ಅಮೆರಿಕ ಮೇಲಿನ ಸೆ.11 ದಾಳಿಗೆ 25 ವರ್ಷ

Published : Sep 11, 2026, 11:55 AM IST
9/11

ಸಾರಾಂಶ

ಅದು ಸೆಪ್ಟೆಂಬರ್‌ 11, 2001. ಅಮೆರಿಕನ್ನರು ಆಗಷ್ಟೇ ಬೆಚ್ಚಗಿನ ನಿದ್ದೆಯಿಂದ ಎದ್ದೇಳುತ್ತಿದ್ದರು. ಅಷ್ಟರಲ್ಲಾಗಲೇ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ (ವರ್ಲ್ಡ್‌ ಟ್ರೇಡ್‌ ಸೆಂಟರ್‌) ಅವಳಿ ಗೋಪುರಗಳ (ಟ್ವಿನ್‌ ಟವರ್‌) ಮೇಲೆ ವೈಮಾನಿಕ ದಾಳಿ ನಡೆದಿತ್ತು

ಅದು ಸೆಪ್ಟೆಂಬರ್‌ 11, 2001. ಅಮೆರಿಕನ್ನರು ಆಗಷ್ಟೇ ಬೆಚ್ಚಗಿನ ನಿದ್ದೆಯಿಂದ ಎದ್ದೇಳುತ್ತಿದ್ದರು. ಅಷ್ಟರಲ್ಲಾಗಲೇ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ (ವರ್ಲ್ಡ್‌ ಟ್ರೇಡ್‌ ಸೆಂಟರ್‌) ಅವಳಿ ಗೋಪುರಗಳ (ಟ್ವಿನ್‌ ಟವರ್‌) ಮೇಲೆ ವೈಮಾನಿಕ ದಾಳಿ ನಡೆದಿತ್ತು. ಪೆಂಟಗನ್‌ ಹಾಗೂ ಪೆನ್ಸಿಲ್ವೇನಿಯಾದಲ್ಲೂ ಉಗ್ರರ ಕರಿನೆರಳು ಬಿದ್ದಿತ್ತು. ಕೇವಲ 1 ಗಂಟೆ 17 ನಿಮಿಷಗಳ ಅವಧಿಯಲ್ಲಿ ನಡೆದ ದಾಳಿಗಳ ಸರಣಿಯಲ್ಲಿ 2,977 ಅಮಾಯಕರು ಬಲಿಯಾಗಿದ್ದರು. ಲಾಡೆನ್‌ ನೇತೃತ್ವದ ಅಲ್‌ ಖೈದಾ ನಡೆಸಿದ ಜಗತ್ತು ಕಂಡ ಭೀಕರ ದಾಳಿ ನಡೆದು ಇಂದಿಗೆ 25 ವರ್ಷ.

ಅವಳಿ ಗೋಪುರಗಳೇ ಗುರಿ

ನ್ಯೂಯಾರ್ಕ್‌ ನಾಗರಿಕರಿಗೆ 2001ರ ಸೆಪ್ಟೆಂಬರ್‌ 11 ಎಂದಿನಂತೆಯೇ ಸಾಮಾನ್ಯ ದಿನವಾಗಿತ್ತು. ಆದರೆ ಬೆಳಿಗ್ಗೆ 8:46ಕ್ಕೆ ಅಮೆರಿಕನ್‌ ಏರ್‌ಲೈನ್ಸ್‌ನ ಫ್ಲೈಟ್‌ 11 ವಿಮಾನವು ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಉತ್ತರ ಗೋಪುರಕ್ಕೆ ಅಪ್ಪಳಿಸಿತು. ಆರಂಭದಲ್ಲಿ ಅಪಘಾತವೆಂದೇ ಭಾವಿಸಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ, ಅಂದರೆ 9:03ಕ್ಕೆ ಯುನೈಟೆಡ್‌ ಏರ್‌ಲೈನ್ಸ್‌ನ ಫ್ಲೈಟ್‌ 175 ದಕ್ಷಿಣ ಗೋಪುರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ 110 ಅಂತಸ್ತಿನ ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ದಕ್ಷಿಣ ಗೋಪುರ ಬೆಳಿಗ್ಗೆ 9:59ಕ್ಕೆ ನೋಡನೋಡುತ್ತಿದ್ದಂತೆ ಸಂಪೂರ್ಣವಾಗಿ ಕುಸಿದುಬಿತ್ತು. ಉತ್ತರ ಗೋಪುರ 10:28ಕ್ಕೆ ಧರಾಶಾಹಿಯಾಯಿತು.

