ಅರವಿಂದ ಕೇಜ್ರಿವಾಲ್‌ ಹಣೆಬರಹ ಏ.3ಕ್ಕೆ ನಿರ್ಧಾರ

| Published : Mar 28 2024, 12:52 AM IST / Updated: Mar 28 2024, 08:10 AM IST

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ಅರ್ಜಿ ಕುರಿತ ತೀರ್ಪು ಏ.3ರಂದು ಪ್ರಕಟವಾಗಲಿದೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ಅರ್ಜಿ ಕುರಿತ ತೀರ್ಪು ಏ.3ರಂದು ಪ್ರಕಟವಾಗಲಿದೆ. 

ಕೂಡಲೇ ಬಿಡುಗಡೆ ಮಾಡಬೇಕು ಎಂಬ ಕೇಜ್ರಿವಾಲ್‌ ಮನವಿ ನಿರಾಕರಿಸಿರುವ ದಿಲ್ಲಿ ಹೈಕೋರ್ಟ್‌, ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ವಿವರಣೆ ಕೇಳಿ ಏ.3ರಂದು ಅಂತಿಮ ವಿಚಾರಣೆ ನಿಗದಿಪಡಿಸಿದೆ.

‘ನನ್ನ ಬಂಧನ ಹಾಗೂ ಕೂಡಲೇ ಇ.ಡಿ. ವಶಕ್ಕೆ ಹಸ್ತಾಂತರ ಅಕ್ರಮ. ಹೀಗಾಗಿ ಬಿಡುಗಡೆಗೆ ಆದೇಶಿಸಬೇಕು’ ಎಂದು ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದದ ನ್ಯಾ। ಸ್ವರಣ ಕಾಂತ ಶರ್ಮಾ, ‘ಬಂಧನದ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಕಳುಹಿಸಿ ಏ.2ರೊಳಗೆ ಉತ್ತರಿಸಲು ಕೋರಲಾಗುವುದು. 

3ರಂದು ಅಂತಿಮ ವಿಚಾರಣೆ ನಡೆಯಲಿದೆ. ಅಂದೇ ಈ ವಿಷಯ ಇತ್ಯರ್ಥ ಮಾಡಲಾಗುವುದು. ಆ ದಿನ ಕಲಾಪ ಮುಂದೂಡುವುದಿಲ್ಲ’ ಎಂದರು.

ಇದಕ್ಕೂ ಮುನ್ನ ಕೇಜ್ರಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ‘ಜಾರಿ ನಿರ್ದೇಶನಾಲಯವು ಯಾವುದೇ ಆಧಾರವಿಲ್ಲದೆ ಕೇಜ್ರಿವಾಲ್‌ ಮತ್ತು ಅವರ ಪಕ್ಷವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಬಂಧಿಸಿದೆ. 

ಚುನಾವಣೆಯ ಸಮಯದಲ್ಲಿ ಅನಧಿಕೃತವಾಗಿ ವಿಚಾರಣೆಗೆಂದು ಬಂಧನದಲ್ಲಿರಿಸುವ ಪ್ರತಿಯೊಂದು ಗಂಟೆಯೂ ಸಹ ವ್ಯರ್ಥವಾದಂತೆಯೇ ಸರಿ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರುತ್ತೇವೆ’ ಎಂದು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪಿಸಿದ ಇ.ಡಿ. ಪರ ವಕೀಲರು, ‘ಕೇಜ್ರಿವಾಲ್‌ ಮನವಿ ಅಧ್ಯಯನ ಮಾಡಿ ಉತ್ತರಿಸಲು ಸಮಯ ಬೇಕು’ ಎಂದು ಕೋರಿದರು. ಕೊನೆಗೆ ಇ.ಡಿ. ವಕೀಲರ ವಾದಕ್ಕೆ ಮನ್ನಣೆ ಸಿಕ್ಕಿತು.