ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ : ಗುಕೇಶ್‌ - ಲಿರೆನ್‌ 13ನೇ ಗೇಮ್‌ ಡ್ರಾ - ಇಂದೂ ಡ್ರಾಗೊಂಡರೆ ಟೈ ಬ್ರೇಕರ್‌!

KannadaprabhaNewsNetwork | Updated : Dec 12 2024, 04:17 AM IST

ಸಾರಾಂಶ

ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌. ಇನ್ನೊಂದೇ ಸುತ್ತು ಬಾಕಿ. 13 ಸುತ್ತುಗಳ ಬಳಿಕ ಅಂಕಗಳು 6.5-6.5ರಲ್ಲಿ ಸಮಬಲ. ಬುಧವಾರದ ಪಂದ್ಯ 68 ನಡೆಗಳ ಬಳಿಕ ಡ್ರಾದಲ್ಲಿ ಅಂತ್ಯಗೊಂಡಿತು.

ಸಿಂಗಾಪುರ: ಭಾರಿ ಪೈಪೋಟಿ ಕಂಡುಬಂದಿದ್ದ 13ನೇ ಸುತ್ತಿನ ಪಂದ್ಯ ಕೂಡಾ ಡ್ರಾಗೊಳ್ಳುವುದರೊಂದಿಗೆ, ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಹಾಗೂ ಚೀನಾದ ಡಿಂಗ್‌ ಲಿರೆನ್‌ ನಡುವಿನ ಈ ಬಾರಿಯ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಫೈನಲ್ ಟೈ ಬ್ರೇಕರ್‌ಗೆ ಹೋಗುವ ಸಾಧ್ಯತೆ ಹೆಚ್ಚಳವಾಗಿದೆ.

ಬುಧವಾರದ ಪಂದ್ಯ 68 ನಡೆಗಳ ಬಳಿಕ ಡ್ರಾದಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ಇಬ್ಬರ ಅಂಕಗಳು 6.5-6.5ರಲ್ಲಿ ಸಮಬಲಗೊಂಡಿವೆ. ಗುರುವಾರ ಕೊನೆ ಹಾಗೂ 14ನೇ ಸುತ್ತಿನ ಪಂದ್ಯ ನಡೆಯಬೇಕಿದೆ. ಇದರಲ್ಲಿ ಗೆದ್ದವರು ವಿಶ್ವ ಚಾಂಪಿಯನ್‌ ಎನಿಸಿಕೊಳ್ಳಲಿದ್ದಾರೆ. ಒಂದು ವೇಳೆ ಈ ಗೇಮ್‌ ಕೂಡಾ ಡ್ರಾಗೊಂಡರೆ ಫೈನಲ್‌ ಪಂದ್ಯ ಟೈ ಬ್ರೇಕರ್‌ಗೆ ಹೋಗುತ್ತದೆ. ಶನಿವಾರ ಟೈ ಬ್ರೇಕರ್‌ ನಿಗದಿಯಾಗಿದೆ.1 ಮತ್ತು 12ನೇ ಸುತ್ತಿನಲ್ಲಿ ಲಿರೆನ್‌ ಗೆದ್ದಿದ್ದರೆ, 3 ಮತ್ತು 11ನೇ ಗೇಮ್‌ನಲ್ಲಿ ಗುಕೇಶ್‌ ಜಯಗಳಿಸಿದ್ದಾರೆ. ಉಳಿದ 9 ಸುತ್ತುಗಳು ಡ್ರಾಗೊಂಡಿವೆ.

ಮೈದಾನಕ್ಕೆ ಶುದ್ಧ ನೀರು ಬಳಸಿದ್ದಕ್ಕೆ ಕೆಎಸ್‌ಸಿಎಗೆ ಕಾರಣ ಕೇಳಿದ ಎನ್‌ಜಿಟಿ

ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಶುದ್ಧ ನೀರು ಬಳಸಿದ್ದಕ್ಕೆ ಕಾರಣ ಕೊಡಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಸೂಚನೆ ನೀಡಿದೆ.ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನೀರಿಗೆ ತೀವ್ರ ಬರ ಇದ್ದಾಗ ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣಕ್ಕೆ ಸುಮಾರು 75000 ಲೀಟರ್‌ ನೀರು ಬಳಸಲಾಗಿತ್ತು. 

ಈ ಬಗ್ಗೆ ಉತ್ತರ ನೀಡಲು ಏಪ್ರಿಲ್‌ನಲ್ಲಿ ಕೆಎಸ್‌ಸಿಎಗೆ ಎನ್‌ಜಿಟಿ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ್ದ ಕೆಎಸ್‌ಸಿಎ, ಬೋರ್‌ವೆಲ್‌ ನೀರನ್ನು ಮೈದಾನಕ್ಕೆ ಬಳಸಿದ್ದಾಗಿ ತಿಳಿಸಿತ್ತು. ನ.26ರ ತನ್ನ ಆದೇಶದಲ್ಲಿ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಅವರ ಪೀಠವು, ಶುದ್ಧ ನೀರು ಬಳಸಿದ್ದಕ್ಕೆ ಉತ್ತರ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿಕೆ ಮಾಡಿದೆ.

Share this article