‘ಚಿಕಿತ್ಸೆಗೆ ಹಣವಿಲ್ಲದೆ ಅಂಗವಿಕಲ ಮಗನಿಗೆ ವಿಷ ಹಾಕಿದ ತಂದೆ’ ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿ ಸಂಬಂಧ ತಕ್ಷಣ ತನಿಖೆಗೆ ಆದೇಶಿಸಬೇಕೆಂದು   ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಅಸ್ಥಿ ಚಿಕಿತ್ಸಾ ತಜ್ಞ ಹಾಗೂ ಬಿಜೆಪಿ ವಕ್ತಾರ ಡಾ.ನರೇಂದ್ರ ರಂಗಪ್ಪ ಒತ್ತಾಯ

 ಬೆಂಗಳೂರು : ‘ಚಿಕಿತ್ಸೆಗೆ ಹಣವಿಲ್ಲದೆ ಅಂಗವಿಕಲ ಮಗನಿಗೆ ವಿಷ ಹಾಕಿದ ತಂದೆ’ ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಸೋಮವಾರ ಪ್ರಕಟವಾಗಿದ್ದ ವರದಿಯ ಸಂಬಂಧ ತಕ್ಷಣ ತನಿಖೆಗೆ ಆದೇಶಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಅಸ್ಥಿ ಚಿಕಿತ್ಸಾ ತಜ್ಞ ಹಾಗೂ ಬಿಜೆಪಿ ವಕ್ತಾರ ಡಾ.ನರೇಂದ್ರ ರಂಗಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಬರೆದಿರುವ ಪತ್ರದಲ್ಲಿ ಈ ಘಟನೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಅತ್ಯಂತ ಗಂಭೀರ ಸ್ಥಿತಿಯನ್ನು ತೋರಿಸುತ್ತದೆ. ಆರೋಗ್ಯ ಇಲಾಖೆಯ ಜವಾಬ್ದಾರಿ ಕೊರತೆ ಹಾಗೂ ಆ ಸಂಬಂಧಿಸಿದ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಹಾಗು ಸಂವೇದನಾಶೀಲತೆಯ ಅಭಾವವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ತಿಳಿಸಿದ್ದಾರೆ.

ವಿಕಲಚೇತನ ಬಾಲಕನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರು

ಪೋಷಕರು ಮತ್ತೆ ಮತ್ತೆ ಮನವಿ ಮಾಡಿಕೊಂಡರೂ ಸಹ, ಆ ಆಸ್ಪತ್ರೆಯ ವೈದ್ಯರು ವಿಕಲಚೇತನ ಬಾಲಕನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಇದು ಜವಾಬ್ದಾರಿಹೀನತೆಯ ಪರಾಕಾಷ್ಠೆ ಅಲ್ಲದೆ, ಮಾನವೀಯ ಸಂವೇದನೆಯ ಸಂಪೂರ್ಣ ಅಭಾವದ ಪರಮಾವಧಿ. ಈ ಅತ್ಯಂತ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿ ತಕ್ಷಣ ತನಿಖೆ ನಡೆಸುವಂತೆ ನೀವು ಆದೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ,

ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳ ಮೇಲೂ ಒಂದು ‘ಜವಾಬ್ದಾರಿ ಪರಿಶೀಲನಾ ಲೆಕ್ಕಪರಿಶೋಧನೆ ನಡೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಸಚಿವರಿಗೆ ಒತ್ತಾಯಿಸಿದ್ದಾರೆ.

ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿ

ಕನ್ನಡಪ್ರಭ ವರದಿ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸಂಬೆ ಅವರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ.ಸಂಜಯ ಅವರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಲೀಣಾ ಕಲ್ಲಮ ಅವರಿಗೆ ಮಗುವಿನ ಹೆಸರಿನಲ್ಲಿ ವಿಕಲ ಚೇತನರ ಗುರುತಿನ ಚೀಟಿ (ಯುಡಿಐಡಿ) ಮಾಡಿಸಿ ಸರ್ಕಾರದಿಂದ ಬರುವ ಸೌಲಭ್ಯ ದೊರಕಿಸಿಕೊಡಿ ಎಂದು ಸೂಚಿಸಿದರು. ಇದೇ ವೇಳೆ ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಮಕ್ಕಳ ಸಹಾಯವಾಣಿಯಾದ 1098 ಗೆ ಸಂಪರ್ಕಿಸುವಂತೆ ಮನವಿ ಮಾಡಿದರು.