ಸ್ಟಾಕ್‌ಹೋಮ್: ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಹಂಗೇರಿಯ ಲೇಖಕ ಲಾಸ್‌ಜ್ಲೋ ಕ್ರಾಸ್‌ಜ್ನಾಹೋರ್ಕೈ(71) ಆಯ್ಕೆಯಾಗಿದ್ದಾರೆ. ತತ್ವಾಧಾರಿತ ಹಾಗೂ ಹಾಸ್ಯಮಯ ಕಾದಂಬರಿಗೆ ಖ್ಯಾತರಾಗಿರುವ ಲಾಸ್‌ಜ್ಲೋ ಅವರ ಪ್ರಭಾವಶಾಲಿ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ ಪ್ರಶಸ್ತಿ ಒಲಿದುಬಂದಿದೆ.
ಲಾಸ್‌ಜೋಲ್ ಅವರು ಸತಾಂತಂಗೊ, ಸೀಯೋಬೊ ದೇರ್ ಬಿಲೋ, ವಾರ್ ಆ್ಯಂಡ್ ವಾರ್ ಸೇರಿದಂತೆ ಸುಮಾರು 17 ಕೃತಿಗಳ ಕರ್ತೃವಾಗಿದ್ದಾರೆ. ಇವುಗಳಲ್ಲಿ ಅವರ ಚೀನಾ ಹಾಗೂ ಜಪಾನ್ ಪ್ರವಾಸದ ಅನುಭವದಿಂದ ಪ್ರೇರಿತವಾದ ಪುಸ್ತಕಗಳೂ ಸೇರಿವೆ.
ಲೇಖಕರ ವಿಶೇಷತೆಯೇನು?: ಉದ್ದುದ್ದ ವಾಕ್ಯಗಳ ಹೊರತಾಗಿಯೂ ಸರಾಗವಾಗಿ ಓದಿಸಿಕೊಂಡು ವಾಕ್ಯಗಳ ರಚನೆ ಲಾಸ್‌ಜ್ಲೋ ಬರವಣಿಗೆ ಶೈಲಿಯ ವಿಶೇಷತೆ. ಇವರ ಕೃತಿಗಳಲ್ಲಿ ವಿಷಾದ, ಭೀಕರ ಭವಿಷ್ಯ ಪ್ರಳಯದ ಸಂಗತಿಗಳ ಪ್ರಸ್ತಾಪವನ್ನು ಹೆಚ್ಚು ಹೆಚ್ಚು ಕಾಣಬಹುದಾಗಿದೆ.
‘ಲಾಸ್‌ಜ್ಲೋ ಕೃತಿಗಳು ಭ್ರಮೆಗಳಿಂದ ಮುಕ್ತವಾಗಿವೆ. ತಮ್ಮ ಕಲೆಯ ಶಕ್ತಿಯಿಂದ ಸಾಮಾಜಿಕ ಅವ್ಯವಸ್ಥೆಯ ಬಗ್ಗೆ ಅವರು ಸೊಗಸಾಗಿ ಬರೆಯುತ್ತಾರೆ. ಅವರು ಕಾಫ್ಕರಿಂದ ಥಾಮಸ್ ಬರ್ನ್‌ಹಾರ್ಡ್‌ನಂತಹ ಖ್ಯಾತ ಲೇಖಕರ ನಾಡಾಗಿರುವ ಮಧ್ಯ ಯುರೋಪಿಯನ್ ಬರಹಗಾರ’ ಎಂದು ತೀರ್ಪುಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.