ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗೆ ಪ್ರಿಯಕರನ ಕರೆಸಿಕೊಂಡು ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪ್ರಕರಣದ ಸಂಬಂಧ ಯುವತಿಯನ್ನು 3 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಾಜಿ ಪ್ರೇಯಸಿ ಜತೆ ಕಿರಣ್‌ ಸಂಪರ್ಕದಲ್ಲಿದ್ದ ಎಂಬ ವಿಷಯ ತಿಳಿದು ಆಕ್ರೋಶಗೊಂಡಿದ್ದ ಪ್ರೇಮಾ ಈ ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಇದ್ದ ಒಬ್ಬನೇ ಮಗನ ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಂತರ ಕಾಯ್ದುಕೊಂಡಿದಕ್ಕೆ ತುಮಕೂರು ಮೂಲದ ಕಿರಣ್‌ನನ್ನು (27) ಪ್ರಿಯತಮೆ ಪ್ರೇಮಾ (27) ಮಂಗಳವಾರ ಮಧ್ಯಾಹ್ನ ತನ್ನ ಮನೆಗೆ ಕರೆಸಿಕೊಂಡು ಪ್ರೇಮ ನಿವೇದನೆಯ ನೆಪದಲ್ಲಿ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲಿಗೆ ಬೆಲ್ಟ್‌ನಿಂದ ಬಿಗಿದು ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು. ಈ ಸಂಬಂಧ ಕಿರಣ್‌ ತಂದೆ ನರಸಿಂಹಯ್ಯ ಅವರು ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಕಿರಣ್ ತಂದೆ ನರಸಿಂಹಯ್ಯ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಮುಂದೆ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.4.5 ಲಕ್ಷದ ಗಿಫ್ಟ್ ನೀಡಲು ಮುಂದಾಗಿದ್ದ ಪ್ರೇಮಾ!


2025ರ ಆಗಸ್ಟ್‌ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಇದೇ ಫೆಬ್ರವರಿ 14ರಂದು ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಇದಕ್ಕೆ ಕಿರಣ್ ಕೂಡ ಒಪ್ಪಿಕೊಂಡಿದ್ದ. ಕಿರಣ್‌ಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರು. ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು ಎನ್ನಲಾಗಿದೆ. ಅಂತರ ಕಾಯ್ದುಕೊಂಡಿದ್ದಕ್ಕೆ ಆಕ್ರೋಶ:

ಕಿರಣ್ ಇತ್ತೀಚೆಗೆ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ತುಂಬಾ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪೂರ್ವ ನಿಯೋಜಿತ ಸಂಚಿನಂತೆ ಕಿರಣ್‌ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ.ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್‌:

ಪೊಲೀಸರ ವಿಚಾರಣೆ ವೇಳೆ ಅಚ್ಚರಿಯ ವಿಚಾರಗಳು ಬೆಳಕಿಗೆ ಬಂದಿದೆ. ಪ್ರಿಯತಮನ ಕೊಲೆ ಮಾಡಿ ಬಳಿಕ ತಾನೂ ಕೂಡ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಳು. ಬೆಂಕಿಯ ತೀವ್ರತೆ ಹೆಚ್ಚಾಗಿ ಅರೆ ಬಟ್ಟೆಗಳಲ್ಲಿ ಇದ್ದ ಪ್ರೇಮ ಭಯಬಿದ್ದು ಹೊರ ಬಂದಿದ್ದಳು. ಆಗ ಪಕ್ಕದ ಮನೆಯ ಮಹಿಳೆಯು ಆಕೆಗೆ ಬಟ್ಟೆ ಕೊಟ್ಟು ಒಳಗೆ ಕರೆದೊಯ್ದಿದ್ದಾರೆ.

ಸಿನಿಮೀಯ ರೀತಿ ಪ್ರಿಯಕರನ ಹತ್ಯೆ:

ಸರ್ಪೈಸ್ ಗಿಫ್ಟ್‌ ಕೊಡುತ್ತೀನಿ ಬಾ ಎಂದು ಪ್ರೇಮಾ, ಕಿರಣ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಮನೆಗೆ ಬರ್ತಿದ್ದಂತೆ ಹೂ ಬೊಕ್ಕೆ ಕೊಟ್ಟು ಕಣ್ಣಿಗೆ ಪಟ್ಟಿಯನ್ನು ಕಟ್ಟಿದ್ದಳು. ಇದಾದ ಬಳಿಕ ಕೈಯನ್ನು ನೈಲನ್‌ ಹಗ್ಗದಿಂದ ಕಟ್ಟಿದ್ದಾಳೆ‌‌. ಇದಾದ ನಂತರವೇ ಕಾಲಿಗೂ ಹಗ್ಗ ಕಟ್ಟಲು ಮುಂದಾಗಿದ್ದು, ಕಿರಣ್ ಅದನ್ನು ತಡೆದಿದ್ದ.

