ಅಕ್ರಮ ಚಟುವಟಿಕೆ ಶಂಕೆ ಮೇರೆಗೆ ನಗರದ 19 ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು : ಅಕ್ರಮ ಚಟುವಟಿಕೆ ಶಂಕೆ ಮೇರೆಗೆ ನಗರದ 19 ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಈ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ವ್ಯವಸ್ಥಾಪಕರು ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾನೂನು ಬಾಹಿರ ಕೃತ್ಯಗಳ ಆರೋಪದ ಮೇರೆಗೆ ಆ ಡ್ಯಾನ್ಸ್‌ ಬಾರ್‌ಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬಕಾರಿ ನಿಯಮ ಉಲ್ಲಂಘನೆ, ನಿಗದಿತ ಅವಧಿಗೂ ಮೀರಿ ವಹಿವಾಟು ಹಾಗೂ ಯುವತಿಯರಿಂದ ಅಶ್ಲೀಲ ನೃತ್ಯ ಆಯೋಜನೆ ಬಗ್ಗೆ ಕೆಲ ಬಾರ್‌ಗಳ ಮೇಲೆ ಆರೋಪ ಕೇಳಿ ಬಂದಿದ್ದವು. ಈ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ ಹೇಳಿದ್ದಾರೆ.

ನ್ಯಾಯಾಲಯದ ಆದೇಶ ಹಾಗೂ ಅಬಕಾರಿ ಪರವಾನಗಿಯ ನಿಯಮಗಳ ಅನ್ವಯ ಬಾರ್‌ಗಳು ವ್ಯಾಪಾರ ವಹಿವಾಟು ನಡೆಸಬೇಕು. ಆದರೆ ಕೆಲವರು ಕಾನೂನುಬಾಹಿರ ಚಟುವಟಿಕೆ ನಡೆಸಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿ ಅಕ್ರಮ ಕೃತ್ಯಗಳಿಗೆ ಅ‍ವಕಾಶ ನೀಡದಂತೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರ ಕೃತ್ಯಗಳು ವರದಿಯಾದರೆ ಆಯಾ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ಹೊಣೆ ಮಾಡಲಾಗುತ್ತದೆ. ಆ ಠಾಣಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.