ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಆರ್‌ಬಿಐ ಬ್ಯಾಂಕಿನಲ್ಲಿ ಬದಲಾವಣೆಗೆ ಯತ್ನಿಸಿದ ಸಂಬಂಧ ಐದು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಆರ್‌ಬಿಐ ಬ್ಯಾಂಕಿನಲ್ಲಿ ಬದಲಾವಣೆಗೆ ಯತ್ನಿಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ.ಅಫ್ಜಲ್‌ ಹುಸೇನ್‌ (29), ಪಾಂಡಿಚೇರಿ ಮೂಲದ ಪ್ರಸೀತ್‌ (47), ಕೇರಳ ಮೂಲದ ಮೊಹಮ್ಮದ್ ಅಫ್ನಾಸ್‌ (34), ನೂರುದ್ದೀನ್‌ ಅಲಿಯಾಸ್‌ ಅನ್ವರ್‌ (34) ಹಾಗೂ ಪ್ರಿಯೇಶ್‌ (34) ಬಂಧಿತರು. ಆರೋಪಿಗಳಿಂದ ₹52.40 ಲಕ್ಷ ಮೌಲ್ಯದ ಎರಡು ಸಾವಿರ ರುಪಾಯಿ ಮುಖಬೆಲೆಯ ನಕಲಿ ನೋಟುಗಳು ಹಾಗೂ ಎರಡು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.

ಬಳ್ಳಾರಿ ಮೂಲದ ಆರೋಪಿ ಅಫ್ಜಲ್‌ ಹುಸೇನ್‌ ಸೆ.9ರಂದು ನೃಪತುಂಗ ರಸ್ತೆಯ ಆರ್‌ಬಿಐ ಬ್ಯಾಂಕ್‌ಗೆ ಬಂದು, ₹2 ಸಾವಿರ ಮುಖಬೆಲೆಯ ₹24.68 ಲಕ್ಷವನ್ನು ₹500 ಮುಖಬೆಲೆಯ ನೋಟುಗಳಿಗೆ ಬದಲಾವಣೆಗೆ ಮುಂದಾಗಿದ್ದ. ಈ ವೇಳೆ ಆರ್‌ಬಿಐ ಬ್ಯಾಂಕಿನ ಅಧಿಕಾರಿಗಳು ಈ ಎರಡು ಸಾವಿರ ರು. ಮುಖ ಬೆಲೆಯ ನೋಟುಗಳ ನೈಜತೆ ಪರೀಕ್ಷಿಸಿದಾಗ ಅವು ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.

ಈ ಸಂಬಂಧ ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್‌ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ಜಲ್ ಹುಸೇನ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈ ನಕಲಿ ನೋಟು ದಂಧೆಯ ಬಯಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ₹27.72 ಲಕ್ಷ ಮೌಲ್ಯದ ಎರಡು ಸಾವಿರ ರು. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾನೈಟ್‌ ವ್ಯವಹಾರ:

ಆರೋಪಿ ಅಫ್ಜಲ್‌ ಹುಸೇನ್‌ ಬಳ್ಳಾರಿಯಲ್ಲಿ ಗ್ರಾನೈಟ್‌ ವ್ಯವಹಾರ ನಡೆಸುತ್ತಿದ್ದಾನೆ. ಕೇರಳ ಮೂಲದ ಆರೋಪಿ ನೂರುದ್ದೀನ್‌ಗೆ ಗ್ರಾನೈಟ್‌ ವ್ಯವಹಾರ ಸಂಬಂಧ ಅಫ್ಜಲ್‌ ಹುಸೇನ್‌ಗೆ ₹25 ಲಕ್ಷ ನೀಡಬೇಕಿತ್ತು. ಈ ಹಣವನ್ನು ಕೊಡುವಂತೆ ಕೇಳಿದಾಗ, ತನ್ನ ಬಳಿ ₹500 ಮುಖಬೆಲೆಯ ನೋಟುಗಳು ಇಲ್ಲ. ಎರಡು ಸಾವಿರ ರು. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು ₹500 ಮುಖ ಬೆಲೆಯ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅದರಂತೆ ಆರೋಪಿ ಅಫ್ಜಲ್‌ ಹುಸೇನ್‌ ಸೆ.9ರಂದು ₹24.68 ಲಕ್ಷ ಮೌಲ್ಯದ ಎರಡು ಸಾವಿರ ರು. ಮುಖಬೆಲೆಯ ನೋಟುಗಳನ್ನು ತೆಗೆದುಕೊಂಡು ಆರ್‌ಬಿಐ ಬ್ಯಾಂಕ್‌ಗೆ ಬಂದು ಬದಲಾವಣೆಗೆ ಮುಂದಾಗಿದ್ದ.ಕೇರಳದಲ್ಲಿ ಖೋಟಾ ನೋಟು ಮುದ್ರಣ

ಕೇರಳದ ಕಾಸರಗೋಡು ಜಿಲ್ಲೆಯ ಚರ್ಕಳಾದಲ್ಲಿ ಆರೋಪಿ ಪ್ರಿಯೇಶ್‌ ಕಳೆದ 20 ವರ್ಷಗಳಿಂದ ಪ್ರಿಂಟಿಂಗ್‌ ಪ್ರೆಸ್‌ ನಡೆಸುತ್ತಿದ್ದಾನೆ. ಆರೋಪಿಯು ಕ್ಯಾಲಿಕಟ್‌ನಿಂದ ವಿಶೇಷ ಪೇಪರ್‌ ಹಾಗೂ ನೋಟು ತಯಾರಿಸುವ ಸಾಮಾಗ್ರಿಗಳನ್ನು ತಂದು ತನ್ನದೇ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗಾಗಿ ಆರೋಪಿ ನೂರುದ್ದೀನ್‌ಗೆ ನೀಡಿದ್ದ. ಈ ನೂರುದ್ದೀನ್‌ ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಈ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ನಕಲಿ ನೋಟುಗಳ ಚಲಾವಣೆಗೆ ವಿಡಿಯೋ

ಆರೋಪಿಗಳಾದ ನೂರುದ್ದೀನ್‌ ಮತ್ತು ಮೊಹಮ್ಮದ್‌ ಅಫ್ನಾಸ್‌ ಈ ನಕಲಿ ನೋಟುಗಳನ್ನು ವಿಡಿಯೋ ಮಾಡಿ ಚಲಾವಣೆಗೆ ಮಾಡಿಸಲು ಹಲವು ಜನರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪಿ ಪ್ರಿಯೇಶ್‌ನನ್ನು ಈ ಹಿಂದೆ ಮಂಗಳೂರು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈತನನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ನಕಲಿ ನೋಟು ದಂಧೆಯ ರಹಸ್ಯ ಬಯಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.