;Resize=(412,232))
ಢಾಕಾ: ಬಾಂಗ್ಲಾ ಯುವ ನಾಯಕ ಉಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಆರಂಭವಾಗಿದ್ದ ಹಿಂದುಗಳ ಹತ್ಯೆ ಸರಣಿ ಮುಂದುವರಿದಿದೆ. ಬಜೇಂದ್ರ ಬಿಸ್ವಾಸ್ (42) ಎಂಬಾತನನ್ನು ಮಂಗಳವಾರ ಹತ್ಯೆ ಮಾಡಲಾಗಿದೆ. ಬಾಂಗ್ಲಾದಲ್ಲಿ ಇತ್ತೀಚಿನ ದಿನಗಳಲ್ಲಿ ಹತರಾದ ಹಿಂದುಗಳ ಸಂಖ್ಯೆ 3ಕ್ಕೇರಿದೆ.
ಮೈಮೆನ್ಸಿಂಗ್ ಜಿಲ್ಲೆಯಲ್ಲಿನ ಭಾಲುಕಾ ಎಂಬಲ್ಲಿ ಬಟ್ಟೆ ಕಾರ್ಖಾನೆಯೊಂದರಲ್ಲಿ ಕಾವಲುಗಾರನಾಗಿದ್ದ ಹಿಂದೂ ವ್ಯಕ್ತಿ ಬಜೇಂದ್ರ ಬಿಸ್ವಾಸ್‌ನನ್ನು ಆತನ ಸಹೋದ್ಯೋಗಿಯೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಹಂತಕನನ್ನು ಅದೇ ಕಾರ್ಖಾನೆಯಲ್ಲಿ ಕಾವಲುಗಾರನಾಗಿದ್ದ ನೋಮನ್ ಮಿಯಾ(29) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಪೊಲೀಸರ ಹೇಳಿಕೆಯು ಇದು ಆಕಸ್ಮಿಕ ಸಾವೋ ಅಥವಾ ಉದ್ದೇಶಪೂರ್ವಕ ಹತ್ಯೆಯೋ ಎಂಬ ಬಗ್ಗೆ ಅನುಮಾನ ಸೃಷ್ಟಿಸಿದೆ.
‘ಬಿಸ್ವಾಸ್ ಮತ್ತು ಮಿಯಾ ಕಾವಲು ಸೋಮವಾರ ಸಂಜೆ 6:45ರ ಸುಮಾರಿಗೆ ಕಾವಲು ಕಾಯುತ್ತಿದ್ದರು. ಪರಸ್ಪರ ಮಾತನಾಡುತ್ತಿದ್ದ ವೇಳೆ ಮಿಯಾ, ತಮಾಷೆಗೆಂದು ಸರ್ಕಾರ ನೀಡಿದ ಶಾಟ್‌ಗನ್‌ಅನ್ನು ಬಿಸ್ವಾಸ್‌ರತ್ತ ಗುರಿ ಮಾಡಿ ಹಿಡಿದಿದ್ದ. ಆ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು, ಬಿಸ್ವಾಸ್‌ರ ಎಡತೊಡೆಗೆ ತಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ’ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಿಯಾನ ಗನ್ ಅನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಬಿಸ್ವಾಸ್‌ರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಡಿ.18ರಂದು ಧರ್ಮನಿಂದನೆ ಆರೋಪ ಹೊರಿಸಿ ದೀಪು ಚಂದ್ರದಾಸ್ ಎಂಬುವವರನ್ನು ಗುಂಪೊಂದು ಹೊಡೆದು ಹತ್ಯೆ ಮಾಡಿ, ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿತ್ತು. ಬಳಿಕ ಸುಲಿಗೆ ಮಾಡುತ್ತಿದ್ದರೆಂದು ಆಪಾದಿಸಿ ಅಮೃತ್ ಮಂಡಲ್ ಎಂಬಾತನನ್ನು ಕೊಲ್ಲಲಾಗಿತ್ತು. ಈ ಪಟ್ಟಿಗೆ ಬಿಸ್ವಾಸ್ 3ನೇ ಸೇರ್ಪಡೆ.