ಸಾರಾಂಶ
ಅಪರ್ಣಾ ಎಂದರೆ ಕನ್ನಡ
- ಮಂಡ್ಯ ರಮೇಶ್
ಕನ್ನಡ ಅಂದರೆ ಅಪರ್ಣಾ, ಅಪರ್ಣಾ ಅಂದರೆ ಕನ್ನಡ ಎನ್ನುವಷ್ಟರ ಮಟ್ಟಿಗೆ ಅವರ ಕನ್ನಡತಿಯಾಗಿದ್ದರು. ಈ ಕಾರಣಕ್ಕೆ ಅವರನ್ನು ಅಭಿಮಾನಿಸುವ ದೊಡ್ಡ ಸಮೂಹವೇ ಇದೆ. ಮಜಾ ಟಾಕೀಸ್ ಮೂಲಕ ಅಪರ್ಣಾ ಅವರ ಜತೆಗೆ ಒಡನಾಟಕ್ಕೆ ಐದು ವರ್ಷ. ಮರೆಯಲಾಗದ ದಿನಗಳು. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅಪರ್ಣ, ಇಷ್ಟು ಬೇಗ ಅಗಲಿದ್ದಾರೆ ಎಂಬುದು ನಂಬಕ್ಕೂ ಆಗುತ್ತಿಲ್ಲ. ಮನುಷ್ಯತ್ವದ ಗುಣ, ಭಾಷೆಯ ಮೇಲಿನ ಪ್ರೀತಿ ಇಟ್ಟುಕೊಂಡಿದ್ದವರು. ಮಾತೃತ್ವದ ಹೆಣ್ಣು ಮಗು. ಚೆಂದವಾಗಿ ಮಾತನಾಡಬಲ್ಲ ಅಪರ್ಣಾ ಅವರಿಗೆ ನಿರೂಪಣೆ ಶಾಲೆ ಶುರು ಮಾಡು ಅಂತ ನಾನು ಹೇಳ್ತಿದ್ದೆ. ಶುದ್ಧ ಕನ್ನಡವನ್ನು ಯಾರು ಎಲ್ಲಿಯವರೆಗೂ ಪ್ರೀತಿಸುತ್ತಾರೋ ಅಲ್ಲಿಯವರೆಗೂ ಅಪರ್ಣಾ ನೆನಪಿಲ್ಲಿರುತ್ತಾರೆ.
ಅಪರ್ಣಾ ಕನ್ನಡದ ಆಸ್ತಿ
- ರಮೇಶ್ ಅರವಿಂದ್
ಅಪರ್ಣಾ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವಾಗ ಅವರ ಕನ್ನಡ ಭಾಷೆಯ ಬಳಕೆ ಕಂಡು ನನಗೇ ಅಶ್ಚರ್ಯ ಆಗುತ್ತಿತ್ತು. ಕನ್ನಡದ ಪದಗಳ ಹೊರತಾಗಿ ಬೇರೆ ಭಾಷೆಯನ್ನು ಬಳಸದ ಅವರ ಭಾಷಾ ಪ್ರತಿಭೆಗೆ ಅವರೇ ಸಾಟಿ. ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ನಿರೂಪಣೆ ಬಗ್ಗೆ ಅವರಲ್ಲಿದ್ದ ಆತ್ಮವಿಶ್ವಾಸ ಅದ್ಭುತ. ಅಪರ್ಣಾ ಅವರು ಕನ್ನಡದ ಆಸ್ತಿ. ನಮ್ಮ ಮನೆಗೂ ಅವರ ಮನೆಗೂ ಒಂದು ಬೀದಿ ಅಷ್ಟೇ ಅಂತರವಿದೆ. ಸದಾ ಟಿವಿಯಲ್ಲಿ ನೋಡ್ತಿದ್ದೆ. ನಿರೂಪಣೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಸ್ಕ್ರಿಪ್ಟ್‌ನಲ್ಲಿ ಏನಾದರು ಬದಲಾವಣೆ ಮಾಡಿದರೆ ತಣ್ಣಗೆ ಪ್ರತಿಕ್ರಿಯಿಸುತ್ತಿದ್ದರು. ನಮಗೆ ಅಪರ್ಣಾ ಅಂದಾಕ್ಷಣ ನೆನಪಾಗೋದು ಅವರ ಕನ್ನಡ. ಅವರಿಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ಗೊತ್ತಿತ್ತು. ಆದರೆ, ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ನಾನು ನೋಡಿದ ನಿರೂಪಕರಲ್ಲಿ ಅತೀ ಶ್ರೇಷ್ಠ ನಿರೂಪಕಿ ಅಪರ್ಣಾ.