ಅಮೆರಿಕ ಚೇತರಿಸಿಕೊಳ್ಳುವ ಮುನ್ನವೇ ಅಮೆರಿಕನ್‌ ಏರ್‌ಲೈನ್ಸ್‌ನ ಫ್ಲೈಟ್‌ 77 ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗನ್‌ಗೆ ಅಪ್ಪಳಿಸಿತು. ಇತ್ತ ಯುನೈಟೆಡ್‌ ಏರ್‌ಲೈನ್ಸ್‌ನ ಫ್ಲೈಟ್‌ 93 ಅನ್ನು ಅಪಹರಿಸಿದ್ದ ಭಯೋತ್ಪಾದಕರು ಶ್ವೇತಭವನದತ್ತ ವಿಮಾನವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಆದರೆ ಪ್ರಯಾಣಿಕರ ಪ್ರತಿರೋಧವೊಡ್ಡಿದ್ದಕ್ಕೆ ವಪೆನ್ಸಿಲ್ವೇನಿಯಾದ ಶ್ಯಾಂಕ್ಸ್‌ವಿಲ್ಲೆಯಲ್ಲಿ ಹೊಲದಲ್ಲಿ ಪತನ ಗೊಂಡಿತು.

ಒಟ್ಟಾರೆ ದಾಳಿಗಳಲ್ಲಿ ವರ್ಲ್ಡ್‌ ಟ್ರೇಡ್‌ ಸೆಂಟರ್‌ನಲ್ಲಿ 2,753 ಮಂದಿ, ಪೆಂಟಗನ್‌ನಲ್ಲಿ 184 ಮಂದಿ ಹಾಗೂ ಫ್ಲೈಟ್‌ 93 ದಾಳಿಯಲ್ಲಿ 40 ಮಂದಿ ಬಲಿಯಾಗಿದ್ದರು.

ಸಮಯಾವಳಿ

ಬೆಳಿಗ್ಗೆ 8:46 ಮೊದಲ ದಾಳಿ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನ 11 ಉತ್ತರ ಗೋಪುರ

ಬೆಳಿಗ್ಗೆ 9:03 ಎರಡನೇ ದಾಳಿ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ 175 ದಕ್ಷಿಣ ಗೋಪುರ

ಬೆಳಿಗ್ಗೆ 9:37 ಮೂರನೇ ದಾಳಿ ಅಮೆರಿಕನ್‌ ಏರನ್ಲೈನ್ಸ್‌ನ ವಿಮಾನ 77 ಪೆಂಟಗನ್‌

ಬೆಳಿಗ್ಗೆ 10:03 ನಾಲ್ಕನೇ ದಾಳಿ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ 93 ಪೆನ್ಸಿಲ್ವೇನಿಯಾ

