ರಫಾ: ಉತ್ತರ ಗಾಜಾ ಮೇಲೆ ಭೂದಾಳಿ ನಡೆಸುವುದಾಗಿ ಎರಡು ವಾರಗಳಿಂದ ಎಚ್ಚರಿಕೆ ನೀಡುತ್ತಾ ಬಂದಿದ್ದ ಇಸ್ರೇಲ್ ಸೇನೆ ಬುಧವಾರ ರಾತ್ರೋರಾತ್ರಿ ಭೂದಾಳಿಗೆ ತನ್ನ ಸನ್ನದ್ಧತೆಯನ್ನು ಪರೀಕ್ಷಿಸಲು ಕೆಲ ಗಂಟೆಗಳ ಕಾಲ ಪ್ರಾಯೋಗಿಕ ಭೂದಾಳಿ ನಡೆಸಿದೆ. ಈ ವೇಳೆ ಹಲವು ಉಗ್ರರನ್ನು ಹತ್ಯೆಗೈದಿರುವುದಾಗಿ ಹಾಗೂ ಹಮಾಸ್‌ನ ಯುದ್ಧ ಸಂಬಂಧಿ ಮೂಲಸೌಕರ್ಯಗಳನ್ನು ನಾಶಗೊಳಿಸಿ, ಕ್ಷಿಪಣಿಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ. ‘ದೊಡ್ಡ ಭೂದಾಳಿಗೂ ಮುನ್ನ ನಡೆಸಿದ ಸೀಮಿತ ದಾಳಿಯಿದು. ಯುದ್ಧದ ಮುಂದಿನ ಹಂತಕ್ಕೆ ನಮ್ಮ ಸೇನೆಯ ಸನ್ನದ್ಧತೆ ಪರೀಕ್ಷಿಸಲು ಈ ದಾಳಿ ನಡೆಸಿದ್ದೇವೆ. ದಾಳಿಯ ವೇಳೆ ನಮ್ಮ ಸೈನಿಕರಾರೂ ಗಾಯಗೊಂಡಿಲ್ಲ’ ಎಂದು ಇಸ್ರೇಲ್ ಸೇನೆ ಅಧಿಕೃತವಾಗಿ ತಿಳಿಸಿದೆ. ವಾಯುದಾಳಿಯಲ್ಲಿ 750 ಜನರ ಹತ್ಯೆ: ಭೂದಾಳಿಯ ಸನ್ನದ್ಧತೆ ಪರೀಕ್ಷಿಸಲು ನಡೆಸಿದ ದಾಳಿಯ ಹೊರತಾಗಿ ಬುಧವಾರ ರಾತ್ರಿಯಿಡೀ ಇಸ್ರೇಲ್ ಸೇನೆ ಗಾಜಾ ಮೇಲೆ ನಿರಂತರ ವಾಯುದಾಳಿಯನ್ನು ಕೂಡ ನಡೆಸಿದೆ. ಈ ವೇಳೆ 750 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ಹೇಳಿದ್ದಾರೆ. ಮಂಗಳವಾರ ನಡೆದ ದಾಳಿಯಲ್ಲಿ 704 ಜನರು ಸಾವನ್ನಪ್ಪಿದ್ದರು. ಬುಧವಾರ ನಡೆದ ದಾಳಿಯಲ್ಲಿ ಅಲ್‌ಜಝೀರಾದ ಗಾಜಾ ಪ್ರತಿನಿಧಿ ಹಾಗೂ ಹಿರಿಯ ಪತ್ರಕರ್ತ ವೇಲ್ ಡೋಡಫ್ ಅವರ ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಗ ಕೂಡ ಮೃತಪಟ್ಟಿದ್ದಾರೆ. ನಾವು ಹಮಾಸ್ ವಶಪಡಿಸಿಕೊಳ್ಳಲ್ಲ-ಇಸ್ರೇಲ್: ‘ನಾವು ಗಾಜಾದಲ್ಲಿರುವ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದೇವೆ. ಆದರೆ ಉಗ್ರರು ಜನನಿಬಿಡ ಸ್ಥಳಗಳಿಂದಲೇ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಮೇಲೆ ಮತ್ತೆ ದಾಳಿ ನಡೆಸಲು ಸಾಧ್ಯವಿಲ್ಲದಷ್ಟು ಹಮಾಸ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಷ್ಟೇ ನಮ್ಮ ಉದ್ದೇಶ. ಮತ್ತೆ ಗಾಜಾವನ್ನು ನಾವು ವಶಪಡಿಸಿಕೊಳ್ಳುವುದಿಲ್ಲ. 2005ರಲ್ಲೇ ಅಲ್ಲಿಂದ ನಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದೇವೆ’ ಎಂದು ಇಸ್ರೇಲ್ ಹೇಳಿದೆ. ಸಾವಿನ ಸಂಖ್ಯೆ 8000ಕ್ಕೆ ಏರಿಕೆ: ಈವರೆಗೆ ಇಸ್ರೇಲ್‌ನ ದಾಳಿಯಲ್ಲಿ 6500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಅದೇ ವೇಳೆ, ಕನಿಷ್ಠ 1400 ಇಸ್ರೇಲಿಗರೂ ಸಾವನ್ನಪ್ಪಿದ್ದಾರೆ. ಹೀಗಾಗಿ ಯುದ್ಧದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 8000ಕ್ಕೆ ಏರಿಕೆಯಾಗಿದೆ. ಗಾಜಾದಲ್ಲಿರುವ 23 ಲಕ್ಷ ಜನರ ಪೈಕಿ 14 ಲಕ್ಷ ಜನರು ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ವಿಶ್ವಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಲಕ್ಷಾಂತರ ನಾಗರಿಕರು ಉತ್ತರ ಗಾಜಾದಲ್ಲಿದ್ದಾರೆ. ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಎಚ್ಚರಿಕೆ ನೀಡುತ್ತಾ ಬಂದಿದ್ದು, ಉತ್ತರ ಗಾಜಾ ಮೇಲೆ ಭೂದಾಳಿ ನಡೆಸಿ ಭಯೋತ್ಪಾದಕರ ಎಲ್ಲಾ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಹೇಳಿದೆ. 60 ಟ್ರಕ್ ನೆರವಿನ ಸಾಮಗ್ರಿ ರವಾನೆ: ಕೆಲ ದಿನಗಳಿಂದ ಈಜಿಪ್ಟ್ ಮೂಲಕ ಗಾಜಾಪಟ್ಟಿಗೆ ಒಟ್ಟು 60 ಟ್ರಕ್‌ಗಳಷ್ಟು ಆಹಾರ, ಔಷಧ ಮುಂತಾದ ನೆರವಿನ ಸಾಮಗ್ರಿಗಳನ್ನು ರವಾನಿಸಲು ಇಸ್ರೇಲ್ ಅವಕಾಶ ನೀಡಿದೆ. ಆದರೆ ಅದು ಯಾತಕ್ಕೂ ಸಾಲುತ್ತಿಲ್ಲ. ಇದು ಸಮುದ್ರಕ್ಕೆ ಒಂದು ಹನಿ ನೀರು ಹಾಕಿದಂತಾಗಿದೆ ಎಂದು ರೆಡ್ ಕ್ರಾಸ್ ಹೇಳಿದೆ. ಈಗಲೂ ಇಂಧನ ಟ್ಯಾಂಕರ್‌ಗಳು ಗಾಜಾ ಪ್ರವೇಶಿಸಲು ಇಸ್ರೇಲ್ ಅವಕಾಶ ನೀಡುತ್ತಿಲ್ಲ. ಹೀಗಾಗಿ ಗಾಜಾಪಟ್ಟಿ ಅಂಧಕಾರದಲ್ಲಿ ಮುಳುಗಿದ್ದು, ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಲೆಬನಾನ್ ಗಡಿಯಲ್ಲೂ ಹಿಜ್ಬುಲ್ಲಾ ಉಗ್ರರ ಜೊತೆಗೆ ಇಸ್ರೇಲ್‌ನ ಕ್ಷಿಪಣಿ ಯುದ್ಧ ಮುಂದುವರೆದಿದೆ.