ಅಕ್ಕರೆಯ ಅಪರ್ಣಾಗೆ ಕಂಬನಿ

| Published : Jul 13 2024, 01:39 AM IST / Updated: Jul 13 2024, 07:14 AM IST

Aparna life

ಸಾರಾಂಶ

ಅಪರ್ಣಾ ವಸ್ತಾರೆ ಬಗ್ಗೆ ಗಣ್ಯರ ಕಂಬನಿ

ನಾನು ಹೋದ್ಮೇಲೆ ಹೇಗನಿಸುತ್ತೆ ಅಂತ ಟಿವಿಯವ್ರು ಕೇಳಿದ್ರೆ ಏನ್‌ ಹೇಳ್ತೀಯ ಅಂದಿದ್ದಳು

- ಬಿ ಆರ್‌ ಛಾಯಾ

ನಲವತ್ತು ವರ್ಷಗಳ ಸ್ನೇಹ ನಮ್ಮದು. ಬಹಳ ಆತ್ಮೀಯ ಗೆಳತಿಯರು ನಾವು. ನಮ್ಮ ನಡುವೆ ಒಂದು ದಿನವೂ ಫೋನ್‌ ಕಾಲ್ ಮಿಸ್‌ ಆದದ್ದಿಲ್ಲ. 2 ವರ್ಷ ಕ್ಯಾನ್ಸರ್‌ನಿಂದ ಬಹಳ ಒದ್ದಾಡಿಬಿಟ್ಟಳು. ಆದರೆ ಎದೆಗುಂದಲಿಲ್ಲ. ಧೈರ್ಯ ತಂದುಕೊಂಡು, ಟ್ರೀಟ್‌ಮೆಂಟ್‌ಗೆ ಒಳಗಾಗಿ ಹೋರಾಟ ಮಾಡಿದಳು. ಇದು ಆಪ್ತರನ್ನು ಬಿಟ್ಟರೆ ಬೇರೆಯವರಿಗೆ ಗೊತ್ತಾಗಲಿಲ್ಲ. ಗೊತ್ತಾಗುವುದು ಅವಳಿಗೆ ಇಷ್ಟವೂ ಇರಲಿಲ್ಲ. ಕಳೆದ ವಾರ ಕಾಲ್‌ ಮಾಡಿದಾಗ ಹೇಳಿದ್ಲು, ‘ನಾನು ಹೋದ ತಕ್ಷಣ ಟಿವಿಯವರೆಲ್ಲ ನಿನ್ನ ಮುಂದೆ ಮೈಕ್‌ ಹಿಡಿದು, ಏನನಿಸುತ್ತೆ ಅಂತ ಕೇಳ್ತಾರೆ. ಅವಾಗ ಏನ್‌ ಹೇಳ್ತೀಯ’ ಅಂತ. ಈಗ ಅದನ್ನು ನೆನೆಸಿಕೊಂಡರೆ ದುಃಖ ತಡ್ಕೊಳ್ಳಕ್ಕೆ ಆಗ್ತಿಲ್ಲ. ಅವಳಿಗೆ ಬದುಕುವ ಆಸೆ ತುಂಬಾ ಇತ್ತು. ಮುಂದಿನ ಜೀವನ ಆರಾಮವಾಗಿ ಕಳೀಬೇಕು ಅಂತಿತ್ತು. ಮನುಷ್ಯನಿಗೆ ದುಡ್ಡು ಬೇಡ, ಶ್ರೀಮಂತಿಕೆ ಬೇಡ. ಆರೋಗ್ಯ ಒಂದು ಸರಿ ಇರ್ಬೇಕು ಅಂತ ಹೇಳ್ತಿದ್ಲು. ಏನೇನೋ ಪ್ರಾಜೆಕ್ಟ್‌ ಮಾಡುವ ಪ್ಲಾನ್‌ ಹಾಕ್ಕೊಂಡಿದ್ದಳು.

*

ಅಪರ್ಣಾ ಮೇಡಂ,

ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ. - ಸುದೀಪ್‌

*ಕನ್ನಡದ ಖ್ಯಾತ ನಿರೂಪಕಿ, ಕಲಾವಿದೆ ಅಪರ್ಣಾ ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿ.

