ಸಾರಾಂಶ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯ ಪರಿಣಾಮ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 39 ರೂ. ಹೆಚ್ಚಳವಾಗಿದೆ.
ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾದರಗಳ ಏರಿಳಿಕೆ ಅನ್ವಯ, ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 39 ರು.ನಷ್ಟು ಹೆಚ್ಚಳ ಮಾಡಿವೆ. ಹೀಗಾಗಿ ಬೆಂಗಳೂರಿನಲ್ಲಿ 19 ಕೆಜಿ ತೂಕದ ಸಿಲಿಂಡರ್ ಬೆಲೆ 1813 ರು.ಗೆ ತಲುಪಿದೆ. ಆದರೆ ಗೃಹ ಬಳಕೆ ಎಲ್‌ಪಿಜಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದೆ ವೇಳೆ ವಿಮಾನಗಳಿಗೆ ಬಳಸುವ ಇಂಧನದ ದರವನ್ನು ಪ್ರತಿ 1000 ಲೀ.ಗೆ ಶೇ.4.6ರಷ್ಟು ಅಂದರೆ 4495 ರು.ನಷ್ಟು ಇಳಿಕೆ ಮಾಡಲಾಗಿದೆ.
ಮಣಿಪುರದಲ್ಲಿ ಮತ್ತೆ ಹಿಂಸೆ:ಗುಂಡಿಗೆ ಮಹಿಳೆ ಬಲಿ, ಬಾಂಬ್ ದಾಳಿಯಲ್ಲಿ ಪೊಲೀಸರಿಗೆ ಗಾಯ
ಇಂಫಾಲ: ಮಣಿಪುರದಲ್ಲಿ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಆಕೆಯ 12 ವರ್ಷದ ಮಗಳು ಗಾಯಗೊಂಡಿದ್ದಾರೆ. ಇನ್ನು ಬಂಡುಕೋರರು ಡ್ರೋನ್‌ನಿಂದ ಎಸೆದ ಬಾಂಬಿನ ದಾಳಿಗೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿದೆ. ಕಾಂಗೊಕ್ಪಿಯ ನಖುಜಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ನ್ಗಂಗ್ಬಾಮ್ ಸುರ್ಬಾಲಾ( 31) ಎನ್ನುವವರು ಸಾವನ್ನಪ್ಪಿದ್ದರೆ, ಆಕೆಯ ಮಗಳು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಡ್ರೋನ್‌ನಿಂದ ಎಸೆದ ಬಾಂಬ್ ಬಂದು ಬಿದ್ದಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಅಲ್ಲದೇ ಡ್ರೋನ್‌ನಿಂದ ಬಾಂಬ್ ಎಸೆದಿರುವ ಪರಿಣಾಮ ಕೆಲವೆಡೆ ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದೆ.
ವಯನಾಡು ದುರಂತ: ₹ 2000 ಕೋಟಿ ಕೇಂದ್ರ ನೆರವು ಕೇಳಿದ ಕೇರಳ
ತಿರುವನಂತಪುರ: ಕಂಡು ಕೇಳರಿಯದ ಭೂಕುಸಿತಕ್ಕೆ ತುತ್ತಾಗಿರುವ ವಯನಾಡಿಗೆ ಕೇರಳ ಸರ್ಕಾರವು ಕೇಂದ್ರದಿಂದ 2000 ಕೋಟಿ ರು. ನೆರವು ಬಯಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೇಡಿಕೆ ಇರಿಸಿದ್ದಾಗಿ ಹೇಳಿದ್ದಾರೆ. ‘ಪ್ರಧಾನಿ ಮೋದಿ ನಮ್ಮ ಬೇಡಿಕೆಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ ವಯನಾಡು ದುರಂತವನ್ನು ರಾಷ್ಟ್ರೀಯ/ ತೀವ್ರ ವಿಪತ್ತು ಎಂದು ಪರಿಗಣಿಸುವಂತೆ ಮನವಿ ಮಾಡಿದ್ದೇವೆ. ರಾಷ್ಟ್ರೀಯ ವಿಪತ್ತೆ ಎಂದು ಪರಿಗಣನೆಯಾದರೆ ದೇಶದ ಎಲ್ಲಾ ಸಂಸದರು, ತಲಾ 1 ಕೋಟಿ ರು. ನೆರವನ್ನು ಕೇರಳ ವಿಪತ್ತು ಪರಿಹಾರ ನಿಧಿಗೆ ನೀಡಬಹುದಾಗಿದೆ’ ಎಂದರು.
ಹಳಿಯ ಮೇಲೆ ಮೊಬೈಲ್ ಗೇಮ್ ಆಡುವಾಗ ರೈಲು ಹರಿದು ಬಾಲಕರಿಬ್ಬರ ಸಾವು
ದುರ್ಗ್: ರೈಲ್ವೆ ಹಳಿ ಮೇಲೆ ಕುಳಿತು ಮೊಬೈಲ್‌ನಲ್ಲಿ ಗೇಮ್ ಆಡುವಾಗ ರೈಲು ಹರಿದು 14 ವರ್ಷದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ದರ್ಗ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಪುರಣ್ ಸಿಂಗ್ ಮತ್ತು ವೀರ್ ಸಿಂಗ್ ಎಂಬ ಮೂಲದ ಬಾಲಕರು, ಸಂಜೆ 7 ಗಂಟೆ ವೇಳೆ ರೈಲ್ವೆ ಹಳಿ ಮೇಲೆ ಕುಳಿತು ಮೊಬೈಲ್‌ನಲ್ಲಿ ಆಟ ಆಡುತ್ತಿದ್ದರು. ಈ ವೇಳೆ ಅದೇ ಹಳಿಯಲ್ಲಿ ರೈಲು ಬಂದರೂ, ಹಾರನ್ ಮಾಡಿದರೂ ಆಟದಲ್ಲಿ ಮಗ್ನರಾಗಿದ್ದ ಅವರಿಗೆ ಅದು ಕೇಳಿಲ್ಲ. ಹೀಗಾಗಿ ರೈಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.