ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಮ್ಮನಹಳ್ಳಿ ಹೋಟೆಲ್‌ನಲ್ಲಿ ಬುಧವಾರ ನಡೆದಿದ್ದ ರೌಡಿ ದಿನೇಶ್ ಕುಮಾರ್ ಕೊಲೆ ಪ್ರಕರಣ ಸಂಬಂಧ ಮೃತನ ಎದುರಾಳಿ ತಂಡದ ಇಬ್ಬರು ರೌಡಿಗಳು ಸೇರಿದಂತೆ 12 ಮಂದಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿ ನಗರದ ರೌಡಿಗಳಾದ ದಿಲೀಪ್ ಸಾಗರ್, ಅಜಯ್ ಕ್ರಿಸ್ಟೋಫರ್, ಇವರ ಸಹಚರರಾದ ಅರವಿಂದ್, ನಿಖಿಲ್ ಅಲಿಯಾಸ್ ವಿಕ್ಕಿ, ಗೌತಮ್, ದರ್ಶನ್, ಮೆಲ್ವಿನ್, ಕಾರ್ತಿಕ್, ಸತೀಶ್, ಕಿಶೋರ್, ದಿವಾಕರ್ ಹಾಗೂ ಶೇಖರ್ ಬಂಧಿತರಾಗಿದ್ದು, ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಮ್ಮನಹಳ್ಳಿಯ ಪ್ಯಾರಡೇಸ್ ಇನ್ ಹೋಟೆಲ್‌ನಲ್ಲಿ ಬುಧವಾರ ಮಧ್ಯಾಹ್ನ ಕೊಠಡಿ ಪಡೆಯುವಾಗ ದಿನೇಶ್‌ಕುಮಾರ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಹಂತಕ ಪಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಂಬಿದ್ದ ಹುಡುಗರಿಂದಲೇ ಹತ್ಯೆ: ಹಲವು ವರ್ಷಗಳಿಂದ ರಾಮಮೂರ್ತಿನಗರದ ರೌಡಿಗಳಾದ ದಿನೇಶ್ ಕುಮಾರ್ ಜತೆ ಅಜಯ್, ಅರವಿಂದ್ ಮತ್ತು ದಿಲೀಪ್‌ಗೆ ವೈರತ್ವ ಇದ್ದು, ಪರಸ್ಪರ ಹತ್ಯೆಗೆ ಕತ್ತಿ ಮಸೆಯುತ್ತಿದ್ದರು.
ಇತ್ತೀಚೆಗೆ ಈ ಮೂವರಿಗೆ ಕೊಲೆ ಮಾಡುವುದಾಗಿ ಪದೇ ಪದೇ ದಿನೇಶ್ ಕುಮಾರ ಬೆದರಿಕೆ ಹಾಕುತ್ತಿದ್ದ. ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಮಿಳುನಾಡಿನಲ್ಲಿ ಇದ್ದು, ಅಲ್ಲಿಂದಲೇ ಬಾಣಸವಾಡಿ ಹಾಗೂ ಕಮ್ಮನಹಳ್ಳಿ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಆತ ಯತ್ನಿಸಿದ್ದ.
ಇತ್ತೀಚೆಗೆ ತನ್ನ ಶತ್ರುಗಳ ಕೊಲೆಗೆ ಸಂಚು ರೂಪಿಸಿದ ದಿನೇಶ್, ಇದಕ್ಕಾಗಿ ರಾಮಮೂರ್ತಿ ಹಾಗೂ ಬಾಣಸವಾಡಿ ವ್ಯಾಪ್ತಿಯ ಹತ್ತು ಹುಡುಗರನ್ನು ಸೇರಿಸಿಕೊಂಡು ತಂಡ ರಚಿಸಿದ್ದ. ಆದರೆ ತಮ್ಮ ಹತ್ಯೆಗೆ ದಿನೇಶ್ ಹೊಂಚು ಹಾಕಿರುವ ಮಾಹಿತಿ ಆತನ ಸಹಚರರಿಂದಲೇ ಎದುರಾಳಿ ಪಡೆಗೆ ಸಿಕ್ಕಿತು.
