;Resize=(412,232))
- ಭಾರತೀಯ ಮೂಲದ ಮಮ್ದಾನಿ ಈಗ ನ್ಯೂಯಾರ್ಕ್ ಚುನಾವಣೆ ಗೆದ್ದಿದ್ದು ಕರ್ನಾಟಕ, ದಿಲ್ಲಿ ಮಾದರಿ ಗ್ಯಾರಂಟಿಗಳಿಂದ!ಅಮೆರಿಕದ ಇತರೆ ರಾಜ್ಯಗಳಲ್ಲೂ ಉಚಿತ ಭರವಸೆ ನೀಡುವ ಬಗ್ಗೆ ಜನನಾಯಕರ ಒಲವು
---
ಪವರ್ ಪಾಯಿಂಟ್
ಪ್ರಾಜ್ಞ ಕೆ.
ವಿಶ್ವದ ಬಂಡವಾಳಶಾಹಿಗಳ ರಾಜಧಾನಿಯಾದ ಅಮೆರಿಕದ ನ್ಯೂಯಾರ್ಕ್‌ನ ಹೃದಯ ಭಾಗದಲ್ಲಿ ಈ ವಾರ ದೊಡ್ಡದೊಂದು ಕಂಪನವೇ ಸಂಭವಿಸಿತು. ಡೆಮಾಕ್ರೆಟ್ ಪಕ್ಷದ ಸೋಷಿಯಲಿಸ್ಟ್ ನಾಯಕ, 34ರ ಹರೆಯದ ಜೊಹ್ರಾನ್ ಮಮ್ದಾನಿ, 2025ನೇ ಸಾಲಿನ ಮೇಯರ್ ಚುನಾವಣೆಯನ್ನು ತಮ್ಮ ಭರ್ಜರಿ ಗ್ಯಾರಂಟಿ ಕೊಡುಗೆಗಳ ಘೋಷಣೆ ಮೂಲಕ ಗೆದ್ದುಕೊಂಡರು. ಅದರಲ್ಲಿ ಉಚಿತ ಸಾರ್ವಜನಿಕ ಸಾರಿಗೆ, ಬಾಡಿಗೆ ಏರಿಕೆಗೆ ಕಡಿವಾಣ, ಸಾರ್ವತ್ರಿಕ ಶಿಶುಪಾಲನಾ ಭತ್ಯೆ ಮತ್ತಿತರೆ ಉಚಿತ ಘೋಷಣೆಗಳು ಸೇರಿದ್ದವು. ವಿಶೇಷವೆಂದರೆ ಈ ಎಲ್ಲಾ ಉಚಿತ ಕೊಡುಗೆಗಳು ಭಾರತದ ರಾಜಕೀಯದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆಗಿರುವ ಗ್ಯಾರಂಟಿ ಭಾಗ್ಯಗಳಿಂದಲೇ ನೇರವಾಗಿ ಸ್ಫೂರ್ತಿ ಪಡೆದಿದ್ದು! ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿದ್ದರಿಂದ ಹಿಡಿದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತಂಡುಕೊಡುವಲ್ಲಿ ಯಶಸ್ವಿಯಾದ ಯೋಜನೆಗಳೇ ನ್ಯೂಯಾರ್ಕ್‌ನ ಮೇಯರ್ ಚುನಾವಣೆಯ ಭರವಸೆಗಳಿಗೂ ಪ್ರೇರೇಪಣೆ ನೀಡಿದ್ದವು.