19 ಉಗ್ರರು, 4 ವಿಮಾನಗಳ ಹೈಜಾಕ್‌

1990ರ ದಶಕದಲ್ಲಿ ಅಲ್‌ ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಮತ್ತು ಉಗ್ರ ಖಾಲಿದ್‌ ಶೇಖ್‌ ಮೊಹಮ್ಮದ್‌ ದಾಳಿ ಯೋಜನೆ ರೂಪಿಸಿದರು. ಜರ್ಮನಿಯಲ್ಲಿ ಓದುತ್ತಿದ್ದ ಮೊಹಮ್ಮದ್‌ ಅಟ್ಟಾ ಸೇರಿದಂತೆ ಹಲವರು ಸಾಥ್‌ ನೀಡಿದರು. 15 ಸೌದಿ ಅರೇಬಿಯಾ, ಇಬ್ಬರು ಯುಎಇ, ಈಜಿಪ್ಟ್‌ ಮತ್ತು ಲೆಬನಾನ್‌ನ ತಲಾ ಇಬ್ಬರು ಸೇರಿದಂತೆ 19 ಉಗ್ರರು ಇದಕ್ಕೆ ಸಿದ್ಧರಾದರು. ಅಮೆರಿಕದ ಫ್ಲೋರಿಡಾ ಸೇರಿ ವಿವಿಧೆಡೆ ವಿಮಾನ ಹಾರಿಸುವ ತರಬೇತಿ ಪಡೆದಿದ್ದರು.

ಇವರೆಲ್ಲ ನಾಲ್ಕು ತಂಡಗಳಾಗಿ ವಿಂಗಡಣೆಗೊಂಡು, ಬಾಕ್ಸ್‌ ಕಟರ್‌ ಸೇರಿದಂತೆ ಸಣ್ಣ ಹರಿತವಾದ ಆಯುಧಗಳೊಂದಿಗೆ ವಿಮಾನಗಳನ್ನು ಏರಿದ್ದರು. ಟೇಕ್‌ಆಫ್‌ ಆಗಿ ಸೀಟ್‌ಬೆಲ್ಟ್‌ ಚಿಹ್ನೆ ಆಫ್‌ ಆಗುತ್ತಿದ್ದಂತೆ ಸಿಬ್ಬಂದಿ, ಪ್ರಯಾಣಿಕರ ಮೇಲೆ ದಾಳಿ ನಡೆಸಿ, ಕಾಕ್‌ಪಿಟ್‌ಗೆ ನುಗ್ಗಿದರು. ವಿಮಾನಗಳಲ್ಲಿ ಟ್ರಾನ್ಸ್‌ಪಾಂಡರ್‌ಗಳನ್ನು ಸ್ಥಗಿತಗೊಳಿಸಿ ವಿಮಾನ ಹೈಜಾಕ್‌ ಮಾಡಿ ಅವಳಿ ಗೋಪುರಗಳಿಗೆ ಡಿಕ್ಕಿಹೊಡೆಸಿ ಸಾವಿರಾರು ಜನರನ್ನು ಕೊಂದರು.

ಅಲ್‌ ಖೈದಾ ದಾಳಿ ನಡೆಸಿದ್ದು ಏಕೆ?

ಅಮೆರಿಕದ ವಿದೇಶಾಂಗ ನೀತಿಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಅದರ ಪ್ರಾಬಲ್ಯವೇ ಪ್ರಮುಖ ಕಾರಣಗಳಾಗಿದ್ದವು. ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಮೆಕ್ಕಾ ಮತ್ತು ಮದೀನಾ ಇರುವ ಸೌದಿ ಅರೇಬಿಯಾದಲ್ಲಿ ಅಮೆರಿಕದ ಸೇನಾ ಉಪಸ್ಥಿತಿಯನ್ನು ಲಾಡೆನ್‌ ತೀವ್ರವಾಗಿ ವಿರೋಧಿಸುತ್ತಿದ್ದನು. ಇದರ ಜತೆಗೆ ಕಡುವೈರಿ ಇಸ್ರೇಲ್‌ಗೆ ಅಮೆರಿಕ ನೀಡುತ್ತಿದ್ದ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಬೆಂಬಲವೂ ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಹೀ

