ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ತಾಕಿತು ಮಾಡಿದರು.ನಗರದ ಜಿಲ್ಲಾಧಿಕಾರಿ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2025 ರ ಜನವರಿಯಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ ೭೩೫.೧ ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ೯೨೭.೦ ಮಿ.ಮೀ ಮಳೆಯಾಗಿದೆ (ಶೇ. ೨೬ ರಷ್ಟು ಹೆಚ್ಚುವರಿ). ೨೦೨೬ರ ಜನವರಿಯಿಂದ ಏ.೧೨ರವರೆಗೆ ೨೪.೬ ಮಿ.ಮೀ ವಾಡಿಕೆ ಮಳೆಗೆ ಬದಲಾಗಿ ೨೬.೦ ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಸುಧಾರಿಸಿದ್ದು, ೨೦೧೯ ರಲ್ಲಿ ೭೭.೦೬ ಮೀಟರ್‌ಗಳಷ್ಟಿದ್ದ ಆಳವು ೨೦೨೫ ರ ವೇಳೆಗೆ ೩೭.೫೨ ಮೀಟರ್‌ಗಳಿಗೆ ತಲುಪಿದೆ ಎಂದರು.

ಮುಂದಿನ ೩ ತಿಂಗಳಲ್ಲಿ ಜಿಲ್ಲೆಯ ೨೩೯ ಗ್ರಾಮಗಳು ಮತ್ತು ೫೨ ನಗರ ವಾರ್ಡ್‌ಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಭಾಗದಲ್ಲಿ 70 ಮತ್ತು ನಗರ ಪ್ರದೇಶದಲ್ಲಿ ೨೪ ಹೆಚ್ಚಿನ ಇಳುವರಿ ನೀಡುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಬಂಗಾರಪೇಟೆ, ಕೆ.ಜಿ.ಎಫ್ ಮತ್ತು ಮಾಲೂರು ತಾಲೂಕುಗಳ ೧೫ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ವೈಜ್ಞಾನಿಕ ದರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಆಯಾ ತಹಶೀಲ್ದಾರ್‌ಗಳಿಗೆ ಸೂಚಿಸಿದರು.ಯರಗೋಳ್ ಜಲಾಶಯದಿಂದ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ನಗರಸಭೆಗಳ ವಿವಿಧ ವಾರ್ಡ್‌ಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದ್ದು, ಜಲಾಶಯದಲ್ಲಿ ಪ್ರಸ್ತುತ ೧೮೬ ಒಅಈಖಿ ನೀರು ಲಭ್ಯವಿದೆ ಇದು ಈ ಬಾರಿ ಬೇಸಿಗೆಗೆ ಸಾಕಷ್ಟು ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಪ್ರಸ್ತುತ ೨,೭೬,೪೩೨ ಟನ್ ಮೇವು ಲಭ್ಯವಿದ್ದು, ಇದು ಮುಂದಿನ ೨೩ ವಾರಗಳಿಗೆ ಸಾಕಾಗಲಿದೆ ಎಂದು ತಿಳಿಸಿದರು. ಜಾನುವಾರುಗಳ ಕುಡಿಯುವ ನೀರಿಗಾಗಿ ಜಿಲ್ಲೆಯಾದ್ಯಂತ ಒಟ್ಟು ೧,೩೧೬ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾ ಶಾಖ ತರಂಗ ಕ್ರಿಯಾ ಯೋಜನೆ-೨೦೨೬ ರನ್ವಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಐವಿ ಫ್ಲೂಯಿಡ್ಸ್ ಮತ್ತು ದಾಸ್ತಾನು ಇರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಬಿಸಿಲಿನ ತೀವ್ರತೆ ಹೆಚ್ಚಿರುವ ಅವಧಿಯಲ್ಲಿ ನರೇಗಾ ಕೆಲಸದ ಸಮಯ ಬದಲಾಯಿಸಲು ಸೂಚನೆ ನೀಡಲಾಗಿದೆ. ಮಾ.18ರಿಂದ ಏ.6 ರವರೆಗೆ ಉಂಟಾದ ಆಲಿಕಲ್ಲು ಮಳೆಯಿಂದಾಗಿ ಸುಮಾರು ೩೭.೫೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಸಂಬಂಧ ೪೦ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಮತ್ತು ತಹಸೀಲ್ದಾರ್‌ಗಳ ಪಿ.ಡಿ ಖಾತೆಯಲ್ಲಿ ಒಟ್ಟು ೧,೨೪೦.೨೪ ಲಕ್ಷ ರೂ. ಎಸ್‌ಡಿಆರ್‌ಎಫ್ ಅನುದಾನ ಲಭ್ಯವಿದೆ ಎಂದು ತಿಳಿಸಿದರು. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸದ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ರಮೇಶ್, ಆರ್‌ಸಿಹೆಚ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಭುವಿಜ್ಞಾನಿ ತಿಪ್ಪೆಸ್ವಾಮಿ, ಬೇತಮಂಗಲ ಈ.ಈ.ಚಂದ್ರಶೇಖರ, ಬೆಸ್ಕಾಂನ ಸಿಬ್ಬಂದಿ ಇದ್ದರು.