ಮಮ್ದಾನಿ ಅವರ ‘ಎನ್‌ವೈಸಿ ಪೀಪಲ್ಸ್ ಗ್ಯಾರಂಟಿ’ಗಳು ಅವರನ್ನು ಆ್ಯಂಡ್ರೂ ಕ್ಯುಮೋ, ಕರ್ಟಿಸ್ ಸಿಲ್ವಾರಂಥ ನಾಯಕರನ್ನು ಹಿಮ್ಮೆಟ್ಟಿಸಿ ನ್ಯೂಯಾರ್ಕ್‌ನ ಮೇಯರ್ ಹುದ್ದೆಗೆ ತಂದು ಕೂರಿಸಿದೆ. ಹಾಗೆ ನೋಡಿದರೆ ಇದು ಕೇವಲ ಸ್ಥಳೀಯ ಚುನಾವಣೆಯಲ್ಲಿನ ಅಚ್ಚರಿಯ ಫಲಿತಾಂಶದ ವಿದ್ಯಮಾನ ಎನ್ನಲಾಗದು. ಬದಲಾಗಿ ಇದು ಭವಿಷ್ಯದ ಮುನ್ಸೂಚನೆಯ ಘಟನೆ ಎಂದರೆ ತಪ್ಪಾಗಲಾರದು. ಭಾರತದ ರಾಜಕೀಯವನ್ನು ಬಹುಕಾಲದಿಂದಲೂ ಆವರಿಸಿಕೊಂಡು ಬಂದಿರುವ ಉಚಿತ ಕೊಡುಗೆಯ ಪರಿಪಾಠ ಇದೀಗ ಅಮೆರಿಕ ರಾಜಕೀಯ ವಲಯವನ್ನೂ ಪ್ರವೇಶ ಮಾಡಿದೆ. ಇದು, ಅಸಮಾನತೆಯ ಸಮಾಜದಲ್ಲಿ ರಾಜಕೀಯ ಪಕ್ಷಗಳು ಹೇಗೆ ಮತದಾರರನ್ನು ಸೆಳೆಯಬಹುದು ಎಂಬುದಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ.
ದೆಹಲಿ, ಕರ್ನಾಟಕದಲ್ಲಿ ಶುರುಇತ್ತೀಚಿನ ವರ್ಷಗಳಲ್ಲಿ ಭಾರತದ ರಾಜಕೀಯ ವಲಯದಲ್ಲಿ ಉಚಿತ ಕೊಡುಗೆಗಳ ಘೋಷಣೆ ಹೇಗೆ ಸ್ಫೋಟಗೊಂಡವು ಎಂಬುದರ ಮೇಲೊಮ್ಮೆ ಗಮನ ಹರಿಸಿದರೆ, ಅದು ನೇರವಾಗಿ ದೆಹಲಿಯತ್ತ ಸಾಗುತ್ತದೆ. ಆಮ್‌ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು 200 ಯುನಿಟ್ ಉಚಿತ ವಿದ್ಯುತ್, ಉಚಿತ ನೀರು, ನೆರೆಹೊರೆಯಲ್ಲಿ ಕ್ಲಿನಿಕ್‌ಗಳನ್ನು ಘೋಷಿಸುವ ಮೂಲಕ 2015ರಲ್ಲಿ ರಾಜಕೀಯ ವಲಯದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಬಳಿಕ 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೂಡಾ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಮಾಸಿಕ ಭತ್ಯೆ, ಯುವಕರಿಗೆ ಸ್ಟೈಪಂಡ್‌ನಂಥ ಪಂಚ ಗ್ಯಾರಂಟಿ ಘೋಷಿಸುವ ಮೂಲಕ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು.ಇವುಗಳೀಗ ಕೇವಲ ತಂತ್ರಗಳಾಗಿ ಉಳಿಯದೆ ಸಾರ್ವತ್ರಿಕವಾಗಿಬಿಟ್ಟಿವೆ.