ಆಫ್ಘನ್‌ ಮೇಲೆ ಮುಗಿಬಿದ್ದ ಅಮೆರಿಕ

ದಾಳಿಯ ನಂತರ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ. ಬುಷ್‌ ''ವಾರ್‌ ಆನ್‌ ಟೆರರ್‌'' ಅಂದರೆ ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಘೋಷಿಸಿದರು. ಮೊದಲ ಗುರಿಯೇ ಅಫ್ಘಾನಿಸ್ತಾನವಾಗಿತ್ತು. ಯಾಕೆಂದರೆ ಲಾಡೆನ್‌ ಹಾಗೂ ಆತನ ಅಲ್‌ ಖೈದಾ ಸಹಚರರಿಗೆ ಅಫ್ಘಾನಿಸ್ತಾನವನ್ನು ಆಳುತ್ತಿದ್ದ ತಾಲಿಬಾನ್‌ ಆಡಳಿತ ಆಶ್ರಯ ನೀಡಿತ್ತು. ಅಮೆರಿಕ ಕೂಡಲೇ ಲಾಡೆನ್‌ ಅನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿತು. ಆದರೆ ತಾಲಿಬಾನ್‌ ಒಪ್ಪಲಿಲ್ಲ. ಸಾಕ್ಷಿ ಕೇಳಿತು. ಇದರಿಂದ ಅಮೆರಿಕ ''ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಮ್‌'' ಹೆಸರಿನಲ್ಲಿ ಅಫ್ಘಾನಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತು. ಕೆಲವೇ ತಿಂಗಳುಗಳಲ್ಲಿ ತಾಲಿಬಾನ್‌ ಆಡಳಿತ ಪತನವಾಯಿತು. ಅಮೆರಿಕ ಸೇನೆ ಹಿಡಿತಕ್ಕೆ ಬಂತು. ಸುಮಾರು 20 ವರ್ಷಗಳ ಬಳಿಕ, 2021ರ ಆಗಸ್ಟ್‌ನಲ್ಲಿ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ತಾಲಿಬಾನ್‌ ಮತ್ತೆ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಹೊಂಚು ಹಾಕಿ ಲಾಡೆನ್‌ ಹತ್ಯೆ

ಅಮೆರಿಕಗೆ 2001ರಲ್ಲೇ ಅಫ್ಘಾನಿಸ್ತಾನದ ತೋರಾ ಬೋರಾ ಪರ್ವತ ಪ್ರದೇಶದಲ್ಲಿ ಲಾಡೆನ್‌ ಅಡಗಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲಿ ಬಾಂಬ್‌ ದಾಳಿ ನಡೆಸಿತು. ಆದರೆ ಆತ ಅಲ್ಲಿಂದ ಪಾಕ್‌ಗೆ ಪರಾರಿಯಾಗುವಲ್ಲಿ ಯಶಸ್ವಿಯಾದನು. ಮುಂದೆ 10 ವರ್ಷಗಳ ಸುದೀರ್ಘ ಹುಡುಕಾಟದ ನಂತರ ಅಂದಿನ ಅಮೆರಿಕ ಅಧ್ಯಕ್ಷನ ಬರಾಕ್ ಒಬಾಮ ಮಾರ್ಗದರ್ಶನದಲ್ಲಿ ಲಾಡೆನ್‌ನನ್ನು ಹೊಡೆದುರುಳಿಸಿತು.

