ರಷ್ಯಾ - ಉಕ್ರೇನ್‌ ಯುದ್ಧ: ಸಂಧಾನಕ್ಕೆ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸಮ್ಮತಿ, ಷರತ್ತು ಅನ್ವಯ

| Published : Sep 06 2024, 01:09 AM IST / Updated: Sep 06 2024, 04:19 AM IST

ಸಾರಾಂಶ

ರಷ್ಯಾ-ಉಕ್ರೇನ್‌ ಯುದ್ಧ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ. ಭಾರತ, ಚೀನಾ ಹಾಗೂ ಬ್ರೆಜಿಲ್‌ಗಳು ಮಧ್ಯಸ್ಥಿಕೆ ವಹಿಸಬೇಕು ಎಂಬುದು ಅವರ ಷರತ್ತು.

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾಗಿ ಎರಡೂವರೆ ವರ್ಷಗಳು ಕಳೆದರೂ ಮಾತುಕತೆ ನಡೆಸಲು ಹಿಂದೇಟು ಹಾಕುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಈಗ ಸಂಧಾನಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಷರತ್ತನ್ನೂ ಒಡ್ಡಿದ್ದಾರೆ. ಅದೇನೆಂದರೆ, ರಷ್ಯಾ-ಉಕ್ರೇನ್‌ ಸಂಧಾನ ಮಾತುಕತೆಗೆ ಭಾರತ, ಚೀನಾ ಹಾಗೂ ಬ್ರೆಜಿಲ್‌ಗಳು ಮಧ್ಯಸ್ಥಿಕೆ ವಹಿಸಬೇಕು ಎಂಬುದು.

ಉಭಯ ದೇಶಗಳ ನಡುವೆ 2022ರ ಫೆಬ್ರವರಿಯಲ್ಲಿ ಯುದ್ಧ ಆರಂಭಕ್ಕೂ ಮುನ್ನು ಇಸ್ತಾಂಬುಲ್‌ನಲ್ಲಿ ಮಾತುಕತೆಯಾಗಿತ್ತು. ಆ ವೇಳೆ ಪ್ರಾಥಮಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಜಾರಿಗೆ ಬಂದಿರಲಿಲ್ಲ. ಆ ಒಪ್ಪಂದವನ್ನು ಆಧಾರವಾಗಿಟ್ಟುಕೊಂಡು ಮಾತುಕತೆ ನಡೆಯಬೇಕು ಎಂದೂ ಪುಟಿನ್‌ ಹೇಳಿದ್ದಾರೆ.

ರಷ್ಯಾ ಹಾಗೂ ಉಕ್ರೇನ್‌ ಎರಡೂ ದೇಶಗಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಉಭಯ ದೇಶಗಳಿಗೂ ಶಾಂತಿಮಂತ್ರ ಬೋಧಿಸಿದ್ದರು. ಸಮಸ್ಯೆಗೆ ಮಾತುಕತೆಯೇ ಪರಿಹಾರ. ಯುದ್ಧಭೂಮಿಯಲ್ಲಿ ಶಾಂತಿ ಮಾತುಕತೆ ನಡೆಸಲು ಆಗದು ಎಂದಿದ್ದರು. ಅದರ ಬೆನ್ನಲ್ಲೇ ಪುಟಿನ್‌ ಅವರಿಂದ ಈ ಇಂಗಿತ ವ್ಯಕ್ತವಾಗಿರುವುದು ಗಮನಾರ್ಹ.