ಒಂದೊಮ್ಮೆ ಇಂತಹ ಉಚಿತಗಳ ಟೀಕಾಕಾರ ಪಕ್ಷವಾಗಿದ್ದ ಬಿಜೆಪಿ, ಮಧ್ಯಪ್ರದೇಶ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಆರ್ಥಿಕ ನೆರವು, ಸಬ್ಸಿಡಿ ಸೇರಿದಂತೆ ತನ್ನದೇ ಆದ ರೀತಿಯಲ್ಲಿ ಅವುಗಳನ್ನು ಘೋಷಿಸಿತು. ತಮಿಳುನಾಡಿನ ಡಿಎಂಕೆ, ಒಡಿಶಾದ ಬಿಜೆಡಿಯಂತಹ ಸ್ಥಳೀಯ ಪಕ್ಷಗಳೂ ಈ ತಂತ್ರವನ್ನು ಅಳವಡಿಸಿಕೊಂಡಿವೆ. ಯಾಕೆಂದರೆ, ಈ ಸ್ಕೀಂಗಳು ಚುನಾವಣೆಯಲ್ಲಿ ಕೆಲಸ ಮಾಡುತ್ತವೆ. 80 ಕೋಟಿಗಿಂತಲೂ ಹೆಚ್ಚು ಜನರು ಸರ್ಕಾರ ಒದಗಿಸುವ ಆಹಾರದ ಮೇಲೆ ಅವಲಂಬಿತರಾಗಿರುವ ದೇಶದಲ್ಲಿ, ಇಂತಹ ಮೂರ್ತ ಪ್ರಯೋಜನಗಳು ವಾಕ್ಚಾತುರ್ಯವನ್ನೂ ಮೀರಿಸಿ ಮತದಾನವನ್ನು ಹೆಚ್ಚಿಸುತ್ತವೆ ಹಾಗೂ ಅಭೂತಪೂರ್ವ ಗೆಲುವಿಗೆ ಕಾರಣವಾಗುತ್ತವೆ.ಅಲ್ಲೂ ಬೆಂಗಳೂರು, ದಿಲ್ಲಿಯಂಥದ್ದೇ ಸ್ಥಿತಿ
ಈ ಮಾದರಿಯು ಕೇವಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗಷ್ಟೇ ಸೀಮಿತವಲ್ಲ ಎಂಬುದು ಮಮ್ದಾನಿಯ ಗೆಲುವಿನಿಂದ ಸಾಬೀತಾಗಿದೆ. ಮನೆಗಳ ಬಾಡಿಗೆ ಗಗನಮುಖಿಯಾಗಿರುವ (ಮ್ಯಾನ್‌ಹಟನ್‌ನಲ್ಲಿ ಮಾಸಿಕ 3.5 ಲಕ್ಷ ರು.), ಹೆಚ್ಚಿನ ದರ ಮತ್ತು ವೈಫಲ್ಯಗಳಿಂದ ತುಂಬಿರುವ ಸಾರಿಗೆ ವ್ಯವಸ್ಥೆಯು, ದೆಹಲಿ ಅಥವಾ ಬೆಂಗಳೂರಿನಲ್ಲಿ ದೈನಂದಿನ ಹೋರಾಟಗಳಂತಹ ಪರಿಸ್ಥಿತಿಯನ್ನೇ ಅಲ್ಲೂ ಸೃಷ್ಟಿಸಿದೆ. ಮಮ್ದಾನಿಯವರು ನೀಡಿದ, ಕರ್ನಾಟಕದ ಶಕ್ತಿ ಯೋಜನೆ ರೀತಿಯ ಉಚಿತ ಸಾರಿಗೆ ವ್ಯವಸ್ಥೆ, ಆಪ್ ಸರ್ಕಾರದ ಮಾದರಿಯಲ್ಲಿ ಉಚಿತ ವಿದ್ಯುತ್, ಸಿಟಿ ಕ್ಲಿನಿಕ್‌ಗಳ ಮೂಲಕ ಆರೋಗ್ಯ ಸೇವೆಯ ವಿಸ್ತರಣೆಯಂತಹ ಭರವಸೆಗಳು, ಯುವ ಮತದಾರರು, ವಲಸಿಗರು, ದುಡಿಯುವ ವರ್ಗದವರ ಅಗತ್ಯತೆಗಳನ್ನು ಪ್ರತಿಧ್ವನಿಸುವಂತಿದ್ದು, ಇದರಿಂದಲೇ ಅವರಿಗೆ ಶೇ.52ರಷ್ಟು ಜಯ ಲಭಿಸಿದೆ.