- ಅಶ್ವಿನಿ ಪುನೀತ್‌ ರಾಜ್‌ಕುಮಾರ್

*ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವುಗಳನ್ನು ನೋಡುತ್ತಿದ್ದೇವೆ. ಇವಳನ್ನು ಮಗು ಆದಾಗಿನಿಂದ ನೋಡುತ್ತಿದ್ದೆ. ಅಪರ್ಣಾಗೆ ಬಹಳ ಒಳ್ಳೆಯ ಸಂಸ್ಕಾರ ಇತ್ತು. ಅಪರ್ಣಾ ಸಾವಿಗೆ ಹೆದರಿಲ್ಲ. ಮೆಟ್ಟಿ ನಿಲ್ತಾ ಇದ್ದಳು. ಮಾತಿಗೆ ಕಷ್ಟಪಡಲಿಲ್ಲ. ನಗುವಿಗೆ ಕಷ್ಟಪಡಲಿಲ್ಲ. ಪದಗಳಿಗೆ ತಡಕಾಡಿಲ್ಲ. ಸಂತೋಷಕ್ಕೆ ತಡಕಾಡಿಲ್ಲ. ನೋವೆಲ್ಲ ಮೆಟ್ಟಿ ನಿಲ್ಲುತ್ತಿದ್ದಳು. ಅವಳ ಗಂಡ ನೀಡಿದ ಅಂತಃಶಕ್ತಿಯೂ ದೊಡ್ಡದೇ.

- ಶ್ರೀನಾಥ್‌, ಹಿರಿಯ ನಟ

*ಅಪರ್ಣಾ ನಮ್ಮ ಕುಟುಂಬಕ್ಕೆ ಆತ್ಮೀಯರು. ಅವರ ಸಮಸ್ಯೆ ಬಗ್ಗೆ ಗೊತ್ತಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ಫಿಲ್ಮ್ ಚೇಂಬರ್ ಕಾರ್ಯಕ್ರಮದಲ್ಲಿ ನೋಡಿದಾಗ ಅಪರ್ಣಾ ಚೇತರಿಸಿಕೊಂಡಿದ್ದಾರೆ, ಇನ್ನು ಹುಷಾರಾಗ್ತಾರೆ ಎಂದೇ ಭಾವಿಸಿದ್ದೆ. ಅವರ ಪತಿ ನಾಗರಾಜ ವಸ್ತಾರೆ ಬಹಳ ಪ್ರೀತಿಯಿಂದ ಮಗುವಿನ ಹಾಗೆ ನೋಡ್ಕೊಳ್ತಿದ್ರು.

- ಗಿರಿಜಾ ಲೋಕೇಶ್‌, ಹಿರಿಯ ನಟಿ*

ಭಾಷೆಯ ಬಗ್ಗೆ ಅಪರ್ಣಾ ಅವರಿಗಿರುವ ಅಭಿಮಾನ ಎಂಥವರಿಗೂ ಮಾದರಿ. ಕನ್ನಡ ಅಂದ್ರೆ ಅವರ ಬಾಯಲ್ಲೇ ಕೇಳಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

- ರಾಘವೇಂದ್ರ ರಾಜ್‌ಕುಮಾರ್‌, ಹಿರಿಯ ನಟ*

ಚಿಕ್ಕವನಿದ್ದಾಗ ನಿಮ್ಮನ್ನು ಟಿವಿಯಲ್ಲಿ ನೋಡುತ್ತಿದ್ದೆ. ನಿಮ್ಮ ನಿರೂಪಣೆ ಜೊತೆ ನನ್ನ ಅನೇಕ ಸವಿ ನೆನಪುಗಳಿವೆ. ವಿದಾಯ ಮೇಡಂ, ಶಾಂತಿಯಿಂದ ವಿಶ್ರಾಂತಿ ಪಡೆಯಿರಿ.

