ಆರ್‌ಸಿಬಿಗೆ ಸಿಗುತ್ತಾ ಈ ಸಲ ಕಪ್‌ ? ಇಂದು 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಹಣಾಹಣಿ

Published : Jun 03, 2025, 05:20 AM IST
RCB vs PBKS Final

ಸಾರಾಂಶ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಪಂಜಾಬ್‌ ಕಿಂಗ್ಸ್: ಚೊಚ್ಚಲ ಕಪ್‌ ಗೆಲ್ಲಲು ಅಹ್ಮದಾಬಾದ್‌ನಲ್ಲಿ 2 ತಂಡಗಳ ಕಾದಾಟ

ಅಹಮದಾಬಾದ್‌: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಈ ಬಾರಿ ಚುಟುಕು ಕ್ರಿಕೆಟ್‌ ಲೀಗ್‌ನ ಕಿರೀಟ ತೊಡುವವರು ಯಾರು ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಸೆಣಸಾಡಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿರುವ ರಜತ್‌ ಪಾಟೀದಾರ್‌ ನಾಯಕತ್ವದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿತ್ತು. ಕ್ವಾಲಿಫೈಯರ್‌-1ರಲ್ಲಿ ಪಂಜಾಬ್‌ ವಿರುದ್ಧವೇ ಗೆದ್ದು ನೇರವಾಗಿ ಫೈನಲ್‌ಗೇರಿತ್ತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಪಂಜಾಬ್‌, ಆರ್‌ಸಿಬಿ ವಿರುದ್ಧ ಸೋಲಿನ ಬಳಿಕ ಕ್ವಾಲಿಫೈಯರ್‌-2ರಲ್ಲಿ ಮುಂಬೈನ ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ರೋಚಕ ಪೈಪೋಟಿ: ಟೂರ್ನಿಯ ಪ್ರದರ್ಶನ ಗಮನಿಸಿದರೆ ಎರಡೂ ತಂಡಗಳು ಬಲಿಷ್ಠ. ಆದರೆ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತವಾಗಿ ಆಡುತ್ತಿರುವುದು ಆರ್‌ಸಿಬಿಯ ಪ್ಲಸ್‌ ಪಾಯಿಂಟ್‌ ಆಗಿದ್ದರೆ, ಪಂಜಾಬ್‌ನ ಸಾಮರ್ಥ್ಯ ಬಲಿಷ್ಠ ಬ್ಯಾಟಿಂಗ್‌. ಹೀಗಾಗಿ ಫೈನಲ್‌ನಲ್ಲೂ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.

ಆರ್‌ಸಿಬಿ ಎಲ್ಲಾ ವರ್ಷ ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಆಡುತ್ತಿತ್ತು. ಆದರೆ ಈ ಬಾರಿ ಪ್ರತಿಯೊರ್ವ ಆಟಗಾರರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ವಿರಾಟ್‌ ಕೊಹ್ಲಿ(614 ರನ್‌) ತಮ್ಮ ಅಭೂತಪೂರ್ವ ಆಟವನ್ನು ಫೈನಲ್‌ನಲ್ಲಿ ಪ್ರದರ್ಶಿಸಬೇಕಿದ್ದು, ಫಿಲ್‌ ಸಾಲ್ಟ್‌(387) ಅಬ್ಬರ ತಂಡದ ಪ್ಲಸ್ ಪಾಯಿಂಟ್‌. ಕನ್ನಡಿಗ ಮಯಾಂಕ್‌ ಅಗರ್‌ವಾಲ್‌, ಜಿತೇಶ್‌ ಶರ್ಮಾ ನಿರ್ಣಾಯಕ ಘಟ್ಟದಲ್ಲಿ ಸ್ಫೋಟಕ ಆಟದ ಮೂಲಕ ಗಮನಸೆಳೆದಿದ್ದು, ಫೈನಲ್‌ನಲ್ಲೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಗಾಯಾಳು ಟಿಮ್‌ ಡೇವಿಡ್‌ ಫೈನಲ್‌ಗೆ ಲಭ್ಯವಿರುವ ಬಗ್ಗೆ ಮಾಹಿತಿಯಿಲ್ಲ. ರೊಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ ಆಲ್ರೌಂಡ್‌ ಆಟ ತಂಡಕ್ಕೆ ನಿರ್ಣಾಯಕ.