ಇದು ಕಾಕತಾಳೀಯವಲ್ಲ. ಕಾರಣ, ಚುನಾವಣಾ ಪ್ರಚಾರದ ಸಮಯದಲ್ಲೂ ಮಮ್ದಾನಿ ಈ ಭಾರತೀಯ ಆವಿಷ್ಕಾರಗಳಿಗೆ(ಉಚಿತಗಳು) ಬಹಿರಂಗವಾಗಿ ಮನ್ನಣೆ ನೀಡಿದ್ದರು ಹಾಗೂ ದೆಹಲಿಯು 3 ಕೋಟಿ ಜನರಿಗೆ ಹೇಗೆ ಸೌಲಭ್ಯಗಳನ್ನು ಒದಗಿಸುತ್ತದೆ ಎಂಬುದನ್ನು ಟಿಕ್‌ಟಾಕ್ ಬಳಸಿ ವಿವರಿಸಿದ್ದರು. ಒಂದು ಕಡೆ ಶ್ರೀಮಂತರು ಖಾಲಿ ಐಷಾರಾಮಿ ಮನೆಗಳನ್ನು ಖರೀದಿಸುತ್ತಿದ್ದು, ಇನ್ನೊಂದು ಕಡೆ ನಿರಾಶ್ರಿತರಾಗಿದ್ದರೆ, ಅಂತಹ ನಗರಗಳಲ್ಲಿ ಭಾಗ್ಯಗಳನ್ನು ಹಕ್ಕುಗಳೆಂದು ಪರಿಗಣಿಸಲಾಗುತ್ತದೆಯೇ ಹೊರತು ಉಚಿತಗಳೆಂದು ನೋಡಲಾಗುವುದಿಲ್ಲ.ಭಾರತದ ಸುಪ್ರೀಂಕೋರ್ಟ್ ಕೂಡ ಹಿಂದೊಮ್ಮೆ ಇಂಥ ಉಚಿತ ಕೊಡುಗೆಗಳ ಬಗ್ಗೆ ಪ್ರಶ್ನೆ ಮಾಡಿತ್ತು ಮತ್ತು ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆದರೆ ಅಂಕಿ ಅಂಶಗಳು ಬೇರೆಯದ್ದೇ ಕಥೆ ಹೇಳುತ್ತಿವೆ. ಉದಾಹರಣೆಗೆ ಕರ್ನಾಟಕದ ಗ್ಯಾರಂಟಿ ಯೋಜನೆಗಳು ರಾಜ್ಯ ಜಿಡಿಪಿಯ ಶೇ.2ರಷ್ಟು ಹಣವನ್ನು ಬಳಸಿಕೊಳ್ಳುತ್ತಿವೆ. ಜೊತೆಗೆ ಈ ಗ್ಯಾರಂಟಿಗಳು ಮಹಿಳೆಯರು ಕೆಲಸದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಮೂಲಕ ಆರ್ಥಿಕ ಚಟುವಟಿಕೆ ಗರಿಗೆದರಲು, ಯುವಸಮೂಹ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ನೆರವಾದವು.
ಇನ್ನು ದೆಹಲಿಯಲ್ಲಿ ಉಚಿತ ಯೋಜನೆಗಳು ಸರ್ಕಾರವನ್ನು ದಿವಾಳಿ ಮಾಡದೆಯೇ, ಜನರು ಇಂಧನ ಬಡತನ ನೀಗಿಸುವಲ್ಲಿ ಯಶಸ್ವಿಯಾಯಿತು.ಇನ್ನು ಪ್ರಗತಿಪರ ತೆರಿಗೆ ಜಾರಿ ಮೂಲಕ ಈ ಉಚಿತ ಕೊಡುಗೆಗಳ ಹೊರೆಯನ್ನು ಸಮರ್ಥವಾಗಿ ನಿಭಾಯಿಸುವ ಮಮ್ದಾನಿಯ ಯೋಜನೆ ಅಥವಾ ಭಾರತದಲ್ಲಿ ಯಶಸ್ವಿ ಆದಾಯ ನಿರ್ವಹಣೆಯ ವಿಷಯಗಳು ನಿರ್ದಿಷ್ಟ ಗುರಿಯ ಉಚಿತ ಕೊಡುಗೆಗಳು ವಿತ್ತೀಯವಾಗಿಯೂ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿವೆ.ಕಾರ್ಪೊರೆಟ್ ಉದ್ಯಮಿಗಳಿಗೆ ನೀಡಿದ ಸಾಲ ಮನ್ನಾ ಮತ್ತು ಶ್ರೀಮಂತರಿಗೆ ತೆರಿಗೆ ಕಡಿತದಂತ ಕ್ರಮಗಳಿಂದಾಗಿ ಅಮೆರಿಕ ಸರ್ಕಾರ ಲಕ್ಷಾಂತರ ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದ್ದರೂ ಆ ವಲಯ ಮಾತ್ರ ಇಂಥ ಉಚಿತ ಕೊಡುಗೆಗಳನ್ನು ಟೀಕಿಸುತ್ತಲೇ ಇದ್ದಾರೆ.