ಅಲ್‌ ಖೈದಾದ ಬಂಧಿತರು ನೀಡಿದ ಮಾಹಿತಿ ಮೇರೆಗೆ ಲಾಡೆನ್‌ನ ನಂಬಿಕಸ್ಥ ಸಂದೇಶವಾಹಕನ ಅಬು ಅಹ್ಮದ್‌ ಅಲ್‌-ಕುವೈತಿ ಎಂಬಾತನ ಮಾಹಿತಿ ಸಂಗ್ರಹಿಸಿತ್ತು. ಜಾಡು ಹಿಡಿದು ಪಾಕಿಸ್ತಾನದ ಅಬೊಟ್ಟಾಬಾದ್‌ನಲ್ಲಿದ್ದ ಭವ್ಯ ಬಂಗಲೆ ಪತ್ತೆಹಚ್ಚಿತು. ಮೊಬೈಲ್‌, ಇಂಟರ್ನೆಟ್‌ ಬಳಸದ ಲಾಡೆನ್‌ ಗೆ ಕುವೈತಿಯೇ ನಂಬಿಕಸ್ಥನಾಗಿದ್ದ.ಆತ ಓಡಾಡುತ್ತಿದ್ದ ಬಂಗಲೆ ಮೇಲೆ ಆ ಮನೆಯಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿಮೆ ಇತ್ತು. ಎತ್ತರದ ಗೋಡೆಗಳಿದ್ದವು. ಮನೆಯ ಕಸವನ್ನು ಹೊರಗೆ ನೀಡದೆ ಒಳಗೇ ಸುಡಲಾಗುತ್ತಿತ್ತು. ಅಲ್ಲಿ ಒಬ್ಬ ಎತ್ತರದ ವ್ಯಕ್ತಿ ಇದ್ದಾನೆಂಬ ಮಾಹಿತಿಯೂ ಸಿಕ್ಕಿತ್ತು. ಆ ವ್ಯಕ್ತಿಯನ್ನು ''ದಿ ಪೇಸರ್‌'' ಎಂದು ಕರೆಯಲಾಗುತ್ತಿತ್ತು. ಆತನೇ ಬಿನ್‌ ಲಾಡೆನ್‌ ಆಗಿರಬಹುದು ನಿಗಾ ವಹಿಸಿತು. ಕೊನೆಗೆ 2011ರ ಮೇ 2ರಂದು ಅಮೆರಿಕದ ವಿಶೇಷ ಪಡೆಗಳು ''ಆಪರೇಷನ್‌ ನೆಪ್ಚೂನ್‌ ಸ್ಪಿಯರ್‌'' ಹೆಸರಿನಲ್ಲಿ ಎರಡು ಹೆಲಿಕಾಪ್ಟರ್‌ಗಳಲ್ಲಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಅಮೆರಿಕದ ವಿಶೇಷ ಕಮಾಂಡೋ ಪಡೆಗಳು ಲಾಡೆನ್‌ ಅಡಗಿದ್ದ ಬಂಗಲೆಗೆ ಇಳಿದವು. 40 ನಿಮಿಷಗಳಲ್ಲೇ ಲಾಡೆನ್‌ನನ್ನು ಹೊಡೆದುರುಳಿಸಲಾಯಿತು.

ಹತ್ಯೆಯ ನಂತರ ಲಾಡೆನ್‌ನ ಮೃತದೇಹವನ್ನು ವಶಕ್ಕೆ ಪಡೆದ ಅಮೆರಿಕನ್‌ ಪಡೆಗಳು ಆತನ ಶವವನ್ನು ಯಾವುದೇ ದೇಶಕ್ಕೆ ಹಸ್ತಾಂತರಿಸದೆ ಸಮುದ್ರದಲ್ಲಿ ಜಲಸಮಾಧಿ ಮಾಡಿತು ಆತನ ಸಮಾಧಿ ಭವಿಷ್ಯದಲ್ಲಿ ಉಗ್ರರ ಸಂಕೇತ ಸ್ಥಳವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.

ಅಮೆರಿಕದ ಅಹಂಗೆ ಬಿದ್ದ ಪೆಟ್ಟು

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಅಮೆರಿಕದ ಪ್ರತಿಷ್ಠೆಗೆ ದಾಳಿ ಪೆಟ್ಟು ನೀಡಿತ್ತು. ವಿಶ್ವದ ಪ್ರಮುಖ ಆರ್ಥಿಕ ಮತ್ತು ಸೈನಿಕ ಕೇಂದ್ರಗಳ ಮೇಲೆಯೇ ದಾಳಿ ನಡೆಸಿ ಸಾವಿರಾರು ಜನರನ್ನು ಕೊಂದಿದ್ದು ಅಮೆರಿಕದ ಸುರಕ್ಷತಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಯಿತು.

