ಪ್ರಖ್ಯಾತ ಗಜಲ್‌ ಗಾಯಕ ಪಂಕಜ್‌ ಉಧಾಸ್‌ ಇನ್ನಿಲ್ಲ

| Published : Feb 27 2024, 01:33 AM IST / Updated: Feb 27 2024, 11:06 AM IST

ಸಾರಾಂಶ

ದೀರ್ಘಕಾಲೀನ ಖಾಯಿಲೆಯಿಂದ ಬಳಲುತ್ತಿದ್ದ ಗಾಯಕ ಪಂಕಜ್‌ ಉಧಾಸ್‌ ಸಾವನ್ನಪ್ಪಿದ್ದಾರೆ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಉಧಾಸ್‌ ಕನ್ನಡದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಖ್ಯಾತಿಯ ಗಾಯಕರಾಗಿ ಹೆಸರು ಮಾಡಿದ್ದರು.

ಮುಂಬೈ: ಪ್ರಖ್ಯಾತ ಖ್ಯಾತ ಗಜ಼಼ಲ್‌ ಗಾಯಕ ಪಂಕಜ್‌ ಉಧಾಸ್‌ (72) ಸೋಮವಾರ ನಿಧನರಾದರು. ದೀರ್ಘಕಾಲೀನ ಖಾಯಿಲೆಯಿಂದ ಬಳಲುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು. 

ಇದರೊಂದಿಗೆ ಸಂಗೀತ ಜಗತ್ತಿನ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.‘ದೀರ್ಘ ಕಾಲೀನ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ನಗರದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಆದರೆ ಸೋಮವಾರ ಬೆಳಗ್ಗೆ 11ರ ವೇಳೆಗೆ ಅವರು ಅಸುನೀಗಿದ್ದಾರೆ ಎಂದು ತಿಳಿಸಲು ವಿಷಾದವಾಗುತ್ತಿದೆ’ ಎಂದು ಅವರ ಪುತ್ರಿ ನಯಾಬ್‌ ಪೋಸ್ಟ್‌ ಮಾಡಿದ್ದಾರೆ.

ಉಧಾಸ್‌ ಅವರು ಪತ್ನಿ ಫರೀದಾ, ಪುತ್ರಿಯರಾದ ರೇವಾ ಹಾಗೂ ನಯಾಬ್‌ ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಮುಂಬೈನಲ್ಲಿ ನಡೆಯಲಿದೆ.

ಮೋದಿ ಸೇರಿ ಗಣ್ಯರ ಶೋಕಪಂಕಜ್‌ ಉಧಾಸ್‌ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯರು, ಸಂಗೀತ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

 ‘ಉಧಾಸ್‌ ಅವರ ಗಜಲ್‌ಗಳು ನೇರವಾಗಿ ನಮ್ಮ ಹೃದಯಕ್ಕೇ ತಟ್ಟುತ್ತಿದ್ದವು’ ಎಂದು ಮೋದಿ ಸ್ಮರಿಸಿದ್ದಾರೆ.‘ಚಂದಕಿಂತ ಚಂದ’ ಹಾಡಿ ಕನ್ನಡಿಗರಿಗೂ ಅಚ್ಚುಮೆಚ್ಚು

ಸುದೀಪ್‌ ನಟನೆಯ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡಿನ ಮೂಲಕ ಪಂಕಜ್‌ ಉಧಾಸ್‌ ಕನ್ನಡಿಗರ ಮನೆಮಾತಾಗಿದ್ದರು. ಸ್ಪರ್ಶ ಚಿತ್ರದಲ್ಲೇ ಅವರು ಒಟ್ಟು 2 ಗೀತೆ ಹಾಡಿದ್ದರು.

ಪ್ರೇಮಗೀತೆಗಳಿಗೆ ಜೀವ ತುಂಬಿದ್ದ ಉಧಾಸ್‌ಚಿಟ್ಠಿ ಆಯೀ ಹೈ, ಔರ್‌ ಅಹಿಸ್ತಾ ಕೀಜಿಯೇ ಬಾತೇ ಮುಂತಾದ ಖ್ಯಾತ ರೊಮ್ಯಾಂಟಿಕ್‌ ಹಾಡುಗಳಿಗೆ ಪಂಕಜ್‌ ಉಧಾಸ್‌ ದನಿಯಾಗಿದ್ದರು. 

ಆಹತ್‌ ಆಲ್ಬಂ ಮೂಲಕ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಗಜಲ್‌ ಗಾಯಕ ಕಳೆದ ನಾಲ್ಕು ದಶಕಗಳಲ್ಲಿ 50ಕ್ಕೂ ಹೆಚ್ಚು ರೊಮ್ಯಾಂಟಿಕ್‌ ಆಲ್ಬಂಗಳಲ್ಲಿ ತಮ್ಮ ಧ್ವನಿಯನ್ನು ನೀಡಿದ್ದರು.

ಪ್ರಮುಖವಾಗಿ 90ರ ದಶಕದಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ದಾಯಂ, ನಾಮ್‌, ಸಾಜನ್‌, ಮೊಹ್ರಾ ಚಿತ್ರಗಳ ಪ್ರಸಿದ್ಧ ಗೀತೆಗಳಿಗೆ ಧ್ವನಿ ನೀಡಿದ್ದರು. 

ಅದರಲ್ಲೂ ಅವರು ಹಾಡಿದ್ದ ನಾ ಕಜಾರೆ ಕಿ ಧಾರ್‌, ಮೈಖಾನೆ ಸೆ ಶರಾಬ್‌, ಆಜ್‌ಫಿರ್‌ ತುಮ್‌ ಪೆ ಪ್ಯಾರ್‌ ಆಯಾ, ಮೊಹಬ್ಬತ್‌ ಇನ್ಯತ್‌ ಕರಂ ದೇಖ್ತೆ ಹೈ ಗೀತೆಗಳು ಇಂದಿಗೂ ಜನಮಾನಸದಲ್ಲಿ ಮೆಚ್ಚುಗೆ ಗಳಿಸಿಕೊಂಡಿವೆ. 

ತಬಲಾ ಪ್ರವೀಣರಾಗಿದ್ದ ಪಂಕಜ್‌ ಘುಲಾಮ್‌ ಖಾದಿರ್‌ ಖಾನ್‌ ಅವರ ಬಳಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. 2006ರಲ್ಲಿ ಇವರಿಗೆ ಪದ್ಮಶ್ರೀ ಪುರಸ್ಕಾರವನ್ನೂ ನೀಡಿ ಗೌರವಿಸಲಾಗಿತ್ತು. 

ಇವರು ತಮ್ಮ ಮಹೆಕ್‌ ಆಲ್ಬಂನಲ್ಲಿ ಜಾನ್‌ ಅಬ್ರಹಾಂಗೆ ಅವಕಾಶ ನೀಡಿ ಸಂಗೀತ ಕ್ಷೇತ್ರಕ್ಕೆ ಬರಲು ಕಾರಣವಾಗಿದ್ದರು.