ಹೀಗಾಗಿ ಅಮೆರಿಕದಲ್ಲಿ ಇಂಥ ಬೆಳವಣಿಗೆ ಕೇವಲ ಅಪರೂಪದ ಘಟನೆ ಎಂದು ಪರಿಗಣಿಸಲಾಗದು. ಚುನಾವಣೆಯ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ಪೆನ್ಸಿಲ್ವೇನಿಯಾ, ಮಿಚಿಗನ್ ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಕೈಗಾರಿಕೆಗಳಲ್ಲಿನ ಉದ್ಯೋಗ ಕುಸಿತ, ಆರೋಗ್ಯ ವಲಯದ ವಿಷಯಗಳು ದೊಡ್ಡಮಟ್ಟಿನ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ರಾಜ್ಯಗಳಲ್ಲೂ ಮಮ್ದಾನಿ ಅವರ ಡೆಮಾಕ್ರೆಟ್ ಪಕ್ಷದ ನಾಯಕರು ಇಂಥದ್ಧೇ ಉಚಿತ ಕೊಡುಗೆಯ ಭರವಸೆ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಇನ್ನೊಂದೆಡೆ ರಿಪಬ್ಲಿಕನ್ ಪಕ್ಷದ ನಾಯಕರು ಕೂಡ ಇಂಥದ್ದೇ ಭರವಸೆ ಘೋಷಣೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲೂ ಇದರ ಕುರುಹು ಸಿಕ್ಕಿತ್ತು. ಕಮಲಾ ಹ್ಯಾರಿಸ್ ಅವರು 17 ವರ್ಷಕ್ಕಿಂತ ಸಣ್ಣ ಮಕ್ಕಳನ್ನು ಹೊಂದಿದವರಿಗೆ ತೆರಿಗೆಯಲ್ಲಿ ವಿನಾಯಿತಿ, ವಸತಿ ನೆರವಿನಂತಹ ಭರವಸೆಗಳನ್ನು ನೀಡಿದ್ದರೆ, ಡೊನಾಲ್ಡ್ ಟ್ರಂಪ್ ಕೂಡ ಕೈಗಾರಿಕೆಗಳಿಗೆ ಪರೋಕ್ಷವಾಗಿ ಸಹಾಯಧನ ನೀಡುವ ಸುಂಕಗಳ ಹೇರಿಕೆಯ ಘೋಷಣೆ ಮಾಡಿದ್ದರು. ಮಧ್ಯಮ ವರ್ಗದವರಿಗೆ ಹೋಲಿಸಿದರೆ, ಉನ್ನತ ವರ್ಗದ ಶೇ.1ರಷ್ಟು ಜನರು ದೇಶದ ಅತ್ಯಧಿಕ ಸಂಪತ್ತನ್ನು ಹೊಂದಿರುವ ಹೊತ್ತಿನಲ್ಲಿ, ಮತದಾರರಿಗೆ ಇಂತಹ ಕೊಡುಗೆಗಳು ನಿರಾಳತೆಯನ್ನುಂಟುಮಾಡುತ್ತದೆ.