- ಹೇಮಂತ್‌ ರಾವ್‌, ನಿರ್ದೇಶಕ*

ನನ್ನ ಬಹುಕಾಲದ ಗೆಳತಿ ಅಪರ್ಣಾ. ಆಕೆ ಸ್ಟೇಜ್‌ ಮೇಲೆ ನಿಂತಿದ್ದರೆ ಆ ಸ್ಟೇಜ್‌ಗೇ ಒಂದು ಕಳೆ ಬರುತ್ತಿತ್ತು. ಬಹಳ ಮಂದಿಗೆ ಈಕೆ ಸ್ಫೂರ್ತಿಯಾಗಿದ್ದರು. ಅಂಥಾ ಪ್ರತಿಭೆ ಹೀಗೆ ಕಣ್ಮರೆಯಾಗುತ್ತೆ ಎನ್ನುವುದು ನಂಬಲಸಾಧ್ಯ ವಿಚಾರ.

- ಲಕ್ಷ್ಮೀ ಗೋಪಾಲಸ್ವಾಮಿ, ನಟಿ

*

ಬಾಲ್ಯ ಸ್ನೇಹಿತೆಯ ಅಗಲಿಕೆ ಆಘಾತ ತಂದಿದೆ : ರವೀಂದ್ರನಾಥ್‌

ಚಿಕ್ಕಂದಿನಿಂದಲೇ ನಾವಿಬ್ಬರೂ ಜೊತೆಗೆ ಆಟವಾಡುತ್ತ ಬೆಳೆದವರು. ನಾನು ಬಾಲ್ಯದಲ್ಲಿ ಆಕಾಶವಾಣಿಯ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ಅಪರ್ಣಾ ಬಾಲಕಲಾವಿದೆಯಾಗಿ ಆಕಾಶವಾಣಿ ನಾಟಕಗಳಲ್ಲಿ ತೊಡಗಿಸಿಕೊಳ್ಳಲಾರಂಭಿಸಿದರು. ಅನೇಕ ನಾಟಕಗಳಲ್ಲಿ ನಾವು ಒಟ್ಟಾಗಿ ನಟಿಸಿದ್ದೆವು. ಅಪರ್ಣಾರ ಸುಂದರ ಭಾಷೆ, ಸ್ಪಷ್ಟ ಉಚ್ಚಾರಣೆಗೆ ಮುಖ್ಯ ಕಾರಣವಾಗಿದ್ದು ಆ ನಾಟಕ ರಂಗ ಮತ್ತು ಆಕಾಶವಾಣಿ.

ಮುಂದೆ ವೃತ್ತಿ ಬದುಕಿನಲ್ಲಿ ದೂರದರ್ಶನದಲ್ಲಿ ಅಪರ್ಣಾ ನಿರೂಪಕಿಯಾಗಿ, ನಾನು ಸುದ್ದಿ ವಾಚಕನಾಗಿ ಕೆಲಸ ಆರಂಭಿಸಿದೆವು. ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾವು ಒಟ್ಟಿಗೆ ನಿರೂಪಣೆ ಮಾಡಿದ್ದೇವೆ, ಸಾಕ್ಷ್ಯಚಿತ್ರಗಳಿಗೆ ಒಟ್ಟಿಗೆ ಧ್ವನಿ ನೀಡಿದ್ದೇವೆ. ಬಹಳ ದೀರ್ಘ ಒಡನಾಟ ನಮ್ಮದು. ಅವರಿಗೆ ಬಾಲ್ಯದಿಂದಲೇ ಸಿನಿಮಾ ನಟನೆಯಲ್ಲಿ ಅಪಾರ ಆಸಕ್ತಿ ಇತ್ತು. ಅವರು ಬಹುದೊಡ್ಡ ನಟಿಯಾಗಿ ಬೆಳೆಯುತ್ತಾರೆ ಎಂದುಕೊಂಡಿದ್ದೆವು. ಆದರೆ ಅದು ಕೈಗೂಡಲಿಲ್ಲ.

ಎರಡು ತಿಂಗಳ ಹಿಂದೆ ಕರೆ ಮಾಡಿದ್ದೆ. ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಸ್ವಲ್ಪ ಆರೋಗ್ಯ ಸರಿಯಿಲ್ಲ ಎಂದಷ್ಟೆ ಹೇಳಿದ್ದರು. ಅವರಿಗೆ ಹೀಗೆಲ್ಲ ಆಗಿತ್ತು ಅಂತ ಗೊತ್ತಿರಲಿಲ್ಲ. *