ಕಾರು-ಬೈಕ್‌ ಅಪಘಾತ: ಸವಾರ ಸಾವು, ಹಿಂಬದಿ ಸವಾರ ಗಂಭೀರ!

| Published : Mar 31 2024, 02:03 AM IST

ಸಾರಾಂಶ

ವೇಗವಾಗಿ ಬಂದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೇಗವಾಗಿ ಬಂದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರ್ತೂರು ನಿವಾಸಿ ಪ್ರಭು ತಮಿಳುಸೆಲ್ವನ್ (30) ಮೃತ ಸವಾರ. ಘಟನೆಯಲ್ಲಿ ಗಾಯಗೊಂಡಿರುವ ಹಿಂಬದಿ ಸವಾರ ಅಚಿತ್‌ಗೌಡ (23) ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೃತ್ಯ ಎಸಗಿದ ಕಾರು ಚಾಲಕ ರಾಮನಗರ ಮೂಲದ ತಿಮ್ಮರಾಜು (25) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಲಿ ರೈಡ್‌ ಹೋಗಿದ್ದಾಗ ಅಪಘಾತ:ತಮಿಳುನಾಡು ಮೂಲದ ಪ್ರಭು ತಮಿಳು ಸೆಲ್ವನ್ ಸುಮಾರು ಹತ್ತು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶುಕ್ರವಾರ ತಡರಾತ್ರಿ ಸ್ನೇಹಿತ ಅಚಿತ್‌ಗೌಡ ಜತೆ ಇಂದಿರಾನಗರಕ್ಕೆ ಬಂದಿದ್ದ ಪ್ರಭು, ಕ್ಯಾಬ್‌ನಲ್ಲಿ ವರ್ತೂರಿನ ಮನೆಗೆ ಹೋಗಿದ್ದಾರೆ. ಬಳಿಕ ಇಬ್ಬರು ಬುಲೆಟ್‌ ಬೈಕ್‌ನಲ್ಲಿ ಜಾಲಿರೈಡ್‌ ಹೋಗಿದ್ದರು.

ಈ ವೇಳೆ ವರ್ತೂರು ಕೋಡಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು, ಏಕಾಏಕಿ ಬಲಕ್ಕೆ ತಿರುವು ಪಡೆದು ಮುಂದೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಪ್ರಭು ಹಾಗೂ ಹಿಂಬದಿ ಸವಾರ ಅಚಿತ್‌ಗೌಡ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದ ಪ್ರಭು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆಯೇ ಮೃತಪಟ್ಟರು. ಹಿಂಬದಿ ಸವಾರ ಅಚಿತ್‌ಗೌಡ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರು ಚಾಲಕ ವಶಕ್ಕೆ:

ಅಪಘಾತಕ್ಕೆ ಕಾರು ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಸಂಬಂಧ ಕಾರು ಚಾಲಕ ತಿಮ್ಮರಾಜು ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ವೈಟ್‌ಫೀಲ್ಡ್‌ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.