ಮಹಾ ಡಿಜಿಪಿ ತಕ್ಷಣ ಎತ್ತಂಗಡಿಗೆ ಚು.ಆಯೋಗ ಆದೇಶ

| Published : Nov 05 2024, 12:32 AM IST / Updated: Nov 05 2024, 12:33 AM IST

ಸಾರಾಂಶ

ನ.20ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ನವದೆಹಲಿ: ನ.20ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಶುಕ್ಲಾ ಮೇಲೆ ವಿಪಕ್ಷ ನಾಯಕರ ಫೋನ್‌ ಕರೆಗಳ ಕದ್ದಾಲಿಕೆ, ಪ್ರತಿಪಕ್ಷಗಳ ವಿರುದ್ಧ ಪೂರ್ವಾಗ್ರಹಪೀಡಿತ ಧೋರಣೆ ಸೇರಿದಂತೆ ಹಲವು ಆರೋಪಗಳನ್ನು ಕಾಂಗ್ರೆಸ್‌ ಸೇರಿದಂತೆ ಹಲವು ವಿಪಕ್ಷಗಳು ಮಾಡಿದ್ದು, ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಶುಕ್ಲಾ ನಂತರದ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿಗೆ ಅವರ ಜವಾಬ್ದಾರಿಗಳನ್ನು ಹಸ್ತಾಂತರಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವ ಚುನಾವಣಾ ಆಯೋಗ, ಹೊಸ ಡಿಜಿಪಿ ನಿಯೋಜನೆಗಾಗಿ 3 ಐಪಿಎಸ್‌ ಅಧಿಕಾರಿಗಳ ಪ್ಯಾನಲ್‌ ಅನ್ನು ಮಂಗಳವಾರದೊಳಗಾಗಿ ಕಳಿಸುವಂತೆ ಹೇಳಿದೆ.

ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ನಿಷ್ಪಕ್ಷಪಾತಿಗಳಾಗಿರುವುದರ ಜೊತೆಗೆ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಎಚ್ಚರಿಸಿದರು.