ರಾಜತಾಂತ್ರಿಕ ಪ್ರತಿಷ್ಠೆಗೂ ಪೆಟ್ಟು ಬಿತ್ತು. ಒಂದೇ ದಿನ ನಾಲ್ಕು ಪ್ರಯಾಣಿಕ ವಿಮಾನಗಳು ಅಪಹರಣಕ್ಕೊಳಗಾಗಿ, ಅವುಗಳನ್ನು ಉಗ್ರರು ಆಯುಧಗಳಾಗಿ ಬಳಸುವ ಪರಿಸ್ಥಿತಿ ತಲುಪಿದ್ದರೂ ತಡೆಯಲು ಸಾಧ್ಯವಾಗದಿದ್ದಕ್ಕಾಗಿ ಅಮೆರಿಕದ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಗಳು ತೀವ್ರ ಟೀಕೆಗೆ ಗುರಿಯಾದವು.

ವಿಮಾನಯಾನ ವ್ಯವಸ್ಥೆಯಲ್ಲಿ ಭದ್ರತಾ ಕ್ರಾಂತಿ

ದಾಳಿಯು ವಿಮಾನಯಾನ ಭದ್ರತಾ ವ್ಯವಸ್ಥೆಯನ್ನೇ ಬದಲಿಸಿತು. ಹಿಂದೆ ತಪಾಸಣೆ , ಕಾಕ್ ಪಿಟ್ ಗಳಿಗೆ ಪ್ರವೇಶ ಕಷ್ಟಕರವಾಗಿರಲಿಲ್ಲ. ಆದರೆ ಆ ಬಳಿಕ ನಿಯಮಗಳನ್ನು ಬಿಗುಗೊಳಿಸಲಾಯಿತು. ಪೈಲಟ್‌ಗಳ ನಿಯಂತ್ರಣ ಕೊಠಡಿಗೆ ಸುಲಭವಾಗಿ ಪ್ರವೇಶಿಸದಂತೆ ವಿಶೇಷ ಭದ್ರತಾ ವ್ಯವಸ್ಥೆ ರೂಪಿಸಲಾಯಿತು. ಕತ್ತರಿ, ಚಾಕು, ಬಾಕ್ಸ್‌ ಕಟರ್‌ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಕೊಂಡೊಯ್ಯುವುದು ನಿರ್ಬಂಧಿಸಲಾಯಿತು. ದ್ರವ ವಸ್ತುಗಳ ಸಾಗಣೆಯ ಮೇಲೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಯಿತು. ಇಂದು ವಿಮಾನ ಪ್ರಯಾಣಕ್ಕೆ ಮುನ್ನ ನಡೆಯುವ ದೀರ್ಘ ಭದ್ರತಾ ತಪಾಸಣೆಗಳು ಪ್ರಯಾಣಿಕರಿಗೆ ಕಿರಿಕಿರಿ ಆಗಬಹುದು, ಆದರೆ ಅವುಗಳ ಹಿಂದೆ 2001ರ ಸೆಪ್ಟೆಂಬರ್‌ 11ರಂದು ನಡೆದ ದುರಂತದ ಪಾಠವಿದೆ.

ಘಟನಾ ಸ್ಥಳದಲ್ಲಿ ಸ್ಮಾರಕ

ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥವಾಗಿ ಮೂರು ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಅವಳಿ ಗೋಪುರಗಳ ವಳಿ

ನ್ಯಾಷನಲ್‌ ಸೆಪ್ಟೆಂಬರ್‌ 11 ಮೆಮೋರಿಯಲ್‌ ಮತ್ತು ಮ್ಯೂಸಿಯಂ, ಪೆಂಟಗಾನ್‌ ಸನಿಹ ಪೆಂಟಗನ್‌ ಮೆಮೋರಿಯಲ್‌ ಸ್ಮಾರಕ, ಪೆನ್ವಿಲ್ವೇನಿಯಾದ ಬಳಿ ಫ್ಲೈಟ್‌ 93 ನ್ಯಾಷನಲ್‌ ಮೆಮೋರಿಯಲ್‌ ಸ್ಮಾರಕಗಳು ತಲೆಯೆತ್ತಿವೆ.

