;Resize=(412,232))
ನವದೆಹಲಿ: ಕೊಲ್ಲಿಯಲ್ಲಿ ಮತ್ತೆ ಯುದ್ಧದ ಭೀತಿ ಏರ್ಪಟ್ಟಿರುವ ಹೊತ್ತಿನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ 40 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯ ನಾಯಕರು ಹೋರ್ಮುಜ್ ಜಲಸಂಧಿಯ ಸದ್ಯದ ಸ್ಥಿತಿ ಸೇರಿದಂತೆ ಯುದ್ಧಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಕದನವಿರಾಮ ಏರ್ಪಟ್ಟ ಬಳಿಕ ಇದು ಉಭಯ ನಾಯಕರ ನಡುವಿನ ಮೊದಲ ಮಾತುಕತೆಯಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಹಲವು ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಸಾಧಿಸಿರುವ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದೆವು. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಲಾಯಿತು. ಜತೆಗೆ ಹೋರ್ಮುಜ್ ಅನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಅಗತ್ಯದ ಬಗ್ಗೆಯೂ ಮಾತುಕತೆ ನಡೆಸಿದೆವು’ ಎಂದು ಮಾಹಿತಿ ನೀಡಿದ್ದಾರೆ.
ಅತ್ತ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸರ್ಗಿಯೋ ಗೋರ್ ಈ ಸಂವಾದವನ್ನು ‘ಧನಾತ್ಮಕ ಮತ್ತು ಉತ್ಪಾದಕ’ ಎಂದು ಬಣ್ಣಿಸಿದ್ದಾರೆ. ಕೊನೆಯಲ್ಲಿ ಟ್ರಂಪ್ ಅವರು ಮೋದಿಗೆ, ‘ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ’ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಇಬ್ಬರು ನಾಯಕರು ಮಾ.24ರಂದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಯುದ್ಧದ ಬಗ್ಗೆ ಮಾತನಾಡಿದ್ದರು.
ಮೋದಿ ಮತ್ತು ಟ್ರಂಪ್ ನಡುವಿನ ಮಾತುಕತೆ ವೇಳೆ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ದೊಡ್ಡ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ಆಗಿದೆ. ಇನ್ನೂ ಕೆಲವೇ ದಿನ ಅಥವಾ ವಾರದಲ್ಲಿ ಇವು ಏರ್ಪಡಬಹುದು ಎಂದು ಗೋರ್ ಹೇಳಿದ್ದಾರೆ. ಆದರೆ ಅವ್ಯಾವುವು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಮೂಲಕ ಅಮೆರಿಕದ ಜತೆ ಹೊಸ ಒಪ್ಪಂದ ಏರ್ಪಡುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.