ಮೋದಿ ನೇತೃತ್ವ ಹೊರಲಿ: ಈ ನಡುವೆ, ಪತ್ರಿಕೆಯೊಂದರ ಜತೆ ಮಾತನಾಡಿರುವ ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್‌, ಉಕ್ರೇನ್‌- ರಷ್ಯಾ ಮಾತುಕತೆಗೆ ಭಾರತ ನೆರವಾಗಬೇಕು. ಮೋದಿ ಹಾಗೂ ಪುಟಿನ್‌ ನಡುವೆ ಅತ್ಯುತ್ತಮ ರಚನಾತ್ಮಕ ಮತ್ತು ಸ್ನೇಹಪರ ಸಂಬಂಧವಿದೆ. ಹೀಗಾಗಿ ಈ ಬಿಕ್ಕಟ್ಟಿನ ಮಾಹಿತಿ ಪಡೆದು ಮೋದಿ ಅವರು ನೇತತ್ವ ವಹಿಸಬೇಕು. ಪುಟಿನ್‌, ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಹಾಗೂ ಅಮೆರಿಕ ನಾಯಕರ ಜತೆಗೂ ಅವರು ಮುಕ್ತವಾಗಿ ಮಾತನಾಡಬಲ್ಲವರಾಗಿದ್ದಾರೆ. ಈ ಮಧ್ಯಸ್ಥಿಕೆಯಿಂದ ವಿಶ್ವದ ಆಗುಹೋಗುಗಳಲ್ಲಿ ಭಾಗಿಯಾಗಲು ಭಾರತಕ್ಕೆ ದೊಡ್ಡ ಅವಕಾಶ ಸಿಕ್ಕಂತಾಗುತ್ತದೆ ಎಂದಿದ್ದಾರೆ.

==

ಭಾರತದಲ್ಲಿ ಹಲವು ಸಿಂಗಾಪುರ ಸೃಷ್ಟಿಸುವ ಆಸೆ ಇದೆ: ಮೋದಿ

ಪಿಟಿಐ ಸಿಂಗಾಪುರಭಾರತದಲ್ಲೂ ಹಲವು ಸಿಂಗಾಪುರಗಳನ್ನು ಸೃಷ್ಟಿಸುವ ಬಯಕೆ ಇದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಕಾರ್ಯೋನ್ಮುಖವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಇದೇ ವೇಳೆ, ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ದೇಶದ ಮೊದಲ ತಿರುವಳ್ಳುವರ್‌ ಸಾಂಸ್ಕೃತಿಕ ಕೇಂದ್ರವನ್ನು ಸಿಂಗಾಪುರದಲ್ಲಿ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಸಿಂಗಾಪುರ ಪ್ರವಾಸದ ಕೊನೆಯ ದಿನ ಮೋದಿ ಮಾತನಾಡಿ ಈ ಘೋಷಣೆಗಳನ್ನು ಮಾಡಿದ್ದಾರೆ.ಈ ನಡುವೆ, ಸಿಂಗಾಪುರ ಸಂಸತ್ತಿಗೆ ಭೇಟಿ ನೀಡಿದ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತವನ್ನು ಅಲ್ಲಿನ ಸರ್ಕಾರ ನೀಡಿದೆ. ಇದೇ ವೇಳೆ, ಭಾರತಕ್ಕೆ ಭೇಟಿ ನೀಡುವಂತೆ ಸಿಂಗಾಪುರ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರಿಗೆ ಮೋದಿ ಆಹ್ವಾನ ನೀಡಿದ್ದು, ಅವರು ಒಪ್ಪಿಕೊಂಡಿದ್ದಾರೆ.

4 ಒಪ್ಪಂದಕ್ಕೆ ಸಹಿ: ಏತನ್ಮಧ್ಯೆ, ಲಾರೆನ್ಸ್‌ ಜತೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದ್ದಾರೆ. ಎರಡೂ ದೇಶಗಳ ಸಂಬಂಧವನ್ನು ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಸ್ತರಕ್ಕೆ ಎತ್ತರಿಸಲು ಉಭಯ ದೇಶಗಳೂ ಒಪ್ಪಿಗೆ ಸೂಚಿಸಿವೆ. ಸೆಮಿಕಂಡಕ್ಟರ್‌, ಡಿಜಿಟಲ್‌ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ನೀಡುವ ಸಂಬಂಧ 4 ಒಪ್ಪಂದಗಳಿಗೆ ಸಹಿ ಹಾಕಿವೆ.