ತೆಲಂಗಾಣದ ವಿದ್ಯುತ್‌ ಪ್ರಸರಣಾ ಘಟಕಗಳಲ್ಲಿ ಕೆಲಸ ಮಾಡುವ 20 ವರ್ಷಕ್ಕೂ ಹೆಚ್ಚು ಅನುಭವ ಇರುವ ಹಿರಿಯ ಸ್ವಚ್ಛತಾ ಕಾರ್ಮಿಕ ಸೇರಿ ಇತರೆ ಕ್ಲಾಸ್‌-4 ದರ್ಜೆಯ ಹಿರಿಯ ನೌಕರರ ವೇತನ ಸುಮಾರು 2 ಲಕ್ಷ ರುಪಾಯಿ! ಇನ್ನು ವಿದ್ಯುತ್‌ ಪ್ರಸರಣಾ ಇಲಾಖೆಯ ಮುಖ್ಯ ಎಂಜಿನಿಯರ್‌ ವೇತನ 7 ಲಕ್ಷ ರುಪಾಯಿ!!

 ಹೈದರಾಬಾದ್‌: ತೆಲಂಗಾಣದ ವಿದ್ಯುತ್‌ ಪ್ರಸರಣಾ ಘಟಕಗಳಲ್ಲಿ ಕೆಲಸ ಮಾಡುವ 20 ವರ್ಷಕ್ಕೂ ಹೆಚ್ಚು ಅನುಭವ ಇರುವ ಹಿರಿಯ ಸ್ವಚ್ಛತಾ ಕಾರ್ಮಿಕ ಸೇರಿ ಇತರೆ ಕ್ಲಾಸ್‌-4 ದರ್ಜೆಯ ಹಿರಿಯ ನೌಕರರ ವೇತನ ಸುಮಾರು 2 ಲಕ್ಷ ರುಪಾಯಿ! ಇನ್ನು ವಿದ್ಯುತ್‌ ಪ್ರಸರಣಾ ಇಲಾಖೆಯ ಮುಖ್ಯ ಎಂಜಿನಿಯರ್‌ ವೇತನ 7 ಲಕ್ಷ ರುಪಾಯಿ!!

ತೆಲಂಗಾಣ ಮುಖ್ಯಕಾರ್ಯದರ್ಶಿ ಕೆ.ರಾಮಕೃಷ್ಣ ರಾವ್‌ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಮಾಸಿಕ ವೇತನ ಮತ್ತು ಪಿಂಚಣಿ ವೆಚ್ಚ ಕಳೆದ 12 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, 6 ಸಾವಿರ ಕೋಟಿ ರು.ಗೆ ತಲುಪಿದೆ. ಅರ್ಥಾತ್‌ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಾದಾಗ ಅಂದರೆ 2014ರಲ್ಲಿ ಪಿಂಚಣಿ ಮತ್ತು ವೇತನಕ್ಕಾಗಿ 1,500 ಕೋಟಿ ರು. ವೆಚ್ಚ ಮಾಡಲಾಗುತ್ತಿತ್ತು. ಆ ಬಳಿಕ ವೇತನ ಮತ್ತು ಪಿಂಚಣಿ ವೆಚ್ಚವು ಶೇ.300ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಸೆಂಟರ್‌ ಫಾರ್‌ ಎಕನಾಮಿಕ್‌ ಆ್ಯಂಡ್‌ ಸೋಷಿಯಲ್‌ ಸ್ಟಡೀಸ್‌ನಿಂದ ಆಯೋಜಿಸಿದ್ದ 16ನೇ ಹಣಕಾಸು ಆಯೋಗದ ಶಿಫಾರಸು ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಈ ಪರಿಷ್ಕರಣೆಯು ಐಎಎಸ್‌ ಅಧಿಕಾರಿಗಳು ಹಾಗೂ ರಾಜ್ಯಪಾಲರ ವೇತನವನ್ನೇ ಮೀರಿಸುವಂತಿದೆ. ವಿದ್ಯುತ್‌ ಪೂರೈಕೆ ಇಲಾಖೆಯಲ್ಲಿನ ವೇತನ ಇತರೆ ಇಲಾಖೆಗಳಿಗಿಂತ ಹೆಚ್ಚಿರುತ್ತದೆ. ಏಕೆಂದರೆ ಈ ಇಲಾಖೆಯಲ್ಲಿ ಪ್ರತಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗುತ್ತದೆ ಎಂದು ಹೇಳಿದರು.

ಇತರ ಇಲಾಖೆಗಳಲ್ಲಿ ಎಷ್ಟು ವೇತನ?:

ಪ್ರಾರಂಭಿಕ ಹಂತದ ಮುನ್ಸಿಪಲ್‌ ಸಿಬ್ಬಂದಿ ರಾಜ್ಯದಲ್ಲಿ ಮಾಸಿಕ 28 ಸಾವಿರ ವೇತನ ಪಡೆಯುತ್ತಾನೆ, 30 ವರ್ಷದ ಅನುಭವ ಹೊಂದಿರುವ ಚಾಲಕರ ವೇತನ 1 ಲಕ್ಷ ದಾಟುತ್ತದೆ ಎಂದು ಮೂಲಗಳು ತಿಳಿಸಿವೆ.

ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ನ ಶೇ.2ರಷ್ಟು ನೈರ್ಮಲ್ಯ ಕಾರ್ಮಿಕರು ಕಾಯಂ ನೌಕರರಾಗಿದ್ದು, ಅವರ ಮಾಸಿಕ ವೇತನ ಸರಾಸರಿ 70 ಸಾವಿರ ರು. ಆಗಿದೆ. ಇದರ ಜತೆಗೆ ಸೌಲಭ್ಯಗಳನ್ನೂ ಅವರು ಪಡೆಯಲಿದ್ದಾರೆ.

ಹೆಚ್ಚಿನ ವೇತನದಿಂದಾಗಿ ಸರ್ಕಾರಿ ನೌಕರಿಗೆ ರಾಜ್ಯದಲ್ಲಿ ಹೆಚ್ಚಿನ ಸ್ಪರ್ಧೆ ಇದೆ. ಇತ್ತೀಚೆಗೆ 563 ಗ್ರೂಪ್‌-1 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪ್ರತಿ ಹುದ್ದೆಗೆ 799 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೊಂದು ವೇತನ ಹೇಗೆ?

ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ವೇತನ ಆಯೋಗದ ಶಿಫಾರಸಿನಂತೆ ಅನ್ವಯ ಹೆಚ್ಚಳ

ಆದರ ವಿದ್ಯುತ್‌ ಪ್ರಸರಣ ಇಲಾಖೆ ಸಿಬ್ಬಂದಿಗಳಿಗೆ ಪ್ರತಿ 4 ವರ್ಷಕ್ಕೊಮ್ಮೆ ವೇತನ ಏರಿಕೆ

ಹೀಗಾಗಿ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದ ಸ್ವಚ್ಛತಾ ಸಿಬ್ಬಂದಿಗೆ ₹2 ಲಕ್ಷ ವೇತನ

ಇಲಾಖೆಯ ಮುಖ್ಯ ಎಂಜಿನಿಯರ್‌ಗಳು 7 ಲಕ್ಷ ರು.ವರೆಗೂ ವೇತನ ಪಡೆಯುವ ಅವಕಾಶ

ಪರಿಣಾಮ 10 ವರ್ಷದಲ್ಲಿ ತೆಲಂಗಾಣ ರಾಜ್ಯದ ವೇತನ ಪಿಂಚಣಿ ವೆಚ್ಚ 4 ಪಟ್ಟು ಹೆಚ್ಚಳ