ಬೌಲಿಂಗ್‌ ಬಲ: ಆರ್‌ಸಿಬಿಯ ಈ ಬಾರಿ ಯಶಸ್ಸಿಗೆ ಕಾರಣ ಬಲಿಷ್ಠ ಬೌಲಿಂಗ್‌ ಪಡೆ. ಜೋಶ್‌ ಹೇಜಲ್‌ವುಡ್‌(21 ವಿಕೆಟ್‌) ಎದುರಾಳಿಗಳ ನಿದ್ದೆಗೆಡಿಸಿದ್ದು, ಭುವನೇಶ್ವರ್‌(15), ಕೃನಾಲ್‌ ಪಾಂಡ್ಯ(15), ಯಶ್‌ ದಯಾಳ್‌(12), ಸುಯಶ್‌ ಶರ್ಮಾ(8) ಸಂಘಟಿತ ದಾಳಿ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಶ್ರೇಯಸ್‌ ಅಯ್ಯರ್‌ ಪಡೆ ತನ್ನ ಬ್ಯಾಟಿಂಗ್‌ ವಿಭಾಗದ ಮೇಲೆ ಹೆಚ್ಚಿನ ನಂಬಿಕೆ ಇರಿಸಿದೆ. ಮುಂಬೈ ವಿರುದ್ಧ ಕ್ವಾಲಿಫೈಯರ್‌-2ರಲ್ಲಿ ಶ್ರೇಯಸ್‌ರಿಂದ ಮೂಡಿಬಂದ ಆಟ, ಆರ್‌ಸಿಬಿ ಬೌಲರ್‌ಗಳ ನಿದ್ದೆಗೆಡಿಸುವಂತಿತ್ತು. ಉಳಿದಂತೆ ಪ್ರಭ್‌ಸಿಮ್ರನ್‌, ಪ್ರಿಯಾನ್ಶ್‌ ಆರ್ಯ, ಜೋಶ್‌ ಇಂಗ್ಲಿಸ್‌, ನೇಹಲ್‌ ವಧೇರಾ, ಮಾರ್ಕಸ್‌ ಸ್ಟೋಯ್ನಿಸ್ ಕೂಡಾ ಅಬ್ಬರಿಸುತ್ತಿದ್ದಾರೆ. ಗಾಯಗೊಂಡಿದ್ದ ಚಹಲ್‌ ಲಯಕ್ಕೆ ಮರಳಲು ಪರದಾಡುತ್ತಿದ್ದು, ಅರ್ಶ್‌ದೀಪ್‌, ಕೈಲ್‌ ಜೇಮಿಸನ್‌, ಕನ್ನಡಿಗ ವೈಶಾಖ್‌ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.

ಒಟ್ಟು ಮುಖಾಮುಖಿ: 36

ಆರ್‌ಸಿಬಿ: 18

ಪಂಜಾಬ್‌: 18

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ಕೊಹ್ಲಿ, ಮಯಾಂಕ್‌, ರಜತ್‌(ನಾಯಕ), ಲಿವಿಂಗ್‌ಸ್ಟೋನ್‌/ಡೇವಿಡ್‌, ಜಿತೇಶ್‌, ಶೆಫರ್ಡ್‌, ಕೃನಾಲ್‌, ಭುವನೇಶ್ವರ್‌, ಯಶ್‌, ಹೇಜಲ್‌ವುಡ್‌, ಸುಯಶ್‌.

ಪಂಜಾಬ್‌: ಪ್ರಿಯಾನ್ಸ್‌, ಪ್ರಭ್‌ಸಿಮ್ರನ್‌, ಜೋಶ್‌ ಇಂಗ್ಲಿಸ್‌, ಶ್ರೇಯಸ್‌(ನಾಯಕ), ನೇಹಲ್‌, ಸ್ಟೋಯ್ನಿಸ್‌, ಶಶಾಂಕ್‌, ಅಜ್ಮತುಲ್ಲಾ, ಜೇಮಿಸನ್‌, ವೈಶಾಖ್‌, ಅರ್ಶ್‌ದೀಪ್‌, ಚಹಲ್‌.

ಪಿಚ್ ರಿಪೋರ್ಟ್‌

ಅಹಮದಾಬಾದ್‌ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಫೈನಲ್‌ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 200+ ರನ್‌ ದಾಖಲಾಗಿವೆ.

ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ

ಭಾನುವಾರದ ಕ್ವಾಲಿಫೈಯರ್‌-2 ಪಂದ್ಯ ಮಳೆಯಿಂದ 2.15 ಗಂಟೆ ತಡವಾಗಿ ಆರಂಭಗೊಂಡಿತ್ತು. ಮಂಗಳವಾರ ಅಹಮದಾಬಾದ್‌ನಲ್ಲೇ ಫೈನಲ್‌ ನಡೆಯಲಿದ್ದು, ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್‌ಗೆ 2 ಗಂಟೆ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದ್ದರೂ, ಮಳೆಯಿಂದ ಮಂಗಳವಾರ ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಿಕೆಯಾಗಲಿದೆ. 2023ರಲ್ಲೂ ಮೀಸಲು ದಿನದಂದು ಫೈನಲ್‌ ನಡೆದಿತ್ತು.

9 ವರ್ಷ ಬಳಿಕ ಫೈನಲ್‌  ಆಡುತ್ತಿರುವ ಆರ್‌ಸಿಬಿ

ಆರ್‌ಸಿಬಿ ತಂಡ 4ನೇ ಬಾರಿ ಫೈನಲ್‌ನಲ್ಲಿ ಆಡಲಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್‌ಗೇರಿದ್ದರೂ ಸೋತಿದ್ದ ತಂಡ, 9 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಮತ್ತೊಂದೆಡೆ ಪಂಜಾಬ್‌ 2014ರಲ್ಲಿ ಮೊದಲ ಬಾರಿ ಫೈನಲ್‌ಗೇರಿತ್ತು. 2ನೇ ಪ್ರಯತ್ನದಲ್ಲಿ ತಂಡ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

2 ತಂಡಗಳ ಫೈನಲ್‌ ಹಾದಿ

ಆರ್‌ಸಿಬಿ

ಲೀಗ್‌ ಹಂತ: 14 ಪಂದ್ಯಗಳ ಪೈಕಿ 9 ಗೆಲುವು

4 ಪಂದ್ಯದಲ್ಲಿ ಸೋಲು: 1 ಪಂದ್ಯ ಮಳೆಗೆ ರದ್ದು

19 ಅಂಕದೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ

ಕ್ವಾಲಿಫೈಯರ್‌-1ರಲ್ಲಿ ಪಂಜಾಬ್‌ನ ಸೋಲಿಸಿ ಫೈನಲ್‌ಗೆ

ಪಂಜಾಬ್‌

ಲೀಗ್‌ ಹಂತದಲ್ಲಿ 14 ಪಂದ್ಯಗಳಲ್ಲಿ 9ರಲ್ಲಿ ಜಯಭೇರಿ

19 ಅಂಕ, ಉತ್ತಮ ನೆಟ್‌ ರನ್‌ರೇಟ್‌ನಿಂದ ಅಗ್ರಸ್ಥಾನ

ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ವಿರುದ್ಧ ಸೋಲು

ಕ್ವಾಲಿಫೈಯರ್‌-2ರಲ್ಲಿ ಮುಂಬೈನ ಸೋಲಿಸಿ ಫೈನಲ್‌ಗೆ

04ನೇ ಬಾರಿ

ಆರ್‌ಸಿಬಿ-ಪಂಜಾಬ್‌ ಈ ವರ್ಷ 4ನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್‌ ಹಂತದಲ್ಲಿ ಉಭಯ ತಂಡಗಳು ತಲಾ 1ರಲ್ಲಿ ಗೆದ್ದಿದ್ದರೆ, ಪ್ಲೇ-ಆಫ್‌ನಲ್ಲಿ ಆರ್‌ಸಿಬಿ ಗೆದ್ದಿತ್ತು.

02 ಗೆಲುವು

ಪಂಜಾಬ್‌ ತಂಡ ಈ ವರ್ಷ ಅಹಮದಾಬಾದ್‌ನಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆದ್ದಿದೆ. ಲೀಗ್‌ ಹಂತದಲ್ಲಿ ಗುಜರಾತ್‌, ಕ್ವಾಲಿಫೈಯರ್‌-2ರಲ್ಲಿ ಮುಂಬೈನ ಸೋಲಿಸಿದೆ.

₹20 ಕೋಟಿ

ಚಾಂಪಿಯನ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತ.

₹13 ಕೋಟಿ

ರನ್ನರ್‌-ಅಪ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತ.

