ಇರಾನ್‌ಗೊಂದು ಗತಿ ಕಾಣಿಸಿ ಬೇಗ ಯುದ್ಧ ಮುಗಿಸ್ತೀವಿ : ಟ್ರಂಪ್‌

Published : Apr 03, 2026, 03:34 AM IST
 Donald Trump

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಒಂದು ತಿಂಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಉದ್ದೇಶಿಸಿ ಭಾಷಣ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಒಂದು ತಿಂಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಉದ್ದೇಶಿಸಿ ಭಾಷಣ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ.

‘ಇರಾನ್ ಮೇಲಿನ ನಮ್ಮ ವ್ಯೂಹಾತ್ಮಕ ಗುರಿಯನ್ನು ತಲುಪುವ ಅಂತಿಮ ಹಂತದಲ್ಲಿದ್ದೇವೆ. ಮುಂದಿನ 2-3 ವಾರಗಳ ಕಾಲ ಇರಾನ್‌ ಮೇಲೆ ದಾಳಿಯನ್ನು ಅತ್ಯಂತ ತೀವ್ರಗೊಳಿಸಿ ನಮ್ಮ ಗುರಿ ಈಡೇರಿದ ಕೂಡಲೇ ಯುದ್ಧ ನಿಲ್ಲಿಸಲಿದ್ದೇವೆ’ ಎಂದು ಘೋಷಿಸಿದ್ದಾರೆ.

ಈ ನಡುವೆ ಟ್ರಂಪ್‌ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್‌, ‘ನಿಮಗೆ ನಮ್ಮ ಬಗ್ಗೆ ಏನೂ ಗೊತ್ತಿಲ್ಲ. ಅಮೆರಿಕವು ನಿರಂತರ ಅವಮಾನ, ಪಶ್ಚಾತ್ತಾಪ ಮತ್ತು ಶರಣಾಗತಿ ಅನುಭವಿಸುವವರೆಗೆ ಮಧ್ಯಪ್ರಾಚ್ಯ ಯುದ್ಧ ಮುಂದುವರಿಯಲಿದೆ ಎಂದು ಎಚ್ಚರಿಸಿದೆ.

ಗುರಿ ಈಡೇರುವತ್ತ:

ಇರಾನ್‌ ಸಂಘರ್ಷದ ಬಳಿಕ ಮೊದಲ ಬಾರಿ ದೇಶವನ್ನುದ್ದೇಶಿಸಿ 20 ನಿಮಿಷ ಮಾತನಾಡಿದ ಟ್ರಂಪ್‌, ‘ಇರಾನ್‌ನಲ್ಲಿರುವುದು ಕೊಲೆಗಡುಕ ಆಡಳಿತ. ಅದು ತನ್ನದೇ ನಾಗರಿಕರನ್ನು ಹತ್ಯೆ ಮಾಡಿದೆ. ಇರಾನ್‌ ಆಡಳಿತವು ಅಮೆರಿಕಕ್ಕಷ್ಟೇ ಅಲ್ಲದೆ, ಇಡೀ ಜಗತ್ತಿನ ಪಾಲಿಗೆ ಬೆದರಿಕೆ. ಇದನ್ನು ತಡೆಯಲೆಂದೇ ನಾವು ದಾಳಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

ಜೊತೆಗೆ, ‘ದಾಳಿಯಿಂದಾಗಿ ಇರಾನ್‌ನ ಮಿಲಿಟರಿ ಸಾಮರ್ಥ್ಯ ಬಹುತೇಕ ಕುಸಿದಿದೆ. ಇದೀಗ ನಾವು ನಮ್ಮ ಉದ್ದೇಶಿತ ಮೂಲ ಗುರಿ ಸಾಧನೆಯ ಸನಿಹದಲ್ಲಿದ್ದೇವೆ. ನಾವು ಯುದ್ಧ ಮಾಡುತ್ತಿರುವುದು ಅಮೆರಿಕ ಮತ್ತು ವಿಶ್ವದ ಭದ್ರತೆಗಾಗಿ. ಅಣ್ವಸ್ತ್ರ ಇರಾನ್‌ ಕೈ ಸೇರಬಾರದು ಎಂಬುದು ನಮ್ಮ ಗುರಿ. ಒಂದು ವೇಳೆ ಇರಾನ್‌ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಹೋದರೆ ನಾವು ಅವರ ಎಲ್ಲ ವಿದ್ಯುತ್‌ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಲಿದ್ದೇವೆ, ಬಹುಶಃ ಏಕಕಾಲದಲ್ಲಿ ಅವುಗಳ ಮೇಲೆ ದಾಳಿ ನಡೆಸಲಿದ್ದೇವೆ’ ಎಂದು ಎಚ್ಚರಿಸಿದ್ದಾರೆ.

