ಮೆದುಳಿನ ಆಫ್‌, ಆನ್‌ ವ್ಯವಸ್ಥೆ ಪತ್ತೆಗೆ ವೈದ್ಯ ನೊಬೆಲ್‌!

Published : Oct 06, 2026, 11:38 AM IST
Nobel Prize 2026

ಸಾರಾಂಶ

ಮೆದುಳಿನಲ್ಲಿರುವ ನರಕೋಶಗಳ ಚಟುವಟಿಕೆಯನ್ನು ಆನ್‌ ಮತ್ತು ಆಫ್‌ ಮಾಡುವ ವ್ಯವಸ್ಥೆಯ ಕುರಿತು ಬೆಳಕು ಚೆಲ್ಲಿದ ಮೂವರು ಸಂಶೋಧಕರಿಗೆ 2026ನೇ ಸಾಲಿನ ಪ್ರತಿಷ್ಠಿತ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

ಸ್ಟಾಕ್‌ಹೋಮ್: ಮೆದುಳಿನಲ್ಲಿರುವ ನರಕೋಶಗಳ ಚಟುವಟಿಕೆಯನ್ನು ಆನ್‌ ಮತ್ತು ಆಫ್‌ ಮಾಡುವ ವ್ಯವಸ್ಥೆಯ ಕುರಿತು ಬೆಳಕು ಚೆಲ್ಲಿದ ಮೂವರು ಸಂಶೋಧಕರಿಗೆ 2026ನೇ ಸಾಲಿನ ಪ್ರತಿಷ್ಠಿತ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಕಾರ್ಲ್‌ ಡೀಸೆರೊತ್‌, ಜರ್ಮನಿಯ ಹಂಬೋಲ್ಟ್‌ ವಿಶ್ವವಿದ್ಯಾಲಯದ ಪೀಟರ್‌ ಹೆಗೆಮನ್‌ ಮತ್ತು ವುರ್ಜ್‌ಬರ್ಗ್‌ ವಿಶ್ವವಿದ್ಯಾಲಯದ ಜಾರ್ಜ್‌ ನಾಗೆಲ್‌ ಪ್ರಶಸ್ತಿಗೆ ಭಾಜನರಾದ ಸಂಶೋಧಕರಾಗಿದ್ದಾರೆ.

‘ನರಕೋಶಗಳನ್ನು ಬೆಳಕಿನ ಮೂಲಕ ನಿಯಂತ್ರಿಸುವ ‘ಆಪ್ಟೊಜೆನೆಟಿಕ್ಸ್‌’ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಇವರ ಸಂಶೋಧನೆ ಮಹತ್ವದ ಪಾತ್ರ ವಹಿಸಿದೆ. ಈ ವಿಧಾನವು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಶ್ವಾದ್ಯಂತ ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತಿದೆ’ ಎಂದು ನೊಬೆಲ್‌ ಸಮಿತಿ ತಿಳಿಸಿದೆ.

ಪ್ರಶಸ್ತಿಯ ಮೊತ್ತವಾಗಿ ನೀಡಲಾಗುವ 11.5 ಕೋಟಿ ರು. ಮೂವರು ವಿಜ್ಞಾನಿಗಳ ನಡುವೆ ಹಂಚಿಕೆಯಾಗಲಿದೆ.

ಏನಿದು ಸಂಶೋಧನೆ?:

ನರಕೋಶಗಳು ವಿದ್ಯುತ್ ಸಂಕೇತಗಳನ್ನು ಉತ್ಪಾದಿಸುವ ಮೂಲಕ ಸಂವಹನ ನಡೆಸುತ್ತವೆ ಎಂಬುದು ತಿಳಿದಿತ್ತಾದರೂ ಆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಯಾವ ನರಕೋಶ ಎಂಥಾ ವರ್ತನೆಗೆ ಕಾರಣವಾಗುತ್ತದೆ? ನಿರ್ದಿಷ್ಟ ನರಕೋಶವನ್ನು ಸಕ್ರಿಯಗೊಳಿಸಿದಾಗ ಏನಾಗುತ್ತದೆ? ಅವುಗಳ ಕೆಲಸ ನಿಲ್ಲಿಸಿದಾಗ ಏನಾಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಇದನ್ನು ಪತ್ತೆ ಮಾಡುವ ಉದ್ದೇಶದಿಂದ ಪೀಟರ್ ಹೆಗೆಮನ್ ಏಕಕೋಶೀಯ (ಒಂದು ಕೋಶದ) ಹಸಿರು ಪಾಚಿಯ ಅಧ್ಯಯನ ಆರಂಭಿಸಿದ್ದರು. ಆ ವೇಳೆ, ಆ ಪಾಚಿಯು ಬೆಳಕು ಇದ್ದತ್ತ ಚಲಿಸುವುದು ಕಂಡುಬರುತ್ತದೆ. ಇದು ಹೇಗೆ ಸಾಧ್ಯ ಎಂಬುದರ ಪತ್ತೆಗೆ ವಿಜ್ಞಾನಿ ಜಾರ್ಜ್ ನಾಗೆಲ್ ಸಾಥ್‌ ನೀಡುತ್ತಾರೆ. ಅವರಿಬ್ಬರು ಒಟ್ಟಾಗಿ, ಪಾಚಿಯಲ್ಲಿ ಒಂದು ವಿಶೇಷ ಪ್ರೋಟೀನ್ ಇರುತ್ತದೆ ಹಾಗೂ ಅದೆ ಮೇಲೆ ನೀಲಿ ಬೆಳಕು ಹಾಯಿಸಿದಾಗ, ಆ ಪ್ರೋಟೀನ್‌ ಜೀವಕೋಶದ ಪೊರೆಯನ್ನು ತೆರೆದು ವಿದ್ಯುತ್‌ ಸಿಗ್ನಲ್‌ ರವಾನೆ ಮಾಡುತ್ತದೆ ಎಂಬುದನ್ನು ಪತ್ತೆ ಮಾಡುವುದರಲ್ಲಿ ಇಬ್ಬರು ಯಶಸ್ವಿಯಾಗಿದ್ದರು.

