ಪಾಂಡವಪುರ:

ಸಾಲಬಾಧೆ ತಾಳಲಾರದೆ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ್ಯಾಮನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಗ್ರಾಮದ ರೈತ ಸಿದ್ದೇಗೌಡರ ಪುತ್ರ ಹರೀಶ್ (28) ಆತ್ಮಹತ್ಯೆಗೆ ಶರಣಾದ ಯುವ ರೈತ.

ಅವಿವಾಹಿತನಾಗಿದ್ದ ಮೃತ ರೈತ ಹರೀಶ್ ತಂದೆ ಸಿದ್ದೇಗೌಡರ ಜೊತೆಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕೃಷಿ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹರೀಶ್ ಅವರೇ ತೆಗೆದುಕೊಂಡು ತಮಗಿರುವ 2 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಬೇಸಾಯಕ್ಕಾಗಿ ಧರ್ಮಸ್ಥಳ ಸಂಘ ಸೇರಿದಂತೆ ಲಕ್ಷಾಂತರು ರು. ಕೈಸಾಲ ಮಾಡಿದ್ದರು.

ಅಲ್ಲದೇ, ಟ್ರ್ಯಾಕ್ಟರ್, ಆಟೋ ಸಾಲವವನ್ನು ಮಾಡಿದ್ದರು. ಸಾಲಗಾರರ ಹಿಂಸೆ ಹೆಚ್ಚಾದ ಹಿನ್ನೆಲೆಯಲ್ಲಿ ತಮ್ಮ ಜಮೀನಿನ ಬಳಿ ಭಾನುವಾರ ರಾತ್ರಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದಾನೆ. ಸ್ಥಳೀಯರು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಮೃತಪಟ್ಟಿದ್ದಾರೆ.

ಮೃತ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಗಾರದಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಅವರು ಸ್ಥಳಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಮಂಗಳವಾರ ಬೆಳಗ್ಗೆ 10 ಗಂಟೆಗೆ ಗ್ರಾಮದ ಸ್ವ-ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಮಳವಳ್ಳಿ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಚೋಳನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-948ರಲ್ಲಿ ಸೋಮವಾರ ಸಂಜೆ ನಡೆದಿದೆ. ತಾಲೂಕಿನ ಕೂನನಪುರ ಗ್ರಾಮದ ಟಿ.ನಾಗರಾಜು (55) ಸ್ಥಳದಲ್ಲಿಯೇ ಮೃತಪಟ್ಟವರು. ಕೆಲಸ ನಿಮಿತ್ತ ತಮ್ಮ ಬೈಕ್ ನಲ್ಲಿ ಮಳವಳ್ಳಿಯಿಂದ ಹಾಡ್ಲಿ ವೃತ್ತದ ಕಡೆಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.