ನನ್ನ ಮತ್ತು ಅಪರ್ಣಾ ಅವರದ್ದು 20 ವರ್ಷಗಳ ಸ್ನೇಹ. ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಿಂದ ನಮ್ಮ ಪರಿಚಯ ಆಗಿದ್ದು. ನಾನು ಮತ್ತು ಅಪರ್ಣಾ ಅವರು ಜತೆಯಾಗಿ ನಾಲ್ಕೈದು ಧಾರಾವಾಹಿಗಳಲ್ಲಿ ನಟಿಸಿದ್ದೇವೆ. ಬದುಕಿದರೆ ನಿನ್ನ ರೀತಿ ಬದುಕಬೇಕು ಕಣೆ ಎಂದು ನನ್ನ ಮೆಚ್ಚಿಕೊಳ್ಳುತ್ತಿದ್ದರು. 15 ದಿನಗಳ ಹಿಂದೆ ನನ್ನ ಜತೆಗೆ ಮಾತನಾಡಿ, ‘ನನಗೆ ನೀನು ನಗೋದನ್ನು ಕಲಿಸಿದೆ. ಈ ಆರೋಗ್ಯ ಸಮಸ್ಯೆಯಿಂದ ಬದುಕು ಆಚೆ ಬಂದರೆ ಲೋಕೇಶ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತೇನೆ. ಥ್ಯಾಂಕ್ಯೂ’ ಎಂದು ಹೇಳಿದ್ದರು. ತುಂಬಾ ಗಟ್ಟಿ ಮನಸ್ಸಿನ ವ್ಯಕ್ತಿತ್ವ ಅವರದ್ದು. - ಗ್ರೀಷ್ಮಾ
ಅಪರ್ಣಾ ಅವರ ಕುಟುಂಬಕ್ಕೆ ನಾನು ಆಪ್ತ. ಅಪರ್ಣಾ ನಿಧನ ಪರಿಶುದ್ಧವಾದ ಮನಸ್ಸನ್ನು ಕಳೆದುಕೊಂಡಿದ್ದೇವೆ ಎನ್ನುವ ಭಾವನೆ ಕಾಡುತ್ತಿದೆ. ಅವರ ನಿರೂಪಣೆ ದೊಡ್ಡ ಮೆರುಗು ಅಂತಲೇ ಹೇಳಬಹುದು. ನಿಜವಾದ ಕನ್ನಡದ ಸೇವೆ ಮಾಡಿದ್ದು ಅಪರ್ಣಾ. ಅವರ ನಗು ಮುಖದ, ಮೆಲು ಧ್ವನಿಯ ಸ್ಪಷ್ಟ ಕನ್ನಡದ ಮಾತುಗಳು ಎಂದಿಗೂ ಶಾಶ್ವತ.
- ರಮೇಶ್ ಭಟ್
‘ಗ್ರಾಮಾಯಣ’ ಚಿತ್ರದಲ್ಲಿ ಅಪರ್ಣಾ ಅವರು ನನಗೆ ತಾಯಿ ಪಾತ್ರದಲ್ಲಿ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಇದರ ಚಿತ್ರೀಕರಣದಲ್ಲಿ ಭೇಟಿ ಆಗಿದ್ದೆ. ಅವರ ಜತೆಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಶೂಟಿಂಗ್ ಸಮಯದಲ್ಲಿ ಅವರಿಂದ ಕಲಿದ್ದೇನೆ. ಈಗ ಅವರು ಇಲ್ಲ ಎಂಬುದು ತಿಳಿದು ಬೇಸರವಾಗುತ್ತಿದೆ.
