ರಾಜಸ್ಥಾನದಿಂದ ರೈಲಿನಲ್ಲಿ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿಮಾಂಸ : ಅಧಿಕೃತ ವರದಿ ಸರ್ಕಾರದ ಕೈಗೆ

| Published : Aug 01 2024, 01:51 AM IST / Updated: Aug 01 2024, 10:57 AM IST

ರಾಜಸ್ಥಾನದಿಂದ ರೈಲಿನಲ್ಲಿ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿಮಾಂಸ : ಅಧಿಕೃತ ವರದಿ ಸರ್ಕಾರದ ಕೈಗೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದಿಂದ ನಾಯಿ ಮಾಂಸ ತರಿಸಲಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ಸಿಕ್ಕಿದೆ. ಅದು ಕುರಿ ಮಾಂಸ ಎಂದು ಪ್ರಯೋಗಾಲಯದ ವರದಿಯನ್ನು ಸರ್ಕಾರಕ್ಕೆ ಆಹಾರ ಸುರಕ್ಷತಾ ಆಯುಕ್ತರು ಸಲ್ಲಿಸಿದ್ದಾರೆ.

ಬೆಂಗಳೂರು :  ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ರೈಲಿನಲ್ಲಿ ಸರಬರಾಜಾಗಿದ್ದ ಮಾಂಸ ನಾಯಿಯದಲ್ಲ. ಕುರಿಯದ್ದು ಎಂಬುದರ ಅಧಿಕೃತ ವರದಿ ಸರ್ಕಾರದ ಕೈಸೇರಿದೆ.

ಬುಧವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್‌ ಅವರು ಹೈದರಾಬಾದ್‌ ಐಸಿಎಆರ್ ಪ್ರಯೋಗಾಲಯದ ವರದಿಯನ್ನು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಕೆ.ಶ್ರೀನಿವಾಸ್‌, ಬೆಂಗಳೂರು ನಗರಕ್ಕೆ ರೈಲುಗಳ ಮೂಲಕ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸ ಸರಬರಾಜು ಆಗುತ್ತಿರುವ ಕುರಿತು ಜುಲೈ 26ರಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಪೊಲೀಸ್‌ ಇಲಾಖೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿದ್ದರು. ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕೆ ವಾಹನದಲ್ಲಿ ಇರಿಸಿದ್ದು ಕಂಡು ಬಂದಿದ್ದು ಒಟ್ಟು 84 ಸಂಖ್ಯೆಯ ಪಾರ್ಸೆಲ್‌ಗಳಿದ್ದವು ಎಂದರು.

ಈ ಪಾರ್ಸೆಲ್‌ನಲ್ಲಿ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಕಾನೂನಾತ್ಮಕ ಆಹಾರ ಮಾದರಿಯನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಹೈದರಾಬಾದ್‌ ನಲ್ಲಿರುವ ಐಸಿಎಆರ್‌ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಗೆ (ಸರ್ಕಾರಿ ಪ್ರಯೋಗಾಲಯ) ಕಳುಹಿಸಿಕೊಡಲಾಗಿತ್ತು. ಈ ಕುರಿತಂತೆ ವಿಶ್ಲೇಷಣಾ ವರದಿಯು ಬಂದಿದ್ದು ಅದರಲ್ಲಿ ಕುರಿ ಮಾಂಸ ಎಂಬುದನ್ನು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

9 ವ್ಯಾಪಾರಿಗಳ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಪರವಾನಗಿ ಪಡೆದಿದ್ದರು ಎಂಬ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆ ಮಾಡಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂಬುದು ಸ್ಪಷ್ಟವಾಗಿದೆ ಎಂದು ಶ್ರೀನಿವಾಸ್‌ ತಿಳಿಸಿದರು.

ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.