;Resize=(412,232))
ಬೆಂಗಳೂರು : ಸಾರ್ವಜನಿಕರಿಗೆ ಒಂದು ದಿನದ ಮಟ್ಟಿಗೆ ಟ್ರಾಫಿಕ್ ಪೊಲೀಸ್ ಆಗುವ ಸುವರ್ಣ ಅವಕಾಶವನ್ನು ನಗರದ ಸಂಚಾರ ಪೊಲೀಸರು ಕಲ್ಪಿಸಿದ್ದಾರೆ.
18 ವರ್ಷ ಮೇಲ್ಪಟ್ಟವರು ಮತ್ತು ದೈಹಿಕವಾಗಿ ಫಿಟ್ ಆಗಿ ಇರುವವರು ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಸಂಚಾರ ಪೊಲೀಸರ ಸಮವಸ್ತ್ರವನ್ನು ತೊಟ್ಟು, ಪೊಲೀಸರ ಜಾಗದಲ್ಲಿ ನಿಂತು, ಪೊಲೀಸರ ದಿನನಿತ್ಯದ ಸವಾಲು ಮತ್ತು ಜವಾಬ್ದಾರಿಯನ್ನು ನೋಡಬಹುದಾಗಿದೆ. ಹೀಗೆ ಕರ್ತವ್ಯ ನಿರ್ವಹಿಸಿದಂತಹವರಿಗೆ ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಸರ್ಟೀಫಿಕೆಟ್ ಕೂಡ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ಪೊಲೀಸರು ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಉರಿ ಬಿಸಿಲು, ವಾಹನಗಳ ಹೊಗೆ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಗಂಟೆಗಟ್ಟಲೇ ನಿಂತುಕೊಂಡು ಕೆಲಸ ಮಾಡುತ್ತಾರೆ. ಈ ವಿನೂತನ ಯೋಜನೆಯಿಂದ ಜನಸಾಮಾನ್ಯರಿಗೂ ಸಂಚಾರ ಪೊಲೀಸರ ಕಷ್ಟವೇನು ಎಂಬುದು ತಿಳಿಯಲಿದೆ.
ನಿಮ್ಮ ಮೊಬೈಲ್‌ನಲ್ಲಿ ಬಿಟಿಪಿ ಅಸ್ತ್ರಂ ಆ್ಯಪ್ ಅನ್ನು ಡೋನ್ ಲೋಡ್ ಮಾಡಿಕೊಂಡು ಅಲ್ಲಿ ಸಿಟಿಜನ್ ಸರ್ವಿಸ್ ಸೆಲೆಕ್ಟ್ ಮಾಡಿಕೊಳ್ಳಿ. ಟ್ರಾಫಿಕ್ ಕಾಪ್ ಫಾರ್ ಎ ಡೇ ಎಂಬುದರ ಮೇಲೆ ಟ್ಯಾಪ್ ಮಾಡಿ. ಅಲ್ಲಿ ನಿಮ್ಮ ವೈಯಕ್ತಿಕ ವಿವರವನ್ನು ತುಂಬಿರಿ. ನಂತರ ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಯಾವುದಾದರು ಒಂದು ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ. ಬಳಿಕ ನಿಮ್ಮ ಆದ್ಯತೆಯ ಸ್ಥಳ ಮತ್ತು ಸಂಚಾರ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಬಯಸಿದ ನಿರ್ದಿಷ್ಟ ರಸ್ತೆ ಅಥವಾ ಜಂಕ್ಷನ್ ಕೂಡ ಆಯ್ಕೆ ಮಾಡಬಹುದು. ಜತೆಗೆ ಕರ್ತವ್ಯ ನಿರ್ವಹಿಸುವ ದಿನಾಂಕವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನೀವು ಸಲ್ಲಿಸಿದ ಅರ್ಜಿಯನ್ನು ಸಂಚಾರ ಪೊಲೀಸರ ತಂಡವು ಅದನ್ನು ಪರಿಶೀಲನೆ ನಡೆಸಿ ನಿಮ್ಮನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುತ್ತಾರೆ.
ಸಾರ್ವಜನಿಕರಿಗೆ ಒಂದು ದಿನದ ಮಟ್ಟಿಗೆ ಟ್ರಾಫಿಕ್ ಪೊಲೀಸ್ ಆಗುವ ಅವಕಾಶವನ್ನು ಕಲ್ಪಿಸಲಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳವಾರ ಸಂಜೆವರೆಗೂ 614 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಕಾರ್ತಿಕ್ ರೆಡ್ಡಿ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