ಕನ್ನಡಪ್ರಭ ವಾರ್ತೆ ಬೆಂಗಳೂರು
ಬಹುನಿರೀಕ್ಷಿತ 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ಲಭಿಸಿತು.
ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಿಸಿದ ಬಿಸಿಸಿಐ, ನೆರೆದಿದ್ದ ಅಪಾರ ಪ್ರಮಾಣದ ಕ್ರೀಡಾಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿತು.
ಸಂಜೆ 6.30ಕ್ಕೆ ಆರಂಭಗೊಂಡ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಟ್ ನಟರಾದ ಶಾರುಖ್ ಖಾನ್, ಟೈಗರ್ ಶ್ರಾಫ್, ಶಾಹಿದ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಆರ್ಯನ್ ಕಾರ್ತಿಕ್, ವರುಣ್ ಧವನ್ ತಮ್ಮ ಅತ್ಯಾಕರ್ಷಕ ನೃತ್ಯದ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಎಲ್ಲಾ 5 ತಂಡಗಳ ನಾಯಕಿಯರ ಜೊತೆಗೆ ಶಾರುಖ್ ಖಾನ್ ತಮ್ಮದೇ ಶೈಲಿಯಲ್ಲಿ ಪೋಸ್ ಕೊಟ್ಟಿದ್ದು ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಸಮಾರಂಭದ ವೇಳೆ ಆಕರ್ಷಣೀಯ ಬಣ್ಣಬಣ್ಣದ ಬೆಳಕಿನ ಚಿತ್ತಾರ, ಸಿಡಿ ಮದ್ದು ಪ್ರದರ್ಶನವೂ ಅಭಿಮಾನಿಗಳ ಮನಸೂರೆಗೊಳಿಸಿತು. 5 ತಂಡಗಳ ನಾಯಕಿಯರು ವಿಶೇಷ ವಾಹನದಲ್ಲಿ ಮೈದಾನಕ್ಕೆ ಆಗಮಿಸಿದರು.
ಇಂದು ಆರ್‌ಸಿಬಿ vs ಯುಪಿ
ಕಳೆದ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಆರ್‌ಸಿಬಿ ಈ ಬಾರಿ ಶನಿವಾರ ಯುಪಿ ವಾರಿಯರ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಯುಪಿ ತಂಡವನ್ನು ಅಲೀಸಾ ಹೀಲಿ ಮುನ್ನಡೆಸಲಿದ್ದಾರೆ.
ಮುಂಬೈಗೆ ರೋಚಕ ಜಯ
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ರೋಚಕ ಗೆಲುವು ಸಾಧಿಸಿದೆ.
ಕಳೆದ ಬಾರಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈಗೆ 4 ವಿಕೆಟ್ ಜಯ ಸಿಕ್ಕಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ, ಅಲೈಸ್ ಕ್ಯಾಪ್ಸಿ(75 ರನ್) ಹೋರಾಟದಿಂದಾಗಿ 5 ವಿಕೆಟ್‌ಗೆ 171 ರನ್ ಕಲೆಹಾಕಿತು.
ದೊಡ್ಡ ಮೊತ್ತ ಬೆನ್ನತ್ತಿದ ಮುಂಬೈ 6 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಕೊನೆ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಜೀವನ್ ಸಜನಾ ಸಿಕ್ಸರ್ ಸಿಡಿಸಿ ಮುಂಬೈಗೆ ಗೆಲುವು ತಂದುಕೊಟ್ಟರು.