ಸಮೀಕ್ಷೆಗಳ ಪ್ರಕಾರ ಶೇ.70ರಷ್ಟು ಅಮೆರಿಕನ್ನರು ಸಾರ್ವತ್ರಿಕ ಆರೋಗ್ಯ ರಕ್ಷಣಾ ಅಂಶಗಳನ್ನು ಬೆಂಬಲಿಸುತ್ತಾರೆ. ಅಂತೆಯೇ, ಮಮ್ದಾನಿಯವರಿಗೆ ಭರ್ಜರಿ ಬೆಂಬಲ ನೀಡಿದ ಯುವಕರು ಸಾಲ ಮನ್ನಾದಂತಹ ಅಂಶಗಳನ್ನು ಪ್ರತಿಪಾದಿಸುತ್ತಾರೆ ಎಂದು ತಿಳಿದುಬಂದಿದೆ.ಉಚಿತಗಳ ವ್ಯಾಪಕತೆಯು ಕ್ರಮೇಣವಾಗಿ ನಡೆದು, ಬಳಿಕ ಅನಿವಾರ್ಯವಾಗುತ್ತವೆ. ಭಾರತದಲ್ಲೂ ಸ್ಥಳೀಯ ಮಟ್ಟದ ಪ್ರಯೋಗಗಳಾಗಿ ಶುರುವಾದ ಇವುಗಳು ಈಗ ರಾಷ್ಟ್ರೀಯ ಮಟ್ಟದ ತಂತ್ರವಾಗಿವೆ. 2030ರ ಹೊತ್ತಿಗೆ ಅಮೆರಿಕದ ಗ್ಯಾರೆಂಟಿಗಳು ಟೆಕ್ಸಸ್‌ನಿಂದ ಹಿಡಿದು ಕ್ಯಾಲಿಫೋರ್ನಿಯಾದ ವರೆಗೆ ವಿಸ್ತರಿಸಲಿವೆ. ಈ ಬದಲಾವಣೆಯು, ನವ ಉದಾರವಾದಿ ಸಿದ್ಧಾಂತವನ್ನು ಪ್ರಶ್ನಿಸುತ್ತದೆ. ಇದು ಸರ್ಕಾರವು ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವ, ತಳಮಟ್ಟದಿಂದ ಬೆಳವಣಿಗೆಯನ್ನು ಉತ್ತೇಜಿಸುವ ಸಾಮಾಜಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಇದರಲ್ಲಿ ಖಂಡಿತವಾಗಿಯೂ ಕೆಲ ಅಪಾಯಗಳಿವೆ. ಭಾರತದಲ್ಲಿ ಭ್ರಷ್ಟಾಚಾರ, ಹಗರಣ ಮತ್ತು ಅನುಷ್ಠಾನದ ದೋಷಗಳು ಕಂಡುಬಂದಿವೆ. ಆದರೆ ಅಮೆರಿಕ ಹೀಗಾಗದಂತೆ ಪಾರದರ್ಶಕತೆಯ ಮೂಲಕ ಎಚ್ಚತಿಕೆ ವಹಿಸಬೇಕು. ಆದರೆ ಅದನ್ನು ಸಮಾಜವಾದ ಎಂದು ತಳ್ಳಿಹಾಕುವುದರಿಂದ ವಾಸ್ತವಿಕತೆಯನ್ನು ನಿರ್ಲಕ್ಷಿಸಿದಂತಾಗುತ್ತದೆ. ಬಂಡವಾಳಶಾಹಿ ಸಮಾಜದಲ್ಲಿ ಈ ನೀತಿಗಳು ವ್ಯವಸ್ಥೆಯನ್ನು ಮಾನವೀಯಗೊಳಿಸುತ್ತವೆ, ಅಶಾಂತಿಯನ್ನು ತಡೆಯುತ್ತವೆ.
ಮಮ್ದಾನಿಯ ಗೆಲುವು ಕರೆಗಂಟೆಯಾಗಿದೆ. ಗ್ಯಾರಂಟಿ ರಾಜಕೀಯವು ಭಾರತದಿಂದ ಅಮೆರಿಕದತ್ತ ವಲಸೆ ಹೋಗುತ್ತಿದ್ದಂತೆ, ಅದು ವಿಭಜನೆಗಳನ್ನು ಸೇತುವೆ ಮಾಡಬಹುದು, ದಿಟ್ಟ ಭರವಸೆಗಳು ಉಡುಗೊರೆಗಳಲ್ಲ - ಅವು ಜನರಲ್ಲಿ ಹೂಡಿಕೆಗಳು ಎಂದು ಸಾಬೀತುಪಡಿಸುತ್ತದೆ.