ಫೈನಲ್‌ನಲ್ಲಿ 5 ಕನ್ನಡಿಗರು

ಈ ಬಾರಿ ಐಪಿಎಲ್‌ ಫೈನಲ್‌ನಲ್ಲಿ ಐವರು ಕನ್ನಡಿಗರು ಇದ್ದಾರೆ. ಆರ್‌ಸಿಬಿ ತಂಡವನ್ನು ಮಯಾಂಕ್‌ ಅಗರ್‌ವಾಲ್‌, ಮನೋಜ್ ಭಾಂಡ್ಗೆ, ಪಂಜಾಗ್‌ ತಂಡದಲ್ಲಿ ವೈಶಾಖ್‌, ಪ್ರವೀಣ್‌ ದುಬೆ ಪ್ರತಿನಿಧಿಸಲಿದ್ದಾರೆ. ಪಂಜಾಬ್‌ ಸ್ಪಿನ್‌ ಕೋಚ್‌ ಸುನಿಲ್‌ ಜೋಶಿ ಕೂಡಾ ಕನ್ನಡಿಗ.

15 ತಿಂಗಳಲ್ಲಿ ಶ್ರೇಯಸ್‌ಗೆ

6ನೇ ಟ್ರೋಫಿ ಗೆಲ್ಲುವ ಗುರಿ!

2023ರ ಏಕದಿನ ವಿಶ್ವಕಪ್‌ ಬಳಿಕ ಭಾರತ ತಂಡದಿಂದ ಹೊರಬಿದ್ದು, ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲೂ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದ ಶ್ರೇಯಸ್‌ ಅಯ್ಯರ್‌, ಕಳೆದ ಒಂದೂವರೆ ವರ್ಷದಿಂದ ಮುಟ್ಟಿದ್ದೆಲ್ಲವೂ ಚಿನ್ನ. ಕಳೆದ ವರ್ಷ ಮುಂಬೈ ಪರ ರಣಜಿ ಟ್ರೋಫಿ ಗೆದ್ದಿದ್ದ ಶ್ರೇಯಸ್‌, ಬಳಿಕ ತಮ್ಮದೇ ನಾಯಕತ್ವದಲ್ಲಿ ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಶ್ರೇಯಸ್‌, ಇರಾನಿ ಕಪ್‌ ಮುಂಬೈ ತಂಡದಲ್ಲಿದ್ದರು. ಇತ್ತೀಚೆಗೆ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗ ಶ್ರೇಯಸ್‌ ತಂಡದ ಪ್ರಮುಖ ಭಾಗವಾಗಿದ್ದರು. ಅವರು 15 ತಿಂಗಳುಗಳಲ್ಲಿ 6ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ.

ಮತ್ತೆ ಟಿ20 ಫೈನಲ್‌ನಲ್ಲಿ

ರಜತ್ vs ಅಯ್ಯರ್‌ ತಂಡ!

ಸತತ 2ನೇ ವರ್ಷ ಟಿ20 ಫೈನಲ್‌ನಲ್ಲಿ ರಜತ್‌ vs ಶ್ರೇಯಸ್‌ ನಾಯಕತ್ವದ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ ಮುಷ್ತಾಕ್‌ ಅಲಿ ಟಿ20 ಫೈನಲ್‌ನಲ್ಲಿ ಶ್ರೇಯಸ್‌ ಮುಂಬೈಗೆ, ರಜತ್‌ ಮಧ್ಯಪ್ರದೇಶಕ್ಕೆ ನಾಯಕತ್ವ ವಹಿಸಿದ್ದರು. ಮುಂಬೈ ಚಾಂಪಿಯನ್‌ ಆಗಿತ್ತು.

ಅದ್ಧೂರಿ ಸಮಾರೋಪ ಸಮಾರಂಭ

ಫೈನಲ್‌ಗೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್‌ ಮಹದೇವನ್‌ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ.

ಸಿಗುತ್ತಾ ಕೊಹ್ಲಿಯ 18 ವರ್ಷದ ತಪಸ್ಸಿಗೆ ಫಲ?

ಕಿಂಗ್‌ ಎಂದೇ ಕರೆಸಿಕೊಳ್ಳುವ ವಿರಾಟ್‌ ಕೊಹ್ಲಿ ಕಳೆದ 18 ವರ್ಷಗಳಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. 3 ಬಾರಿ ಫೈನಲ್‌ಗೇರಿದ್ದರೂ ಕೊಹ್ಲಿಗೆ ಕಪ್‌ ಗೆಲ್ಲುವ ಅದೃಷ್ಟ ಒಲಿದಿರಲಿಲ್ಲ. ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ಸಾಧ್ಯವಾಗದಿದ್ದರೂ, ಆಟಗಾರನಾಗಿ ಆರ್‌ಸಿಬಿಗೆ ಕಪ್‌ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಅವರ 18 ವರ್ಷಗಳ ತಪಸ್ಸಿಗೆ ಈ ಬಾರಿ ಫಲ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