- ವಿನಯ್ ರಾಜ್‌ಕುಮಾರ್
ಅಪರ್ಣಾ ವಿಧಿವಶ ಒಂದು ಶಾಕಿಂಗ್ ನ್ಯೂಸ್. ಅವರ ಆರೋಗ್ಯ ಸರಿ ಇರಲಿಲ್ಲ ಅನ್ನೋದೇ ನನಗೆ ಗೊತ್ತಿರಲಿಲ್ಲ. ಅವರನ್ನು ಮೊದಲ ಸಲ ನೋಡಿದ್ದು ದೂರದರ್ಶನದಲ್ಲಿ. ಅವರು ಅದಾಗಲೇ ಸಿನಿಮಾದಲ್ಲಿ ನಟಿಸಿದ್ದರು. ಅಪರ್ಣಾ ಅವರು ಸುದ್ದಿ ಓದುವ ಶೈಲಿಯನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಮಜಾ ಟಾಕೀಸ್ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಅಪರ್ಣಾ ಅವರನ್ನು ನಾನು ನೋಡಿದ್ದೇನೆ. ಎಲ್ಲೇ ಸಿಕ್ಕರೂ ನಗುಮುಖದಿಂದ ಮಾತನಾಡುತ್ತಿದ್ದರು. ಅಪರ್ಣಾ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ.
- ತಾರಾ
ಅಪರ್ಣಾ ನಮ್ಮ ಗುಂಪಿನ ಜತೆಗೆ ಹೆಚ್ಚು ಗುರುತಿಸಿಕೊಂಡಿದ್ದವರು. ಈಗ ಅವರು ಇಲ್ಲ ಎಂಬುದು ನೋವಿನ ಸಂಗತಿ. ಆರೋಗ್ಯ ಸಮಸ್ಯೆ ಇರೋದು ಗೊತ್ತಿದ್ದರೂ ನಗು ನಗುತ್ತಾ ಎಲ್ಲರ ಜತೆಗೆ ಮಾತನಾಡುತ್ತಿದ್ದರು. ಖುಷಿಯಿಂದಲೇ ಜೀವನ ಸ್ವೀಕರಿಸಿದವರು ಅಪರ್ಣಾ.
- ದತ್ತಣ್ಣ
ನಾನು ಅಪರ್ಣಾ ಅವರನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಆಗ ಹೇಗಿದ್ದರೋ ಈಗಲೂ ಹಾಗೆ ಇದ್ದಾರೆ. ನಾನು ಅವರನ್ನು ಅಕ್ಕ ಅಂತಲೇ ಕರೆಯುತ್ತಿದ್ದೆ. ನಾನು ಮಾಡುತ್ತಿದ್ದ ಡ್ಯಾನ್ಸ್ ಶೋನ ನಿರೂಪಣೆ ಮಾಡುತ್ತಿದ್ದರು ಅಪರ್ಣಾ ಅವರು. ಅವರು ತಮ್ಮ ಮಾತು, ನಡವಳಿಕೆ ತುಂಬಾ ಶುದ್ಧವಾಗಿ ಇಟ್ಟುಕೊಂಡಿದ್ದರು. ಇತ್ತೀಚೆಗೆ ಅವರ ಜತೆಗೆ ನಾನು ಹೊಸ ಪ್ರಾಜೆಕ್ಟ್ ವಿಚಾರವಾಗಿ ಮಾತನಾಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಆ ಪ್ರಾಜೆಕ್ಟ್ ಮಾಡುತ್ತಿಲ್ಲ ಅಂತ ಹೇಳಿದರು. ಆದರೆ, ಅದು ಇಷ್ಟು ದೊಡ್ಡ ಸಮಸ್ಯೆ ಅಂತ ಅನಿಸಲಿಲ್ಲ. ಆರೋಗ್ಯ ಸಮಸ್ಯೆ ಎಂದಾಗ ಹೋಗಿ ಒಮ್ಮೆ ಮಾತನಾಡಿಸಿಕೊಂಡು ಬರಬೇಕು ಅಂತ ಈಗ ಅನಿಸುತ್ತಿದೆ. ಅಪರ್ಣಾ ಅವರು ನಮ್ಮ ಜತೆಗೆ ಇಲ್ಲಾ ಅನ್ನೋದು ಈಗಲೂ ಅರಗಿಸಿಕೊಲ್ಳುವುದಕ್ಕೆ ಆಗುತ್ತಿಲ್ಲ.
