ಕೇಜ್ರಿ, ಸಿಸೋಡಿಯಾಗೆ ₹100 ಕೋಟಿ ಲಂಚ ಕೊಟ್ಟಿದ್ದ ಕವಿತಾ!

| Published : Mar 18 2024, 01:53 AM IST

ಸಾರಾಂಶ

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಅಂದಿನ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಜತೆ ಡೀಲ್‌ ಕುದುರಿಸಿದ್ದ ಬಿಆರ್‌ಎಸ್‌ ನಾಯಕಿ ಕವಿತಾ, 100 ಕೋಟಿ ರು. ಲಂಚ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ(ಇ.ಡಿ.)ದ ರಿಮ್ಯಾಂಡ್‌ ಡೈರಿಯಲ್ಲಿದೆ.

ಹೈದರಾಬಾದ್‌: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಅಂದಿನ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಜತೆ ಡೀಲ್‌ ಕುದುರಿಸಿದ್ದ ಬಿಆರ್‌ಎಸ್‌ ನಾಯಕಿ ಕವಿತಾ, 100 ಕೋಟಿ ರು. ಲಂಚ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ(ಇ.ಡಿ.)ದ ರಿಮ್ಯಾಂಡ್‌ ಡೈರಿಯಲ್ಲಿದೆ. ಇದರಿಂದಾಗಿ ಕೇಜ್ರಿವಾಲ್‌ ಅವರಿಗೆ ಭಾರಿ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಪುತ್ರಿಯಾಗಿರುವ ಹಾಗೂ ಹಾಲಿ ತೆಲಂಗಾಣದ ವಿಧಾನಪರಿಷತ್‌ ಸದಸ್ಯೆಯಾಗಿರುವ ಕೆ. ಕವಿತಾ, ಇಡೀ ಹಗರಣದಲ್ಲಿ ಪ್ರಮುಖ ಕಿಂಗ್‌ಪಿನ್‌ ಹಾಗೂ ಮುಖ್ಯ ಸಂಚುಗಾರರಾಗಿದ್ದಾರೆ. ಅಬಕಾರಿ ಹಗರಣದ ಲಾಭಾರ್ಥಿಯಾಗಿದ್ದಾರೆ ಎಂದು ರಿಮ್ಯಾಂಡ್‌ ಡೈರಿ ಹೇಳುತ್ತದೆ.ದೆಹಲಿ ಅಬಕಾರಿ ನೀತಿಯ ನಿಯಮ ರಚನೆ ಹಾಗೂ ಅನುಷ್ಠಾನದ ವೇಳೆ ಪ್ರತಿಫಲಾಪೇಕ್ಷೆ ಬಯಸಿ ‘ಸೌತ್‌ ಗ್ರೂಪ್‌’ ಜತೆಗೂಡಿ 100 ಕೋಟಿ ರು. ಲಂಚವನ್ನು ಕವಿತಾ ನೀಡಿದ್ದರು ಎಂದು ಇ.ಡಿ. ದೂರಿದೆ. ಈ ಹಗರಣದಲ್ಲಿ ಸೌತ್‌ ಗ್ರೂಪ್‌ನ ಭಾಗವಾಗಿದ್ದ ‘ಆರೋಬಿಂದೋ’ ಶರತ್, ಮಾಗುಂಟಾ ರಾಘವರೆಡ್ಡಿ, ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಹೆಸರು ಕೂಡ ಇದೆ.ದೆಹಲಿ ಅಬಕಾರಿ ಹಗರಣ ಸಂಬಂಧ ಇ.ಡಿ. ಕವಿತಾ ಅವರನ್ನು ಶುಕ್ರವಾರ ಬಂಧಿಸಿ ದೆಹಲಿಗೆ ಕರೆದೊಯ್ದಿದೆ. ದೆಹಲಿ ನ್ಯಾಯಾಲಯ ಕವಿತಾ ಅವರನ್ನು ಏಳು ದಿನ ಇ.ಡಿ. ವಶಕ್ಕೆ ಒಪ್ಪಿಸಿದೆ.