ಸಾರಾಂಶ
ಆರ್‌ಆರ್ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಸಿದ ಮೂವರು ಆರೋಪಿಗಳಿಗೆ ನಗರದ 3ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಬೆಂಗಳೂರು: ಆರ್‌ಆರ್ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಸಿದ ಮೂವರು ಆರೋಪಿಗಳಿಗೆ ನಗರದ 3ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ನಂದಿನಿ ಲೇಔಟ್ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳಾದ ಅಶ್ವತ್ಥ್ , ವಿಶ್ವಮೂರ್ತಿ ಮತ್ತು ವಿಶ್ವ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಈ ಆದೇಶ ಮಾಡಿದೆ. ಆರೋಪಿಗಳು ತಲಾ 50 ಸಾವಿರ ರು. ವೈಯಕ್ತಿಕ ಬಾಂಡ್, 4,500 ರು. ಹಣದ ಭದ್ರತಾ ಖಾತರಿ ನೀಡಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ನಗರ ಬಿಟ್ಟು ತೆರಳಬಾರದು ಎಂದು ಷರತ್ತು ವಿಧಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ತಮ್ಮ ಮೇಲೆ ಹೊರಿಸಿರುವ ಅಪರಾಧ ಕೃತ್ಯವನ್ನು ಅವರು ಎಸಗಿಲ್ಲ. ಜಾಮೀನು ನೀಡಬಹುದಾದ ಅಪರಾಧ ಕೃತ್ಯಗಳನ್ನು ಅವರ ಮೇಲೆ ಹೊರಿಸಲಾಗಿದೆ. ಆ ಅಪರಾಧಗಳಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿಲ್ಲ. ಆರು ತಿಂಗಳಿಂದ ಗರಿಷ್ಠ ಒಂದು ವರ್ಷದಿಂದ ಶಿಕ್ಷೆ ವಿಧಿಸಬಹುದು. ದೂರುದಾರ ಮುನಿರತ್ನ ವಿರುದ್ಧ ಮೊಟ್ಟೆ ದಾಳಿ ಪ್ರಕರಣ ಮಧ್ಯಾಹ್ನ 12ಕ್ಕೆ ನಡೆದಿದೆ. ಆದರೆ, ಅವರು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನೀಡಿರುವ ಹೇಳಿಕೆ ಆಧರಿಸಿ 9 ಗಂಟೆಗೆ ದೂರು ದಾಖಲಿಸಲಾಗಿದೆ. ಆ ಮೂಲಕ ದೂರು ದಾಖಲಿಸುವಲ್ಲಿ ವಿಳಂಬ ಮಾಡಲಾಗಿದ್ದು, ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಸಂಜಯ್ ಯಾದವ್ ಪರ ವಕಾಲತ್ತು ವಹಿಸಿದ್ದರು.
ಮುನಿರತ್ನ ಅವರು ಬಿಬಿಎಂಪಿ ಲಗ್ಗೆರೆ ವಾರ್ಡ್‌ನ ಲಕ್ಷ್ಮೀ ದೇವಿ ನಗರದಲ್ಲಿ ಬಿಜೆಪಿ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಯಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುವಾಗ ಮುನಿರತ್ನ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದರು. ಈ ಕೃತ್ಯ ಎಸಗಿದ ಕೂಡಲೇ ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದರು.