರ್ಲ್‌ಸನ್‌ ವಿರುದ್ಧ ಮೊದಲ ಗೆಲುವು.

4 ಗಂಟೆಗಳ ಕಾಲ ನಡೆದ ಪಂದ್ಯದ ಬಹುತೇಕ ಸಮಯ ನಾರ್ವೆಯ ಕಾರ್ಲ್‌ಸನ್‌ ಮುನ್ನಡೆಯಲ್ಲಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಮಾಡಿದ ಎಡವಟ್ಟು ಕಾರ್ಲ್‌ಸನ್‌ರನ್ನು ಸೋಲಿಸಿತು. ಸದ್ಯ ಗುಕೇಶ್‌ 8.5 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದ್ದಾರೆ. ಕಾರ್ಲ್‌ಸನ್‌ ಹಾಗೂ ಫ್ಯಾಬಿಯಾನೊ ಕರುನಾ ತಲಾ 9.5 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಹಿಕರು ನಕಮುರಾ ವಿರುದ್ಧ ಟೈ ಸಾಧಿಸಿದ ಅರ್ಜುನ್‌ ಎರಿಗೈಸಿ, 7.5 ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ವೈಶಾಲಿಗೆ ಜಯ: ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಭಾರತದವರೇ ಆದ ಆರ್‌.ವೈಶಾಲಿ ವಿರುದ್ಧ ಸೋಲನುಭವಿಸಿತು. ಸದ್ಯ ಕೊನೆರು 9.5 ಅಂಕದೊಂದಿಗೆ 2ನೇ ಸ್ಥಾನ, ವೈಶಾಲಿ(8 ಅಂಕ) 4ನೇ ಸ್ಥಾನದಲ್ಲಿದ್ದಾರೆ.

Read more Articles on