ಇದರ ಮುಂದುವರಿದ ಭಾಗವಾಗಿ, ಬೆಳಕಿಗೆ ಸಂವೇದನಾಶೀಲವಾದ (ಲೈಟ್‌ ಸೆನ್ಸಿಟಿವ್‌) ಪ್ರೋಟೀನ್‌ ಅನ್ನು ಉತ್ಪಾದಿಸುವ ಕೋಶವನ್ನು ಬೇರೊಂದು ಕೋಶಕ್ಕೆ ಸೇರಿಸಲು ಸಾಧ್ಯವಾದರೆ, ಆ ಇನ್ನೊಂದು ಕೋಶ ಬೆಳಕಿಗೆ ಸಂವೇದನಾಶೀಲವಾಗುವ ಸಾಧ್ಯತೆಯಿರುತ್ತದೆ ಎಂಬ ಯೋಚನೆಯನ್ನು ಕಾರ್ಲ್ ಡೈಸರೋತ್ ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಕಾರ್ಯರೂಪಕ್ಕೆ ತರಲು ಮುಂದಾಗುತ್ತಾರೆ.

ಅವರು, ಜೀವಂತ ಇಲಿಗಳ ಮೆದುಳಿನಲ್ಲಿರುವ ನಿರ್ದಿಷ್ಟ ನರಕೋಶಗಳು ಬೆಳಕಿಗೆ ಪ್ರತಿಕ್ರಿಯಿಸುವಂತೆ ಮಾಡಲು, ಲೈಟ್‌ ಸೆನ್ಸಿಟಿವ್‌ ಪ್ರೋಟೀನ್‌ನ ಜೀನ್‌ಗಳನ್ನು ಅವಕ್ಕೆ ಸೇರಿಸಿದರು ಹಾಗೂ ಆ ಕೋಶಗಳ ಮೇಲೆ ಬೆಳಕನ್ನು ಬೀರಿದರು. ಈ ಮೂಲಕ ಆ ನರಕೋಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ, ಇಲಿಯ ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ಯಶ ಕಂಡರು. ಈ ಪ್ರಕ್ರಿಯೆಯನ್ನು ‘ಆಪ್ಟೊಜೆನೆಟಿಕ್ಸ್’ ಎಂದು ಕರೆಯಲಾಗುತ್ತದೆ.

ಮಹತ್ವವೇನು?:

ಮೆದುಳಲ್ಲಿರುವ ಕೋಟಿಗಟ್ಟಲೆ ನರಕೋಶಗಳಲ್ಲಿ ಒಂದನ್ನು ನಿಯಂತ್ರಿಸಲು ಆಪ್ಟೊಜೆನೆಟಿಕ್ಸ್ ವಿಧಾನವನ್ನು ಬಳಸಬಹುದು. ಈ ಮೂಲಕ ಮೆದುಳಿನ ಮೂಲಕ ದೇಹದ ಚಲನೆ, ಸ್ಮರಣಶಕ್ತಿ, ಭಾವನೆಗಳು, ನಡವಳಿಕೆ, ನಿದ್ದೆ, ನರಮಂಡಲದ ಕಾಯಿಲೆಗಳ ಅಧ್ಯಯನ ನಡೆಸಬಹುದು. ಇದರಿಂದ, ಉದಾಹರಣೆಗೆ, ವ್ಯಕ್ತಿ ಭಯಪಡುವಂತೆ ಮಾಡುವುದು ಯಾವ ನರಕೋಶ ಎಂಬುದನ್ನು ತಿಳಿಯಬಹುದು. ಇದೇ ವಿಧಾನವನ್ನು ಬಳಸಿ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಬಹುದು. ಪಾರ್ಕಿನ್ಸನ್ ಕಾಯಿಲೆಯಂತಹ ನರರೋಗಗಳನ್ನು ಗುಣಪಡಿಸಬಹುದು.

ಇಂದು ಭೌತಶಾಸ್ತ್ರ ಪ್ರಶಸ್ತಿ ಘೋಷಣೆ:

ಮಂಗಳವಾರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಘೋಷಿಸಲಾಗುವುದು. ಬುಧವಾರ ರಸಾಯನಶಾಸ್ತ್ರ ಹಾಗೂ ಗುರುವಾರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಿಗಲಿರುವ ಪ್ರಶಸ್ತಿಯ ಘೋಷಣೆಯಾಗಲಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕಕ್ಕೆ ಹೊರಟಿದ್ದ ಬ್ರಿಟನ್‌ ವಿಮಾನ ದಿಢೀರ್‌ 23000 ಅಡಿ ಕುಸಿದು ಆತಂಕ
ರಷ್ಯಾ ಸಂಶೋಧಕಿ ಸಾವು : ಪ್ಲೇಗ್‌ ಆತಂಕ