ಮಧುಬಲೆಗೆ ಎನ್‌ವಿಡಿಯಾ ಸಿಇಒ ತಲೆದಂಡ

Published : Nov 13, 2026, 12:23 PM IST
Nvidia

ಸಾರಾಂಶ

ಚೀನಾ ಮಹಿಳಾ ಉದ್ಯಮಿ ಜೊತೆಗಿನ ಅಕ್ರಮ ಸಂಬಂಧ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಗಂಭೀರ ಆತಂಕಗಳನ್ನು ಹುಟ್ಟುಹಾಕಿರುವ ಬೆನ್ನಲ್ಲೇ ಎನ್‌ವಿಡಿಯಾದ ಸಹಸಂಸ್ಥಾಪಕ, ಸಿಇಒ ಜೆನ್ಸನ್‌ ಹುವಾಂಗ್ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಹಾಂಕಾಂಗ್/ಮೆಲ್ಬರ್ನ್: ಚೀನಾ ಮಹಿಳಾ ಉದ್ಯಮಿ ಜೊತೆಗಿನ ಅಕ್ರಮ ಸಂಬಂಧ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಗಂಭೀರ ಆತಂಕಗಳನ್ನು ಹುಟ್ಟುಹಾಕಿರುವ ಬೆನ್ನಲ್ಲೇ ಎನ್‌ವಿಡಿಯಾದ ಸಹಸಂಸ್ಥಾಪಕ, ಸಿಇಒ ಜೆನ್ಸನ್‌ ಹುವಾಂಗ್ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮತ್ತು ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ.

33 ವರ್ಷಗಳ ಹಿಂದೆ ತಾವೇ ಸ್ಥಾಪಿಸಿದ್ದ ಕಂಪನಿ

33 ವರ್ಷಗಳ ಹಿಂದೆ ತಾವೇ ಸ್ಥಾಪಿಸಿದ್ದ ಕಂಪನಿಗೆ ಜೆನ್ಸನ್‌ ರಾಜೀನಾಮೆ ಸುದ್ದಿ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಚಿಪ್‌ ತಯಾರಿಕಾ ಕಂಪನಿಯಾದ ಎನ್‌ವಿಡಿಯಾದ ಷೇರು ಅಮೆರಿಕದ ಷೇರುಪೇಟೆಯಲ್ಲಿ ಶೇ.14ರಷ್ಟು ಭಾರೀ ಕುಸಿತ ಕಂಡಿದೆ. ಜೆನ್ಸನ್‌ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ ಕಂಪನಿ ಷೇರುಮಾರುಕಟ್ಟೆ ಮೌಲ್ಯ 50 ಲಕ್ಷ ಕೋಟಿಗೂ ಹೆಚ್ಚಿನ ಪ್ರಮಾಣದಲ್ಲಿ ಕರಗಿ ಹೋಗಿದೆ.

ಅಕ್ರಮ ಸಂಬಂಧ: ಚೀನಾದ ಗೂಢಚಾರಿಣಿ ಎಂದು ಶಂಕಿಸಲಾಗಿರುವ ಸಿಂಗಾಪುರ ಮೂಲದ ಮೆಗಾಸ್ಪೀಡ್‌ ಕಂಪನಿಯ ಆಲಿಸ್ ಹುವಾಂಗ್ ಎಂಬಾಕೆ ಜತೆ ಜೆನ್ಸನ್ ಸಂಬಂಧ ಹೊಂದಿದ್ದರು ಎಂಬ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅಮೆರಿಕದ ರಕ್ಷಣಾ ನಿಯಮಗಳ ಅನ್ವಯ ಎನ್‌ವಿಡಿಯಾ ಚಿಪ್‌ಗಳನ್ನು ಚೀನಾಕ್ಕೆ ಮಾರಾಟ ಮಾಡುವಂತಿಲ್ಲ. ಆದರೆ ಆಲಿಸ್‌, ಜೆನ್ಸನ್‌ ಜೊತೆಗಿನ ತಮ್ಮ ಆಪ್ತ ಸಂಬಂಧ ಬಳಸಿ, ಎನ್‌ವಿಡಿಯಾ ಚಿಪ್‌ಗಳನ್ನು ತಮ್ಮ ಕಂಪನಿ ಹೆಸರಲ್ಲಿ ಖರೀದಿಸಿ ಅದನ್ನು ಚೀನಾಕ್ಕೆ ಕಳುಹಿಸಿದ ಮತ್ತು ಚೀನಾ ಸರ್ಕಾರಕ್ಕೆ ಎನ್‌ವಿಡಿಯಾದ ಹಲವು ರಹಸ್ಯ ರವಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅಮೆರಿಕ ಮತ್ತು ಸಿಂಗಾಪುರ ಸರ್ಕಾರಗಳು ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಜೆನ್ಸನ್‌ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಅದರ ಬೆನ್ನಲ್ಲೇ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಎನ್‌ವಿಡಿಯಾ ಮಹತ್ವ:

ಎನ್‌ವಿಡಿಯಾ ಕಂಪನಿಯು, ಎಐ ಮತ್ತು ಡೇಟಾ ಸೆಂಟರ್‌ಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಚಿಪ್‌ಗಳ ವಿಶ್ವದ ಅತಿದೊಡ್ಡ ಪೂರೈಕೆದಾರನಾಗಿದ್ದು ಮಾರುಕಟ್ಟೆಯಲ್ಲಿ ಶೇ.80ಕ್ಕೂ ಹೆಚ್ಚಿನ ಏಕಸ್ವಾಮ್ಯ ಹೊಂದಿದೆ. ಓಪನ್‌ ಎಐ, ಆ್ಯಂಥ್ರೋಪಿಕ್‌ನಂತಹ ಪ್ರಮುಖ ಎಐ ಸಂಸ್ಥೆಗಳಿಂದ ಹಿಡಿದು ಭಾರತದ ರಿಲಯನ್ಸ್ ಮತ್ತು ಸರ್ವಂನಂತಹ ಕಂಪನಿಗಳ ಎಐ ಮೂಲಸೌಕರ್ಯಗಳವರೆಗೆ ಇಡೀ ಜಾಗತಿಕ ಎಐ ವ್ಯವಸ್ಥೆಯೇ ಎನ್‌ವಿಡಿಯಾ ಚಿಪ್‌ಗಳ ಮೇಲೆ ಅವಲಂಬಿತವಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕದ 2 ಅತಿದೊಡ್ಡ ನಗರಕ್ಕೆ ಭಾರತೀಯ ಮೂಲದ ಮೇಯರ್‌
ಅಮೆರಿಕ ಸಂಸತ್‌ ಚುನಾವಣೆ: ಟ್ರಂಪ್‌ಗೆ ಭಾರೀ ಮುಖಭಂಗ-ಟ್ರಂಪ್‌ ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ!