ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್‌ ಸಿಂದೂರ’ವು, ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾದ ಮುರೀದ್ಕೆ ಮಸೀದಿಯನ್ನು ನಾಮಾವಶೇಷ ಮಾಡಿತ್ತು ಎಂದು ಸ್ವತಃ ಲಷ್ಕರ್‌ ಉಗ್ರ ಹಫೀಜ್‌ ಅಬ್ದುಲ್‌ ರೌಫ್‌ ಒಪ್ಪಿಕೊಂಡಿದ್ದಾನೆ.

- ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದ್ದರು- ಆದರೆ ಆಪರೇಷನ್‌ ಸಿಂದೂರ ವೇಳೆ ವಾಸ್ತವವಾಗಿ ಪಾಕಿಸ್ತಾನದ ಮೇಲೆಯೇ ದಾಳಿ ಆಗಿತ್ತು- ಪಾಕಿಸ್ತಾನ ಸರ್ಕಾರವೇ ಅಕ್ಷರಶಃ ತಲ್ಲಣಗೊಂಡಿತ್ತು. ಮುರೀದ್ಕೆ ಮಸೀದಿಯೇ ಇರಲಿಲ್ಲ- ನಾವು ಅಲ್ಲಿ ಇಂದು ಕುಳಿತುಕೊಳ್ಳಲೂ ಆಗದಷ್ಟೂ ಸಂಪೂರ್ಣ ಧ್ವಂಸ ಆಗಿದೆ. ಕುಸಿದಿದೆ- ಬಹಿರಂಗ ಸಭೆಯೊಂದರಲ್ಲಿ ಲಷ್ಕರ್‌ ಉಗ್ರ ಹಫೀಜ್‌ ಅಬ್ದುಲ್‌ ರೌಫ್‌ನಿಂದಲೇ ಹೇಳಿಕೆ- ಸಿಂದೂರ ವೇಳೆ ನಮಗೆ ಏನೂ ಆಗಿಲ್ಲ ಎಂದು ಹೇಳಿಕೊಂಡಿದ್ದ ಪಾಕ್‌ ಮಾನ ಹರಾಜು

--

ಇಸ್ಲಾಮಾಬಾದ್: ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್‌ ಸಿಂದೂರ’ವು, ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾದ ಮುರೀದ್ಕೆ ಮಸೀದಿಯನ್ನು ನಾಮಾವಶೇಷ ಮಾಡಿತ್ತು ಎಂದು ಸ್ವತಃ ಲಷ್ಕರ್‌ ಉಗ್ರ ಹಫೀಜ್‌ ಅಬ್ದುಲ್‌ ರೌಫ್‌ ಒಪ್ಪಿಕೊಂಡಿದ್ದಾನೆ. ಆ ದಾಳಿಯಿಂದ ಪಾಕಿಸ್ತಾನ ಅಕ್ಷರಶಃ ತಲ್ಲಣಗೊಂಡಿತ್ತು ಎಂದೂ ಹೇಳಿದ್ದಾನೆ. ಇದರೊಂದಿಗೆ ಭಾರತದ ದಾಳಿಯಲ್ಲಿ ನಮಗೆ ಏನೂ ಆಗಿಲ್ಲ ಎಂಬ ಪಾಕ್‌ ಸರ್ಕಾರ ಮತ್ತು ಆ ಸೇನೆಯ ಬೂಟಾಟಿಕೆಯನ್ನು ರೌಫ್‌ ಬಹಿರಂಗವಾಗಿಯೇ ಬಯಲು ಮಾಡಿದ್ದಾನೆ.

