;Resize=(412,232))
ಬೆಂಗಳೂರು : ದುಬೈನಲ್ಲೂ ಕನ್ನಡ ಕಲಿಸುತ್ತಿರುವ ‘ಕನ್ನಡ ಪಾಠಶಾಲೆ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಿಸಿದ್ದಾರೆ. ಈ ಕನ್ನಡ ಪಾಠಶಾಲೆ ಆರಂಭವಾಗಿದ್ದು 2014ರಲ್ಲಿ. ಅಂದಿನಿಂದ ಇದು ಅಲ್ಲಿ ಕನ್ನಡ ಕಾಯಕ ಮಾಡುತ್ತಿದೆ.
2014ರಲ್ಲಿ ದುಬೈನಲ್ಲಿದ್ದ ಪರ್ವ ಗ್ರೂಪ್ ಉದ್ಯಮಿ, ಕನ್ನಡಿಗ ಉದ್ಯಮಿ ಶಶಿಧರ ನಾಗರಾಜಪ್ಪ ಹಾಗೂ ಸ್ನೇಹಿತರು, ‘ಅಲ್ಲಿನ ಕರ್ನಾಟಕ ಮೂಲದ ಮಕ್ಕಳಿಗೆ ಮಾತೃಭಾಷೆ ಕನ್ನಡದ ಜ್ಞಾನದ ಕೊರತೆ ಇದೆ. ಇದು ದುಃಖಕರ ವಿಚಾರ. ಕನ್ನಡ ನಮ್ಮ ಭಾಷೆಯಷ್ಟೇ ಅಲ್ಲ, ಸಂಸ್ಕೃತಿ ಕೂಡ. ಅದನ್ನು ಉಳಿಸಬೇಕು’ ಎಂದು ಚರ್ಚಿಸುತ್ತಿದ್ದರು. ಈ ವೇಳೆ ಹೊಳೆದಿದ್ದೇ ಕನ್ನಡ ಪಾಠಶಾಲೆಯ ಕಲ್ಪನೆ.
ಶಶಿಧರ್ ಹಾಗೂ ಅವರ 50 ಸ್ನೇಹಿತರ ದುಬೈ ಕನ್ನಡಿಗ ಮಕ್ಕಳನ್ನು ಕೂರಿಸಿಕೊಂಡು ಶಾಲೆ ಆರಂಭಿಸಲಾಯಿತು. ಮಕ್ಕಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಸಾಧ್ಯವಾಗುವಂತೆ ತರಬೇತಿ ಆರಂಭಿಸಲಾಯಿತು. 12 ವರ್ಷಗಳ ಹಿಂದೆ 45 ಮಕ್ಕಳೊಂದಿಗೆ ಶುರುವಾದ ದುಬೈ ಕನ್ನಡ ಪಾಠಶಾಲೆಯಲ್ಲೀಗ 1258 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಆಫ್ ಲೈನ್ ತರಗತಿಗಳೊಂದಿಗೆ ಶುರುವಾದ ಈ ಶಾಲೆಯು ಕೋವಿಡ್ ಅವಧಿಯಲ್ಲಿ ಆನ್‌ಲೈನ್ ರೂಪ ಪಡೆದುಕೊಂಡಿತು. ಪ್ರಸ್ತುತ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೂಪದಲ್ಲಿ ಕನ್ನಡಪಾಠಶಾಲೆಯು ಅರಬ್ ರಾಷ್ಟ್ರಗಳಾದ್ಯಂತ ವಿದ್ಯಾರ್ಥಿಗಳನ್ನು ಹೊಂದಿದೆ.
ಇಲ್ಲಿ ಕನ್ನಡ ಕಲಿಸಲು ಅಗತ್ಯ ಪಠ್ಯಕ್ರಮವನ್ನೂ ಕೂಡ ವಿನ್ಯಾಸಗೊಳಿಸಿದೆ. ಸಂಖ್ಯೆ, ಪದಗಳು, ವಾಕ್ಯ ರಚನೆ, ವ್ಯಾಕರಣ, ಪ್ರಬಂಧ, ಪತ್ರ ಬರೆಯುವಿಕೆ ಮೊದಲಾದವನ್ನು ಕಲಿಸಲಾಗುತ್ತದೆ. ನಂತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಶಶಿಧರ್ ನಾಗರಾಜಪ್ಪ ಅಧ್ಯಕ್ಷತೆಯ ದುಬೈ ಕನ್ನಡಶಾಲೆಯ ಶ್ರೇಯಸ್ಸಿಗೆ ಒಂದು ಸಮಾನ ಮನಸ್ಕ ತಂಡ ಜೊತೆಯಾಗಿದೆ. ಉಪಾಧ್ಯಕ್ಷ ಸಿದ್ದಲಿಂಗೇಶ್, ಮುಖ್ಯ ಶಿಕ್ಷಕಿ ರೂಪಾ ಶಶಿಧರ್, ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಖಜಾಂಚಿ ನಾಗರಾಜ ರಾವ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ ತಂಡದ ಮುಂಚೂಣಿಯಲ್ಲಿದ್ದಾರೆ. ದುಬೈ ಕನ್ನಡಿಗರಾದ ಪ್ರವೀಣ್ ಶೆಟ್ಟಿ, ಮೋಹನ್ ನರಸಿಂಹಮೂರ್ತಿ, ಮೊಹ್ಮದ್ ಮೂಳೂರು, ಡಾ. ಫ್ರಾಂಕ್ ಫರ್ನಾಂಡೀಸ್ ಅವರು ಸರ್ವ ರೀತಿಯಲ್ಲೂ ಬೆಂಬಲಿಸಿದ್ದಾರೆ.