ತೆಲುಗರ ಬಗ್ಗೆ ನಟಿ ಕಸ್ತೂರಿ ಶಂಕರ್‌ ಹೇಳಿಕೆ: ವಿವಾದ

| Published : Nov 05 2024, 12:33 AM IST

ತೆಲುಗರ ಬಗ್ಗೆ ನಟಿ ಕಸ್ತೂರಿ ಶಂಕರ್‌ ಹೇಳಿಕೆ: ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

‘ತೆಲುಗು ಭಾಷಿಕರು ತಮಿಳುನಾಡಿಗೆ 300 ವರ್ಷಗಳ ಹಿಂದೆ ವಲಸೆ ಬಂದಿದ್ದು, ತಮಿಳು ರಾಣಿಯರ ಸೇವೆ ಸಲ್ಲಿಸುವ ಸಲುವಾಗಿ. ಅವರು ಸೇವಕರಾಗಿ ತಮಿಳು ರಾಜ್ಯಕ್ಕೆ ಬಂದಿದ್ದರು’ ಎಂದು ತಮಿಳು ನಟಿ ಕಸ್ತೂರಿ ಶಂಕರ್‌ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.

ಚೆನ್ನೈ: ‘ತೆಲುಗು ಭಾಷಿಕರು ತಮಿಳುನಾಡಿಗೆ 300 ವರ್ಷಗಳ ಹಿಂದೆ ವಲಸೆ ಬಂದಿದ್ದು, ತಮಿಳು ರಾಣಿಯರ ಸೇವೆ ಸಲ್ಲಿಸುವ ಸಲುವಾಗಿ. ಅವರು ಸೇವಕರಾಗಿ ತಮಿಳು ರಾಜ್ಯಕ್ಕೆ ಬಂದಿದ್ದರು’ ಎಂದು ತಮಿಳು ನಟಿ ಕಸ್ತೂರಿ ಶಂಕರ್‌ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಕಸ್ತೂರಿ ಕೂಡಲೇ ಕ್ಷಮೆಯಾಚಿಸಬೇಕು. ಅವರ ಹೇಳಿಕೆಯಿಂದ ಇಡೀ ತೆಲುಗು ಭಾಷಿಕರಿಗೆ ಅವಮಾನವಾಗಿದೆ ಎಂದು ಬಿಜೆಪಿ ಸೇರಿ ಅನೇಕ ರಾಜಕೀಯ ನಾಯಕರು ಹಾಗೂ ತೆಲುಗು ಭಾಷಿಕರು ಆಗ್ರಹಿಸಿದ್ದಾರೆ.ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಎಲ್ಲ ತೆಲುಗರ ಬಗ್ಗೆ ಹೇಳಿಲ್ಲ. ಇತಿಹಾಸವನ್ನು ಉಲ್ಲೇಖಿಸಿ ಕೆಲವು ತೆಲುಗರು 300 ವರ್ಷ ಹಿಂದೆ ತಮಿಳುನಾಡಿಗೆ ಬಂದಿದ್ದರ ಬಗ್ಗೆ ಹೇಳಿದ್ದೆ. ಅವರ ಕುಟುಂಬಸ್ಥರು ಈತ ತಮಿಳುನಾಡಿನಲ್ಲಿ ಇದ್ದು ತಮಿಳರೇ ಆಗಿದ್ದಾರೆ. ಅವರ ಬಗ್ಗೆ ನಾನು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

