ಜಾರ್ಖಂಡ್‌ ವಿಧಾನಸಭಾ ಚುನಾವಣೆ ನಿಮಿತ್ತ, ಬಿಜೆಪಿ ಭರ್ಜರಿ ಉಚಿತ ಕೊಡುಗೆಗಳ ಪ್ರಣಾಳಿಕೆ

| Published : Nov 04 2024, 12:35 AM IST / Updated: Nov 04 2024, 05:47 AM IST

ಸಾರಾಂಶ

ಒಂದು ಕಡೆ ಉಚಿತ ಗ್ಯಾರಂಟಿ ಭರವಸೆಗಳ ಬಗ್ಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ಮಾತಿನ ಸಂಘರ್ಷ ನಡೆದಿದ್ದರೂ ಜಾರ್ಖಂಡ್‌ ವಿಧಾನಸಭಾ ಚುನಾವಣೆ ನಿಮಿತ್ತ, ಬಿಜೆಪಿ ಭರ್ಜರಿ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದೆ.

ರಾಂಚಿ: ಒಂದು ಕಡೆ ಉಚಿತ ಗ್ಯಾರಂಟಿ ಭರವಸೆಗಳ ಬಗ್ಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ಮಾತಿನ ಸಂಘರ್ಷ ನಡೆದಿದ್ದರೂ ಜಾರ್ಖಂಡ್‌ ವಿಧಾನಸಭಾ ಚುನಾವಣೆ ನಿಮಿತ್ತ, ಬಿಜೆಪಿ ಭರ್ಜರಿ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದೆ. ಮಹಿಳೆಯರಿಗೆ ಮಾಸಿಕ 2100 ರು. ಭತ್ಯೆ, ವಾರ್ಷಿಕ 2 ಉಚಿತ ಎಲ್‌ಪಿಜಿ ಸಿಲಿಂಡರ್‌, ಉಳಿದ ವೇಳೆ 500 ರು.ಗೆ ಎಲ್ಪಿಜಿ, 5 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿ, 2.87 ಲಕ್ಷ ಸರ್ಕಾರಿ ಹುದ್ದೆ ಭರ್ತಿ- ಇವು ಪ್ರಮುಖ ಭರವಸೆಗಳು.

ಅಲ್ಲದೆ ಆದಿವಾಸಿಗಳನ್ನು ಹೊರಗಿಟ್ಟು ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆಯನ್ನೂ ಕಮಲ ಪಕ್ಷ ನೀಡಿದೆ.

ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಣಾಳಿಕೆ ಒಳಗೊಂಡ ‘ಸಂಕಲ್ಪ ಪತ್ರ’ವನ್ನು ಭಾನುವಾರ ಇಲ್ಲಿ ಬಿಡುಗಡೆ ಮಾಡಿದರು. 81 ಸ್ಥಾನಬಲದ ರಾಜ್ಯ ವಿಧಾನಸಭೆಗೆ ನ.13 ಮತ್ತು ನ.20ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು. ನ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಪ್ರಮುಖ ಭರವಸೆಗಳು:

- ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ. ಆದಿವಾಸಿಗಳಿಗೆ ಇದು ಅನ್ವಯವಾಗದು.

- ಪದವಿ, ಸ್ನಾತಕೋತ್ತರ ಪದವೀಧರರಿಗೆ 2 ವರ್ಷಗಳವರೆಗೆ ಮಾಸಿಕ 2000 ರು. ನೆರವು.

- ಗೋಗೋ - ದೀದಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2100 ರು.ಆರ್ಥಿಕ ನೆರವು.

- 500 ರು.ಗೆ ಎಲ್‌ಪಿಜಿ ಸಿಲಿಂಡರ್‌ ವಿತರಣೆ, ಈ ಪೈಕಿ ವಾರ್ಷಿಕ 2 ಸಿಲಿಂಡರ್‌ (ದೀಪಾವಳಿ/ ರಕ್ಷಾಬಂಧನ ವೇಳೆ) ಉಚಿತ.

- ಮಾಸಿಕ 300 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಕೆ.

50 ಲಕ್ಷ ರು.ವರೆಗಿನ, ಮಹಿಳೆಯರ ಹೆಸರಲ್ಲಿನ ಆಸ್ತಿ ನೋಂದಣಿಗೆ ಕೇವಲ 1 ರು. ನೋಂದಣಿ ಶುಲ್ಕ.

2.87 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ. 5 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿಗೆ ಸೂಕ್ತ ಯೋಜನೆ.

ಅಗ್ನಿವೀರರಿಗೆ ಖಚಿತ ಉದ್ಯೋಗದ ಭರವಸೆ. 1.25 ಕೋಟಿ ಮನೆಗಳಿಗೆ ಸೌರಶಕ್ತಿ ವಿದ್ಯುತ್‌ ಸಂಪರ್ಕ

ಅಕ್ರಮ ವಲಸಿಗರ ಗಡಿಪಾರು, ವಲಸಿಗರ ಪಾಲಾದ ಭೂಮಿ ಮರಳಿ ಪಡೆಯಲು ವಿಶೇಷ ಕಾಯ್ದೆ.

ಆದಿವಾಸಿಗಳ ಮಕ್ಕಳ ಮದುವೆ ಆಗುವ ಅಕ್ರಮ ವಲಸಿಗರಿಗೆ ಆದಿವಾಸಿಗಳ ಸ್ಥಾನಮಾನ ಇಲ್ಲ.

ಆಪರೇಷನ್‌ ಸುರಕ್ಷಾ ಯೋಜನೆ ಮೂಲಕ 2027ರೊಳಗೆ ರಾಜ್ಯ ಮಾನವ ಕಳ್ಳಸಾಗಣೆ ಮುಕ್ತ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ಡಯಾಲಿಸಿಸ್‌ ವ್ಯವಸ್ಥೆ

ಪ್ರಶ್ನೆ ಪ್ರತ್ರಿಕೆ ಸೋರಿಕೆ ಹಗರಣದ ಕುರಿತು ಎಸ್‌ಐಟಿ ಮತ್ತು ಸಿಬಿಐ ಮೂಲಕ ತನಿಖೆ ಭರವಸೆ.

10 ವೈದ್ಯಕೀಯ ಕಾಲೇಜು ಸ್ಥಾಪನೆ. ಪ್ರವಾಸೋದ್ಯಮ ಕೇಂದ್ರವಾಗಿ ರಾಜ್ಯ ಅಭಿವೃದ್ಧಿ.

ರಾಜ್ಯದ ಎಲ್ಲಾ ಬಡವರಿಗೂ ಉಚಿತವಾಗಿ ಮನೆ ನಿರ್ಮಾಣ. 25000 ಕಿ.ಮೀ ಹೆದ್ದಾರಿ ನಿರ್ಮಾಣ

ಗ್ರಾಮ ಪಂಚಾಯತ್‌ ಮುಖ್ಯಸ್ಥರಿಗೆ ಮಾಸಿಕ 5000 ರು. ವೇತನ ಪಾವತಿ.

ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತವಾಗಿ 10 ಲಕ್ಷ ರು.ವರೆಗಿನ ಸಾಲ ಮಂಜೂರು.

ಪ್ರಾಂತೀಯ ಜಾರ್ಖಂಡ್‌ ಭಾಷೆಯಲ್ಲೇ ಶಾಲೆಯಲ್ಲಿ ಶಿಕ್ಷಣ ಬೋಧನೆ.