- ಬಿಗ್‌ಬಾಸ್ ಸ್ಪರ್ಧಿ ಸಿರಿ
ನಾನು ಅವರ ಜತೆಗೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದೇನೆ. ವೃತ್ತಿಪರ ಸ್ನೇಹ ತುಂಬಾ ಚೆನ್ನಾಗಿತ್ತು. ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡನ್ನೂ ಚೆನ್ನಾಗಿ ಇಟ್ಟುಕೊಂಡಿದ್ದವರು ಅಪರ್ಣಾ. ಅವರು ವೇದಿಕೆ ಮೇಲೆ ಬಂದ ಕೂಡಲೇ ಮ್ಯಾಜಿಕ್ ಹುಟ್ಟಿಕೊಳ್ಳುತ್ತಿತ್ತು. ನನ್ನ ಮತ್ತು ಅವರ ನಡುವೆ ಸ್ಪರ್ಧೆ ಬರಲೇ ಇಲ್ಲ. ಕಾರ್ಯಕ್ರಮ ಯಶಸ್ವಿಗೆ ನಾವು ದುಡಿಯುತಿದ್ವಿ. ಅವರಿಗೆ ಜೀವನದ ಮೇಲೆ ಬಹಳ ಆಸೆ ಇತ್ತು. ನಕರಾತ್ಮಕ ಯೋಚನೆಗಳ ಬಗ್ಗೆ ಬೇಸರ ಇತ್ತು. ಭಾಷೆ ಬಗ್ಗೆ ತುಂಬಾ ಪ್ರೀತಿ ಇತ್ತು. ನನ್ನ ಮತ್ತು ಅಪರ್ಣಾ ಅವರನ್ನು ಭಾರತದ ಅತ್ಯುತ್ತಮ ನಿರೂಪಣಾ ಜೋಡಿ ಎನ್ನುತ್ತಿದ್ದರು. ಈ ಮಾತು ಎಂದಿಗೂ ಮರೆಯಲಾಗದು.
- ಶಂಕರ್ ಪ್ರಕಾಶ್
ನನಗೆ ಅಪರ್ಣಾ ಅವರ ಪರಿಚಯ ಆಗಿದ್ದು ಬಿಗ್‌ಬಾಸ್ ಶೋ ಮೂಲಕ. ಅಲ್ಲಿಂದ ನಮ್ಮ ಒಡನಾಟ ಆರಂಭವಾಯಿತು. ಇತ್ತೀಚೆಗೆ ಸಿನಿಮಾ ಕಾರ್ಯಕ್ರಮದಲ್ಲಿ ಭೇಟಿ ಆಗಿದ್ದೇ ಕೊನೆ. ನಾಗರಾಜ್ ವಸ್ತಾರೆ ಮತ್ತು ಅಪರ್ಣಾ ಅವರು ಅನೋನ್ಯವಾಗಿದ್ದ ದಂಪತಿ. ಅಪರ್ಣಾ ಅವರು ಹೆಚ್ಚು ಮಾತನಾಡಿದರೆ, ನಾಗರಾಜ್ ಕಡಿಮೆ ಮಾತನಾಡುತ್ತಿದ್ದರು. ಮಕ್ಕಳು ಇಲ್ಲ ಎನ್ನುವ ಕೊರಗು ಅವರಿಗೆ ಇತ್ತು. ಆದರೆ, ಗಿಡಗಳನ್ನು ಮಕ್ಕಳಂತೆ ಬೆಳೆಸುತ್ತಿದ್ದರು.
- ಬ್ರಹ್ಮಾಂಡ ಗುರೂಜಿ