==

ನ್ಯಾಯದಾನ ಮಾಡದೇ ಅನ್ಯಾಯ: ಕೋರ್ಟಲ್ಲಿ ಇಮ್ರಾನ್‌ ಪತ್ನಿ ಬೀಬಿ ಕಣ್ಣೀರು

ಇಸ್ಲಾಮಾಬಾದ್‌: ಸದ್ಯ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಜಾಮೀನು ದೊರಕಿಸಲು ನ್ಯಾಯಾಲಯಕ್ಕೆ ಬಂದಿದ್ದ ಅವರ ಪತ್ನಿ ಬುಶ್ರಾ ಬೀಬಿ ಅಸಹಾಯಕಾರಿ ನ್ಯಾಯಾಲಯದಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ. ‘ನ್ಯಾಯವನ್ನು ಒದಗಿಸಬೇಕಾದವರಿಂದಲೇ ನನಗೆ ಕಳೆದ 9 ತಿಂಗಳಿಂದ ಅನ್ಯಾಯವಾಗುತ್ತಿದೆ. ನನಗೆ ಹಾಗೂ ನನ್ನ ಪತಿಗೆ ಅನ್ಯಾಯವಾಗಿ ಶಿಕ್ಷೆ ವಿಧಿಸಲಾಗಿದೆ. ನಾನಿಲ್ಲಿ ನ್ಯಾಯ ಕೇಳಲು ಬಂದಿಲ್ಲ. ನಮ್ಮ ಪರವಾಗಿ ವಾದ ಮಂಡಿಸುವ ವಕೀಲರು ಕೂಡ ಕೇವಲ ಕಾಲಹರಣ ಮಾಡುತ್ತಿದ್ದಾರೆ’ ಎನ್ನುತ್ತಾ ಬೀಬಿ ಇಸ್ಲಾಮಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಂದೆ ಹನಿಗಣ್ಣಾಗಿದ್ದಾರೆ.

==

ಶೇ.98ರಷ್ಟು ₹2000 ವಾಪಸ್‌: ₹6,970 ಕೋಟಿ ಮರಳುವುದು ಬಾಕಿ

ಮುಂಬೈ: 2023ರಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯತೊಡಗಿದ್ದ ಆರ್‌ಬಿಐ, ಈಗಾಗಲೇ ಶೇ.98.04ರಷ್ಟು ನೋಟುಗಳು ತನಗೆ ವಾಪಸ್‌ ಬಂದಿವೆ ಎಂದು ಸೋಮವಾರ ಮಾಹಿತಿ ನೀಡಿದೆ. ಆದರೆ ಇನ್ನೂ 6,970 ಕೋಟಿ ರು. ಜನರ ಬಳಿಯೇ ಇದೆ ಎಂದು ಹೇಳಿದೆ.2023ರ ಮೇ 19ರಂದು ₹2000ದ 3.56 ಲಕ್ಷ ಕೋಟಿ ಬೆಲೆಯ ನೋಟುಗಳು ಚಲಾವಣೆಯಲ್ಲಿದ್ದು, ಇದರ ಮೊತ್ತ 2024ರ ಅ.31ರ ವೇಳೆಗೆ 6,970 ಕೋಟಿಗೆ ಇಳಿದಿದೆ.

2023ರ ಅ.7ರ ವರೆಗೆ ₹2000 ನೋಟುಗಳ ಜಮೆ ಅಥವಾ ಬದಲಾವಣೆಗೆ ಎಲ್ಲಾ ಬ್ಯಾಂಕುಗಳಲ್ಲಿ ಅವಕಾಶ ನೀಡಲಾಗಿತ್ತು.