ಜಗತ್ತಿಗೆ ಪರಿಚಿತನಾದ ಲಾಡೆನ್‌

ದಾಳಿ ಬಳಿಕ ಲಾಡೆನ್‌ ಎನ್ನುವ ಉಗ್ರನ ಮುನ್ನಲೆಗೆ ಬಂದ. ಹಿಂದೆ ಭಯೋತ್ಪಾದಕತೆಯಲ್ಲಿ ತೊಡಗಿದ್ದರೂ ಇದು ಆತನಿಗೆ ಅತೀವ ಕುಖ್ಯಾತಿ ನೀಡಿತು . ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಉನ್ನತ ಶಿಕ್ಷಣ ಪಡೆದಿದ್ದ ಆತ ಕ್ರಮೇಣ ಉಗ್ರವಾದದ ಹಾದಿ ಹಿಡಿದಿದ್ದನು.ಮುಂದಿನ ಒಂದು ದಶಕ ಕಾಲ ಲಾಡೆನ್‌ನ ಹುಡುಕಾಟವೇ ಜಾಗತಿಕ ಸುದ್ದಿಗಳ ಪ್ರಮುಖ ವಿಷಯವಾಗಿತ್ತು. ಆದರೆ ಲಾಡೆನ್ ಗೆ ಹಿಂದೊಮ್ಮೆ ಅಮೆರಿಕವೇ ಬೆಂಬಲಿಸಿತ್ತು. ರಷ್ಯಾ ಸೋವಿಯತ್ ವಿರುದ್ಧ ಲಾಡೆನ್ ಉಗ್ರವಾದಕ್ಕೆ ಅಮೆರಿಕ ಪರೋಕ್ಷವಾಗಿ ಕುಮ್ಮಕ್ಕು ನೀಡಿತ್ತು ಎನ್ನಲಾಗುತ್ತದೆ. ಆದರೆ ಮಗ್ಗುಲು ಮುಳ್ಳಾಯಿತು.

ಅಮೆರಿಕದ ಮೇಲೆ ತನ್ನೆಲ್ಲ ಸಿಟ್ಟುಗಳನ್ನು ಪ್ರಚಾರಕ್ಕೆ ಬಳಸಿಕೊಂಡು 19 ಉಗ್ರರನ್ನು ತನ್ನ ದಾಳಕ್ಕೆ ಬಳಸಿಕೊಂಡ. ದಾಳಿ ನಡೆದ ಬಳಿಕ ಆರಂಭದಲ್ಲಿ ಲಾಡೆನ್‌ ನೇರವಾಗಿ ತನ್ನ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಆದರೆ 2004ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವಿಡಿಯೊ ಸಂದೇಶದಲ್ಲಿ ತನ್ನ ಪಾತ್ರವಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದನು. ಅಲ್ಲದೇ ದಾಳಿಯನ್ನೂ ಸಮರ್ಥಿಸಿಕೊಂಡ.

9/11 ದಾಳಿಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ ಖಾಲಿದ್‌ ಶೇಖ್‌ ಮೊಹಮ್ಮದ್‌. 1996ರಲ್ಲಿ ಅಫ್ಘಾನಿಸ್ತಾನದಲ್ಲಿ ಲಾಡೆನ್‌ನನ್ನು ಭೇಟಿಯಾದ ಖಾಲಿದ್‌, ಅಮೆರಿಕದ ಪ್ರಮುಖ ಕಟ್ಟಡಗಳಿಗೆ ವಿಮಾನಗಳನ್ನು ಡಿಕ್ಕಿ ಹೊಡೆಸುವ ಬಗ್ಗೆ ಚರ್ಚಿಸಿದ. ಬಳಿಕ ಲಾಡನ್‌ ಅನುಮತಿ ಸಿಕ್ಕಾಗ ಉಗ್ರರ ಆಯ್ಕೆ, ತರಬೇತಿ, ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. 2003ರ ಮಾರ್ಚ್‌ನಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಬಂಧನಕ್ಕೊಳಗಾದ. ಬಳಿಕ ಅಮೆರಿಕದ ಸಿಐಎ ವಿಚಾರಣೆ ನಡೆಸಿ, ಕ್ಯೂಬಾದಲ್ಲಿರುವ ಅಮೆರಿಕದ ಗ್ವಾಂಟನಾಮೊ ಬೇ ಮಿಲಿಟರಿ ಜೈಲಿಗೆ ಸ್ಥಳಾಂತರಿಸಿತು. ಇಂದಿಗೂ ಅಲ್ಲಿದ್ದಾನೆ.