ಜಾಗತಿಕ ಉಗ್ರ ಎಂದು ಅಮೆರಿಕದಿಂದ ಘೋಷಣೆಗೆ ಒಳಗಾಗಿರುವ ರೌಫ್‌ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿರುವ ವಿಡಿಯೋ ಇದೀಗ ಬಹಿರಂಗವಾಗಿದ್ದು, ಅದರಲ್ಲಿ ಆಪರೇಷನ್‌ ಸಿಂದೂರದ ತೀವ್ರತೆ, ಅದರಿಂದ ಪಾಕಿಸ್ತಾನದ ಉಗ್ರರಿಗೆ ಆದ ದೊಡ್ಡ ಹಾನಿಯನ್ನು ಆತ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾನೆ.

ರೌಫ್‌ ಹೇಳಿದ್ದೇನು?:

‘ಮೇ 6 ಮತ್ತು 7ರಂದು ಏನಾಯಿತೋ, ಅದಾದ ಬಳಿಕ ಮುರೀದ್ಕೆ ಮಸೀದಿಯಾಗಿ ಉಳಿಯಲಿಲ್ಲ. ಇಂದು ನಾವು ಅಲ್ಲಿ ಕುಳಿತುಕೊಳ್ಳಲೂ ಸಾಧ್ಯವಿಲ್ಲ. ದಾಳಿಯಲ್ಲಿ ಅದು ಪೂರ್ಣ ಧ್ವಂಸವಾಗಿದೆ. ಅದು ಪೂರ್ಣ ಕುಸಿದು ಬಿದ್ದಿದೆ. ಅಲ್ಲಾಹ್‌ನ ದಯೆ. ದಾಳಿಯ ಹೊರತಾಗಿಯೂ ನಾವು ಉಳಿದುಕೊಂಡೆವು. ಅಂದು ಅಲ್ಲಿ ಮಕ್ಕಳು ಉಳಿದುಕೊಳ್ಳಲು ಬಯಸಿದ್ದರಾದರೂ ನಮ್ಮ ಹಿತೈಷಿಗಳು ಅವರನ್ನು ಅಲ್ಲಿ ಉಳಿಯದಂತೆ ಸೂಚಿಸಿದ್ದರು. ಏಕೆಂದರೆ ಅವರಿಗೆ ಪರಿಸ್ಥಿತಿಯ ಅರಿವಿತ್ತು. ಹೀಗಾಗಿ ಅವರ ಜೀವ ಉಳಿಯಿತು’ ಎಂದು ರೌಫ್‌ ಸಿಂದೂರದ ತೀವ್ರತೆ ಮತ್ತು ಅದರಿಂದ ಲಷ್ಕರ್‌ ಉಗ್ರರ ತರಬೇತಿ ಕೇಂದ್ರವಾದ ಮುರೀದ್ಕೆ ಮಸೀದಿ ಪೂರ್ಣ ಧ್ವಂಸಗೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.ಜೊತೆಗೆ, ‘ಸಿಂದೂರ ದಾಳಿಯಿಂದ ಪಾಕಿಸ್ತಾನ ಸರ್ಕಾರ ಅಕ್ಷರಶಃ ತಲ್ಲಣಗೊಂಡಿತ್ತು. ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದರು. ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಮೇಲೆಯೇ ದಾಳಿ ಮಾಡಲಾಗಿತ್ತು. ಈ ದಾಳಿ ಯುದ್ಧದ ನಿಯಮಗಳನ್ನೇ ಬದಲಾಯಿಸಿತ್ತು’ ಎಂದು ರೌಫ್‌ ಹೇಳಿದ್ದಾನೆ.

ಸಿಂದೂರದಲ್ಲಿ ಪಾಕ್‌ ಉಗ್ರ ನೆಲೆಗಳಿಗೆ ಭಾರೀ ಹಾನಿಯಾಗಿದ್ದರೂ ಅದನ್ನು ಪಾಕ್‌ ಸರ್ಕಾರ ಮತ್ತು ಸೇನೆ ಒಪ್ಪಿರಲಿಲ್ಲ. ಆದರ ಇದೀಗ ಸ್ವತಃ ಲಷ್ಕರ್‌ ನಾಯಕನೇ ಅದನ್ನು ಒಪ್ಪಿದ್ದಾನೆ.