ವಿಶ್ವ ಯುದ್ಧಕ್ಕೆ ಹೋಲಿಕೆ:

ಮೊದಲನೇ ವಿಶ್ವಸಮರ 1 ವರ್ಷ 7 ತಿಂಗಳು ನಡೆದಿತ್ತು, 2ನೇ ವಿಶ್ವಸಮರ 3 ವರ್ಷ 8 ತಿಂಗಳು ನಡೆದಿತ್ತು. ಈಗಿನ ಯುದ್ಧಕ್ಕಿನ್ನೂ 32 ದಿನ ಮಾತ್ರ ತುಂಬಿದೆ ಎನ್ನುವ ಮೂಲಕ ತಮ್ಮ ಗುರಿ ಈಡೇರಲು ಇನ್ನಷ್ಟು ಸಮಯ ಬೇಕಿದೆ ಎಂಬ ಸುಳಿವು ನೀಡಿದರು.

ತೈಲಕ್ಕಾಗಿ ಸಂಘರ್ಷ ಅಲ್ಲ:

ಇದು ತೈಲಕ್ಕಾಗಿನ ಸಂಘರ್ಷವಲ್ಲ, ತೈಲಕ್ಕಾಗಿ ನಾವೀಗ ಮಧ್ಯಪ್ರಾಚ್ಯವನ್ನು ಅವಲಂಬಿಸಿಯೂ ಇಲ್ಲ. ನಾವು ನಮ್ಮ ಮಿತ್ರರಿಗೆ ನೆರವಾಗುತ್ತಿದ್ದೇವೆ ಎಂದ ಟ್ರಂಪ್‌, ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ಕಪಿಮುಷ್ಟಿಯಿಂದ ಸುರಕ್ಷಿತಗೊಳಿಸುವ ಮಿತ್ರ ದೇಶಗಳು ಧೈರ್ಯ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಉಪಗ್ರಹ ನಿಗಾ:

ಈ ನಡುವೆ ಇರಾನ್‌ ಅಣು ಘಟಕಗಳನ್ನು ನಾವು ಬಿ2 ಬಾಂಬರ್‌ ಬಳಸಿ ನಾಶ ಮಾಡಿದ್ದೇವೆ. ಅವುಗಳ ಮೇಲೆ ನಮ್ಮ ಉಪಗ್ರಹಗಳ ನಿಗಾ ಇದೆ. ಅವರು ಮತ್ತೆ ಅತ್ತ ಕಡೆಗೆ ಸಣ್ಣ ಹೆಜ್ಜೆ ಇಟ್ಟರೂ ಮತ್ತೆ ನಾವು ದಾಳಿ ನಡೆಸುತ್ತೇವೆ ಎಂದ ಟ್ರಂಪ್‌, ಸಂಸ್ಕರಿತ ಯುರೇನಿಯಂ ತರಲು ಇರಾನ್‌ಗೆ ಕಾಲಿಡುವ ಸಾಧ್ಯತೆ ಅಲ್ಲಗಳೆದಿದ್ದಾರೆ. 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ನಿಂದ ಬೇಗ ಎಕ್ಸಿಟ್‌ : ಟ್ರಂಪ್‌
ಅಮೆರಿಕದಲ್ಲೂ ಅನಿಲ ಬೆಲೆ ಭಾರಿ ಏರಿಕೆ : 4 ವರ್ಷದ ಗರಿಷ್ಠ!