ಕನ್ನಡಪ್ರಭ ವಾರ್ತೆ ಮದ್ದೂರು
ಕೂಲಿ ಹಣದ ವಿಚಾರವಾಗಿ ಪಾನಮತ್ತರಾಗಿದ್ದ ಮೂವರ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಮಧ್ಯ ಪ್ರವೇಶ ಮಾಡಿದ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯಲ್ಲಿ ಸೋಮವಾರ ರಾತ್ರಿ ಜರುಗಿದೆ.ಹಳೇ ಎಂ.ಸಿ.ರಸ್ತೆಯ ಕಮಲ ನೆಹರು ಬಾಲಿಕಾ ಪ್ರೌಢಶಾಲೆ ಪಕ್ಕದ ತಮಿಳು ಕಾಲೋನಿ ನಿವಾಸಿ ಕುಮಾರ್ ಪುತ್ರ ನಂದನ್ (25) ಕೊಲೆಯಾದ ಯುವಕ. ಕೂಲಿ ಹಣ ಪಾವತಿಗೆ ಸಂಬಂಧಿಸಿದಂತೆ ಆರೋಪಿಗಳಾದ ಶಿವರಾಜು, ಧನುಷ್ ಹಾಗೂ ನಿಖಿಲ್ ಅವರುಗಳ ನಡುವೆ ರಾತ್ರಿ 8 ಗಂಟೆ ಸುಮಾರಿಗೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.
ಈ ಪೈಕಿ ಸ್ಥಳದಲ್ಲಿದ್ದ ನಂದನ್ ಜಗಳ ಬಿಡಿಸಲು ಮಧ್ಯ ಪ್ರವೇಶ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೂವರು ಆರೋಪಿಗಳ ಪೈಕಿ ಶಿವರಾಜ್ ಎಂಬಾತ ಡ್ರ್ಯಾಗನ್ ನಿಂದ ನಂದನ್ ಕುತ್ತಿಗೆ ಭಾಗಕ್ಕೆ ಇರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ನಂದನ್ ಸ್ಥಳದಲ್ಲಿ ಅಸ್ವಸ್ಥಗೊಂಡಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಬಡಾವಣೆ ನಿವಾಸಿಗಳು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ ನಂದನ್ ಸ್ವಲ್ಪ ಹೊತ್ತಿನಲ್ಲಿಯೇ ಕೊನೆ ಉಸಿರೆಳೆದಿದ್ದಾನೆ. ಘಟನೆಯಿಂದಾಗಿ ಆಸ್ಪತ್ರೆ ಬಳಿ ಮೃತನ ಸಂಬಂಧಿಕರು ಹಾಗೂ ನೂರಾರು ಸಾರ್ವಜನಿಕರು ಜಮಾಯಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್, ಸಿಪಿಐ ನವೀನ್, ಪಿಎಸ್ಐ ರಸುಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.