ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

| Published : Oct 31 2025, 02:00 AM IST

ಸಾರಾಂಶ

ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಶಿವಪುರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಮಧ್ಯರಾತ್ರಿ ಜರುಗಿದೆ. ಮಂಡ್ಯ ತಾಲೂಕು ಸಾತನೂರು ಗ್ರಾಮದ ಕೃಷ್ಣರ ಪುತ್ರ ವಿನಯ್ (23) ಮೃತಪಟ್ಟ ಬೈಕ್ ಸವಾರ.

ಕನ್ನಡಪ್ರಭ ವಾರ್ತೆ ಮದ್ದೂರು

ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಶಿವಪುರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಮಧ್ಯರಾತ್ರಿ ಜರುಗಿದೆ.

ಮಂಡ್ಯ ತಾಲೂಕು ಸಾತನೂರು ಗ್ರಾಮದ ಕೃಷ್ಣರ ಪುತ್ರ ವಿನಯ್ (23) ಮೃತಪಟ್ಟ ಬೈಕ್ ಸವಾರ. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ರಕ್ತಸ್ರಾವವಾಗಿ ವಿನಯ್ ಸ್ಥಳದಲ್ಲಿ ಕೊನೆ ಉಸಿರೆಳೆದಿದ್ದಾನೆ.

ಬೈಕ್‌ನಲ್ಲಿ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದ ಸದರಿ ಗ್ರಾಮದ ಲೇ.ಶ್ರೀನಿವಾಸ್ ಪುತ್ರ ಮನೀಶ್ (26) ತಲೆ ಮತ್ತು ಕೈ ಕಾಲುಗಳಿಗೆ ತೀವ್ರ ಗಾಯವಾಗಿ ಈತನಿಗೆ ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿನಯ್ ಹಾಗೂ ಗಾಯಾಳು ಮನೀಶ್ ಬೈಕ್ ನಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ ತೆರಳಿ ಸಾತನೂರು ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಮಧ್ಯರಾತ್ರಿ 12:30 ಸುಮಾರಿಗೆ ಬೆಂಗಳೂರು ಮೈಸೂರು ಹಳೇ ಹೆದ್ದಾರಿಯ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಬೈಕ್ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಮದ್ದೂರು:

ತಾಲೂಕಿನ ಕೆ.ಹೊನ್ನಲಗೆರೆ ಸಮೀಪದ ಡಿ.ಹೊಸೂರು ಗ್ರಾಮದ ಅಪ್ಪು ಡಾಬಾ ಬಳಿ ಕಳೆದ ಸೋಮವಾರ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.

ತಾಲೂಕಿನ ತೊಪ್ಪನಹಳ್ಳಿಯ ಚಿಕ್ಕೋನು ಪುತ್ರ ಟಿ.ಸಿ.ಕಿರಣ್ ಮೃತಪಟ್ಟ ಬೈಕ್ ಚಾಲಕ. ಅಪಘಾತದಲ್ಲಿ ತಲೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ಗಾಯಗೊಂಡಿದ್ದ ಕಿರಣ್ ನನ್ನು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.