ಕಿರಣ್‌ಗೆ ಸ್ವಲ್ಪವೂ ಅನುಮಾನ ಬರದ ರೀತಿ ಕಾಲಿಗೆ ಹಗ್ಗದಿಂದ ಲಾಕ್ ಮಾಡಿದ್ದಳು. ಆಗ ಬೆಡ್ ಮೇಲೆ ಕಿರಣ್ ತಳ್ಳಿದ್ದಳು. ನಂತರ ವಾಶ್ ರೂಮ್‌ನಲ್ಲಿ ಮೊದಲೇ ಬಕೆಟ್‌ನಲ್ಲಿ 4 ಲೀಟರ್‌ ಸೀಮೆಣ್ಣೆ ಹಾಗೂ ಒಂದು ಲೀಟರ್‌ ಪೆಟ್ರೋಲ್‌ ಮಿಕ್ಸ್ ಮಾಡಿ ಇಟ್ಟಿದ್ದಳು. ನಂತರ ಆತನ ಮೇಲೆ ಒಮ್ಮೆಲೆ ಸುರಿದಿದ್ದಳು. ಆಗ ಕಿರಣ್‌ ತಪ್ಪಿಸಿಕೊಳ್ಳಲು ಮುಂದಾದಾಗ, ನನಗೆ ಮೋಸ ಮಾಡುತ್ತೀಯಾ ಅಂತ ಬೆಂಕಿ ಹಚ್ಚಿದಳು. ಬೆಂಕಿ ತೀವ್ರತೆ ಹೆಚ್ಚಾಗಿ ಕಿರಣ್‌ ಕೂಗಾಡುತ್ತಿದ್ದಂತೆ ಆಕೆ ವಾಶ್ ರೂಮ್‌ಗೆ ಹೋಗಿ ಡೋರ್ ಲಾಕ್ ಮಾಡಿಕೊಂಡಿದ್ದಳು. ಈ ನಡುವೆ ಭಯಗೊಂಡು ಡೋರ್ ತೆಗೆದು ಹೊರ ಬಂದಾಗ ಅರೆಬೆತ್ತಲೆಯಾಗಿದ್ದ ಪ್ರೇಮಳನ್ನು ಮಹಿಳೆಯೊಬ್ಬರು ರಕ್ಷಣೆ ಮಾಡಿದ್ದಾರೆ.ಹಳೆ ಪ್ರೇಯಸಿ ವಿಷಯ ಗೊತ್ತಾಗಿ ಮರ್ಡರ್‌:

ಹಾಲಿ ಪ್ರೇಯಸಿಯಾದ ಪ್ರೇಮಳನ್ನು ಅವೈಡ್ ಮಾಡಿದ್ದ ಕಿರಣ್‌ ಮಾಜಿ ಪ್ರೇಯಸಿ ಜತೆ ಸಂಪರ್ಕದಲ್ಲಿದ್ದ. ಮಾಜಿ ಲವರ್ ಬರ್ತಡೆ ಸೆಲೆಬ್ರೇಷನ್ ಮಾಡಿ ಅದರ ಪೋಟೋಗಳನ್ನು ತೆಗೆದುಕೊಂಡಿದ್ದ. ಇದನ್ನು ನೋಡಿದ್ದ ಪ್ರೇಮಾ, ಕಿರಣ್ ಜತೆ ಗಲಾಟೆ ಮಾಡಿದ್ದಳು. ಆ ಬಳಿಕ ಪ್ರೇಮಾ ನಂಬರ್‌ ಅನ್ನು ಬ್ಲಾಕ್ ಮಾಡಿದ್ದ.

ನಂತರ ಮತ್ತೊಂದು ನಂಬರ್‌ನಿಂದ ಕರೆ ಮಾಡಿದ್ದ ಪ್ರೇಮಾ ನೀನು ಹೇಳಿದ್ದ ದಿನವೇ ಮದುವೆಯಾಗೋಣ‌ ಅಂತ ಹೇಳಿದ್ದಳು. ಕೇವಲ ಎರಡೇ ದಿನದಲ್ಲಿ ಕೊಲೆಯ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ.

ಮಗನಿಗೆ ಒಂದೇಟು ಒಡೆಯದೆ ಸಾಕಿದ್ವಿ. ನಂತರ ಅವನು ಬೆಂಗಳೂರಿಗೆ ಬಂದಿದ್ದ. ನನ್ನ ಮಗನಿಗೆ ಬೆಂಕಿ ಇಟ್ಟು ಹೀಗೆ ಮಾಡಿದ್ದಾರೆ. ಮಗನ ಕೊಂದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ಬದುಕಿದರೆ ನಮಗೆ ನ್ಯಾಯ ಕೊಡಿಸಲಿ.

-ನರಸಿಂಹಯ್ಯ, ಮೃತ ಕಿರಣ್ ತಂದೆಕಿರಣ್‌ ಒಬ್ಬನೇ ಮಗನಾಗಿದ್ದು, ಅವನನ್ನು ಸುಟ್ಟು ಹಾಕಲಾಗಿದೆ. ಈಗ ಅವರ ತಂದೆ-ತಾಯಿಗೆ ಯಾರು ದಿಕ್ಕು? ಮಗನಿಗೆ ಹುಷಾರಿಲ್ಲ ಅವನು ಐಸಿಯುನಲ್ಲಿದ್ದಾನೆ ಅಂತ ಅವರ ತಾಯಿಗೆ ಹೇಳಿದ್ದಕ್ಕೆ ಆತನ ತಾಯಿ ಸುಸ್ತಾಗಿ ಬಿದ್ದಿದ್ದಾರೆ. ಇನ್ನು ಆತ ಮೃತ ಪಟ್ಟಿದ್ದಾನೆ ಅಂತಾ ಗೊತ್ತಾದರೆ ಅವರು ಬದುಕೋದೆ ಇಲ್ಲ.

-ವೀಣಾ, ಕಿರಣ್ ಸಂಬಂಧಿ