==

ರಾಜಸ್ಥಾನದಲ್ಲಿ ಕುರಿಗಾಹಿ ಕೊಂದಿದ್ದ 12 ವರ್ಷದ ಹುಲಿ ಗ್ರಾಮಸ್ಥರ ಕಲ್ಲೇಟಿಗೆ ಬಲಿ

ಜೈಪುರ: ರಾಜಸ್ಥಾನದ ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶ ಬಳಿಯ ಉಲಿಯಾನದಲ್ಲಿ ಗ್ರಾಮದ ಕುರಿಗಾಹಿಯನ್ನು ಕೊಂದಿದ್ದ 12 ವರ್ಷದ ಹುಲಿ ಗ್ರಾಮಸ್ಥರ ಕಲ್ಲೇಟಿನಿಂದ ಸಾವನ್ನಪ್ಪಿದೆ. ಉಲಿಯಾನದಲ್ಲಿ ಭಾನುವಾರ ಮಧ್ಯಾಹ್ನ ಹುಲಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಉಲಿಯಾನದಲ್ಲಿ ಹುಲಿ ದಾಳಿಯಿಂದ ಕುರಿಗಾಹಿ ಭರತ್‌ ಲಾಲ್‌ ಮೃತಪಟ್ಟ ನಂತರ 20ಕ್ಕೂ ಹೆಚ್ಚು ಗ್ರಾಮಸ್ಥರು ದಾಳಿ ಮಾಡಿ ಹುಲಿ ಕೊಂದಿದ್ದಾರೆ. ಶನಿವಾರ ಇದೇ ಸ್ಥಳದಲ್ಲಿ ಕುರಿಗಾಹಿ ಕೊಂದು ಹುಲಿ ಅಲ್ಲಿಂದ ಓಡಿ ಹೋಗಿತ್ತು.

==

ಸಿಎಂ ಯೋಗಿಗೆ ಬೆದರಿಕೆ ಒಡ್ಡಿದ್ದ ಮಹಿಳೆ ವಿಚಾರಣೆ ನಂತರ ಬಿಡುಗಡೆ

ಮುಂಬೈ: 10 ದಿನಗಳೊಳಗಾಗಿ ರಾಜೀನಾಮೆ ನೀಡದಿದ್ದಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ರೀತಿ ಹತ್ಯೆ ಮಾಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಒಡ್ಡಿದ್ದ ಮಹಿಳೆಯನ್ನು ಪೊಲೀಸರು ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಪೊಲೀಸರಿಗೆ ಬೆದರಿಕೆ ಸಂದೇಶ ರವಾನಿಸಿದ್ದ ಥಾಣೆ ಜಿಲ್ಲೆಯ ಫಾತಿಮಾ ಖಾನ್‌ಳನ್ನು (24) ಉಗ್ರ ನಿಗ್ರಹ ದಳ ಹಾಗೂ ಪೊಲೀಸರು ಜಂಟಿಯಾಗಿ ವಶಕ್ಕೆ ಪಡೆದು, ವಿಚಾರಣೆಗೆಂದು ಮುಂಬೈಗೆ ಕರೆತಂದಿದ್ದರು. ವಿಚಾರಣೆ ವೇಳೆ ಸುಶಿಕ್ಷಿತಳಾದ ಫಾತಿಮಾ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಕಂಡುಬಂದಿತ್ತು. ಜೊತೆಗೆ ಆಕೆಯ ಬೆದರಿಕೆ ಹಿಂದ ಯಾವುದೇ ದುಷ್ಕೃತ್ಯ ಕಂಡುಬರದ ಹಿನ್ನೆಲೆಯಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗಿದೆ.

==

ಮದರಸಾ ಕಾಯ್ದೆಯ ಸಂವಿಧಾನ ಸಿಂಧುತ್ವ: ಇಂದು ಸುಪ್ರೀಂ ತೀರ್ಪು

ನವದೆಹಲಿ: ಮದರಸಾಗಳ ಕುರಿತ 2004ರ ಉತ್ತರ ಪ್ರದೇಶದ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತೀರ್ಪನ್ನು ನ. 5ರಂದು ಸುಪ್ರೀಂ ಕೋರ್ಟ್ ಪ್ರಕಟಿಸುವ ಸಾಧ್ಯತೆಯಿದೆ.ಮಾರ್ಚ್ 22 ರಂದು, ಅಲಹಾಬಾದ್ ಹೈಕೋರ್ಟ್ ಕಾನೂನನ್ನು ’ಅಸಂವಿಧಾನಿಕ’ ಮತ್ತು ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಿತ್ತು ಮತ್ತು ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಮದರಸಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.ಆದರೆ, ಏ.5ರಂದು ಸಿಜೆಐ ನೇತೃತ್ವದ ಪೀಠವು ಹೈಕೋರ್ಟ್ ತೀರ್ಪಿಗೆ ತಡೆ ನೀಡಿ 17 ಲಕ್ಷ ಮದರಸಾ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಸಮಾಧಾನ ನೀಡಿತ್ತು.