ಇಂಥ ವೈಮಾನಿಕ ದಾಳಿ ಇದೇ ಮೊದಲು

ಸಾಮಾನ್ಯವಾಗಿ ವಿಮಾನಗಳನ್ನು ಹೈಜಾಕ್‌ ಮಾಡಿ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗುತ್ತಿತ್ತು. ಆದರೆ 9/11 ದಾಳಿಯಲ್ಲಿ ಉಗ್ರರು ಪ್ರಯಾಣಿಕ ವಿಮಾನಗಳನ್ನೇ ಆಯುಧಗಳಾಗಿ ಬಳಸಿದರು. ಇಂತಹ ವೈಮಾನಿಕ ದಾಳಿ ಇದೆ ಮೊದಲು. ಉಗ್ರರೇ ಪೈಲಟ್‌ಗಳ ನಿಯಂತ್ರಣವನ್ನು ವಶಪಡಿಸಿಕೊಂಡು, ಜೀವದ ಹಂಗು ತೊರೆದು ಕಟ್ಟಡಗಳಿಗೆ ವಿಮಾನಗಳನ್ನು ಡಿಕ್ಕಿ ಹೊಡೆಸಿದರು. ಒಂದೇ ಸಮಯದಲ್ಲಿ ನಾಲ್ಕು ವಿಮಾನಗಳನ್ನು ಅಪಹರಿಸಿ, ಅಮೆರಿಕದ ಆರ್ಥಿಕ ಮತ್ತು ಸೈನಿಕ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ ಅತಿ ಭೀಕರ ದಾಳಿಯಾಯಿತು/.

ಕನ್ನಡ ಸಿನಿಮಾಗೂ ಬಂದ ಲಾಡೆನ್‌ ಹೆಸರು!

ಕುಖ್ಯಾತನಾದ ಒಸಾಮಾ ಬಿನ್‌ ಲಾಡೆನ್‌ ಹೆಸರು ಕನ್ನಡ ಚಿತ್ರರಂಗದಲ್ಲೂ ಪರಿಚಿತವಾಯಿತು. ಶಿವರಾಜ್‌ಕುಮಾರ್‌ ಅಭಿನಯದ ‘ಜೋಗಿ’ ಚಿತ್ರದಲ್ಲಿನ ‘ಬಿನ್‌ ಲಾಡೆನ್‌ ನನ್ನ ಮಾವ, ಬಿಲ್‌ ಕ್ಲಿಂಟನ್‌ ನನ್ನ ಭಾವ’ ಎಂಬ ಹಾಡು ಸೃಷ್ಟಿಯಾಯಿತು.

ಶಿವರಾಜ್‌ಕುಮಾರ್‌ ಅಭಿನಯದ ‘ಜೋಗಿ’ ಚಿತ್ರದಲ್ಲಿನ ‘ಬಿನ್‌ ಲಾಡೆನ್‌ ನನ್ನ ಮಾವ, ಬಿಲ್‌ ಕ್ಲಿಂಟನ್‌ ನನ್ನ ಭಾವ…’ ಎಂಬ ಹಾಡು ಭಾರೀ ಜನಪ್ರಿಯತೆ ಗಳಿಸಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ನಮ್ಮ ಪಕ್ಷ ಗೆದ್ರೆ 5000 ಡಾಲರ್‌ ದುಡ್ಡು: ಈಗ ಟ್ರಂಪ್‌ ಗ್ಯಾರಂಟಿ!
ಪೋರ್ನೋಗ್ರಫಿಗೆ ಸಕ್ರಮಕ್ಕೆ ಉಕ್ರೇನ್‌ ಚಿಂತನೆ