ಈ ವಿಷಯ ತಿಳಿದ ಕೂಡಲೇ ಎಚ್ಚೆತ್ತ ದಿಲೀಪ್, ತನ್ನನ್ನು ಕೊಲ್ಲಲು ಸಜ್ಜಾಗಿರುವ ದಿನೇಶ್‌ನಿಗೆ ಆತನ ಜೊತೆಗಾರರಿಂದಲೇ ಸ್ಮಶಾನದ ಹಾದಿ ತೋರಿಸಲು ಮುಂದಾದ.
ಇದಕ್ಕೆ ಅರವಿಂದ್ ಹಾಗೂ ಅಜಯ್ ಸಾಥ್ ಕೊಟ್ಟಿದ್ದಾರೆ. ಆದರೆ ಈ ವಿಚಾರ ತಿಳಿಯದೆ ದಿನೇಶ್, ತನ್ನ ಶತ್ರುಗಳ ಹತ್ಯೆ ಮಾತುಕತೆ ಸಂಬಂಧ ಕಮ್ಮನಹಳ್ಳಿ ಹೋಟೆಲ್‌ಗೆ ನಿಖಿಲ್ ಸೇರಿದಂತೆ ಹತ್ತು ಮಂದಿಯನ್ನು ಕರೆದಿದ್ದ. ಈ ಮೀಟಿಂಗ್ ವಿಚಾರ ತಿಳಿದ ದಿಲೀಪ್, ಆ ಮೀಟಿಂಗ್‌ನಲ್ಲೇ ದಿನೇಶ್‌ನನ್ನು ಹತ್ಯೆ ಮಾಡುವಂತೆ ಸೂಚಿಸಿದ್ದ.
ಪೂರ್ವನಿಗದಿಯಂತೆ ಕಮ್ಮನಹಳ್ಳಿ ಪ್ಯಾರಡೇಸ್ ಇ ಹೋಟೆಲ್‌ಗೆ ಮಧ್ಯಾಹ್ನ ದಿನೇಶ್ ಬಂದಿದ್ದ. ಆ ವೇಳೆ ರೂಮ್ ಪಡೆಯಲು ಹಣ ಪಾವತಿಸುವ ವೇಳೆ ಆತನ ಮೇಲೆ ಅವನ ಜೊತೆಯಲ್ಲಿದ್ದ ಅರವಿಂದ್, ನಿಖಿಲ್ ಹಾಗೂ ಕಾರ್ತಿಕ್ ಸೇರಿದಂತೆ ಇತರರು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಅನಿರೀಕ್ಷಿತ ದಾಳಿಯಿಂದಾಗಿ ಕೊನೆಯುಸಿರೆಳೆದನು.
ಈ ಹತ್ಯೆ ವಿಚಾರ ತಿಳಿದ ಕೂಡಲೇ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಹಾಗೂ ಆತನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹಂತಕರ ಸುಳಿವು ಸಿಕ್ಕಿತು. ಈ ಮಾಹಿತಿ ಆಧರಿಸಿ ಕೊಲೆ ನಡೆದ ಕೆಲವೇ ತಾಸುಗಳಲ್ಲೇ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ರೌಡಿಶೀಟರ್‌ಗಳು
ಮೃತ ದಿನೇಶ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್, ಬೈಯಪ್ಪನಹಳ್ಳಿ, ಹೆಣ್ಣೂರು, ಸಂಪಿಗೆಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆಗಳಲ್ಲಿ ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು.
ಈ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯಲ್ಲಿ ಆತನ ಮೇಲೆ ಜೆ.ಸಿ.ನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನುಳಿದಂತೆ ಆರೋಪಿಗಳಾದ ದಿಲೀಪ್ ಮತ್ತು ಅಜಯ್ ವಿರುದ್ಧ ರಾಮಮೂರ್ತಿ ನಗರ, ಕೊತ್ತನೂರು ಹಾಗೂ ಬಾಣಸವಾಡಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಇಬ್ಬರು ರೌಡಿಪಟ್ಟಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.