ಉಗ್ರರ 1 ಕೈಯಲ್ಲಿ ಹಸುಗೂಸು, ಮತ್ತೊಂದರಲ್ಲಿ ಎಕೆ 47!

| Published : Oct 15 2023, 12:46 AM IST / Updated: Oct 16 2023, 11:39 AM IST

ak-47

ಸಾರಾಂಶ

ಇಸ್ರೇಲ್‌ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿದಂತೆ ಅನೇಕ ಮಕ್ಕಳನ್ನು ಅಪಹರಿಸಿದ್ದ ಹಮಾಸ್‌ ಉಗ್ರರು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿರುವ ವಿಡಿಯೋವೊಂದನ್ನು ಇಸ್ರೇಲ್‌ ಸೇನೆ ಬಿಡುಗಡೆ ಮಾಡಿದೆ. 

ಜೆರುಸಲೇಂ: ಇಸ್ರೇಲ್‌ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿದಂತೆ ಅನೇಕ ಮಕ್ಕಳನ್ನು ಅಪಹರಿಸಿದ್ದ ಹಮಾಸ್‌ ಉಗ್ರರು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿರುವ ವಿಡಿಯೋವೊಂದನ್ನು ಇಸ್ರೇಲ್‌ ಸೇನೆ ಬಿಡುಗಡೆ ಮಾಡಿದೆ. ಇದರಲ್ಲಿ 1 ಕೈಯಲ್ಲಿ ಹಸುಗೂಸು, ಮತ್ತೊಂದರಲ್ಲಿ ಎಕೆ 47 ಹಿಡಿದಿರುವ ಉಗ್ರರು ಪೈಶಾಚಿಕವಾಗಿ ವರ್ತಿಸುವುದು ಕಂಡುಬಂದಿದೆ. ಈ ವಿಡಿಯೋದ ಕೊನೆಯಲ್ಲಿ ಹಮಾಸ್‌ ಉಗ್ರನೊಬ್ಬ ಬಾಯಾರಿದ ಒಂದು ಮಗುವಿಗೆ ಕುಡಿಯಲು ನೀರು ಕೊಡುವ ಮುನ್ನ ‘ಬಿಸ್ಮಿಲ್ಲಾ’ ಎನ್ನುವಂತೆ ಹೇಳುತ್ತಾನೆ. ಏನೂ ಅರಿಯದ ಮಗು ಬಿಸ್ಮಿಲ್ಲಾ ಎನ್ನುತ್ತದೆ. ಬಳಿಕ ಆತ ನೀರು ಕೊಡುತ್ತಾನೆ. ಇನ್ನೊಂದೆಡೆ ಎರಡು ಶಿಶುಗಳನ್ನು ಹಮಾಸ್‌ ಉಗ್ರನೊಬ್ಬ ಕೈಯಲ್ಲಿ ಎತ್ತಿಕೊಂಡಿದ್ದಾನೆ. ತಮ್ಮ ಪೋಷಕರಿಗಾಗಿ ಅಳುತ್ತಿರುವ ಮಕ್ಕಳ ಸುತ್ತ ಎಕೆ-47 ಗನ್‌ ಹಿಡಿದು ನಿಂತಿರುವ ಉಗ್ರರ ಈ ವಿಡಿಯೋ ವೈರಲ್‌ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 30 ಸೆಕೆಂಡಿನ ಈ ವಿಡಿಯೋದಲ್ಲಿ ಅಳುತ್ತಿರುವ ಮಕ್ಕಳನ್ನು ಸಮಾಧಾನಪಡಿಸಲು ಉಗ್ರರು ಯತ್ನಿಸುತ್ತಿರುವುದು, ತೊಟ್ಟಿಲಲ್ಲಿ ಮಗುವೊಂದನ್ನು ಮಲಗಿಸುತ್ತಿರುವುದು, ಗಾಯಗೊಂಡಿರುವ ಬಾಲಕನೋರ್ವನ ಕಾಲಿಗೆ ಉಗ್ರರು ಬ್ಯಾಂಡೇಜ್‌ ಸುತ್ತುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ಹಮಾಸ್‌ ಮೂಲಗಳೇ ಮೊದಲು ಬಿಡುಗಡೆ ಮಾಡಿಕೊಂಡಿದ್ದು, ಬಳಿಕ ಇಸ್ರೇಲ್‌ ಪಡೆಯು ಹಮಾಸ್‌ ಉಗ್ರರ ಕ್ರೌರ್ಯ ತೋರಿಸಲು ಇದನ್ನು ಹಂಚಿಕೊಂಡಿದೆ. ಈ ಬಗ್ಗೆ ಟ್ವೀಟ್‌ ಮಾಡಿವ ಇಸ್ರೇಲ್‌ ಪಡೆ ‘ನೀವು ಅವರ ಗಾಯಗಳನ್ನು ನೋಡಬಹುದು. ಅವರ ಅಳುವನ್ನು ಕೇಳಬಹುದು. ಹಮಾಸ್‌ನಿಂದ ತಮ್ಮದೇ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿರುವ ಮಕ್ಕಳು ಭಯದಿಂದ ನಡುಗುತ್ತಿದ್ದಾರೆ. ಅಲ್ಲದೇ ಮಕ್ಕಳು ಪೋಷಕರು ಪಕ್ಕದ ಕೋಣೆಗಳಲ್ಲಿ ಹೆಣವಾಗಿ ಬಿದ್ದಿರುತ್ತಾರೆ. ಇವರೇ ನಾವು ಸೋಲಿಸಲಿರುವ ಉಗ್ರರು’ ಎಂದಿದೆ. ಈ ನಡುವೆ ಗಾಜಾದಲ್ಲಿ ಹಮಾಸ್‌ ಅಲ್ಲಿನ ನಾಗರಿಕರನ್ನು ಮಾನವ ತಡೆಗೋಡೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್‌ ಆರೋಪಿಸಿದೆ. ತಾನು ಹಮಾಸ್‌ ಉಗ್ರರ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಆ ಉಗ್ರರು ತಮಗೆ ಅಡ್ಡಲಾಗಿ ಜನರನ್ನು ಎದುರು ನಿಲ್ಲಿಸಿಕೊಂಡು ಬಚಾವಾಗಲು ಪ್ರಯತ್ನಿಸುತ್ತಿದ್ದಾರೆ ಎಂದಿದೆ.