ಸಾರಾಂಶ
ನವದೆಹಲಿ: ‘ನಿಮಗೆ ಭಾರತ ಇಷ್ಟವಿಲ್ಲ ಎಂದರೆ ಭಾರತದಲ್ಲಿ ಕೆಲಸ ಮಾಡಬೇಡಿ. ನಿಯಮ ಪಾಲಿಸದಿದ್ದರೆ ನಿಮ್ಮ ವೆಬ್‌ಸೈಟ್‌ನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸುತ್ತೇವೆ’ ಎಂದು ದೆಹಲಿ ಹೈಕೋರ್ಟ್, ಹೆಸರಾಂತ ಆನ್‌ಲೈನ್ ಮಾಹಿತಿ ಕಣಜ ‘ವಿಕಿಪಿಡಿಯಾ’ಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಮೂವರು ವಿಕಿಪೀಡಿಯಾ ಬಳಕೆದಾರರು ಖಾಸಗಿ ಮಾಧ್ಯಮ ಸಂಸ್ಥೆ ಎಎನ್‌ಐನ ವಿಕಿಪಿಡಿಯಾದ ಪುಟವನ್ನು ಅಕ್ರಮವಾಗಿ ಎಡಿಟ್ ಮಾಡಿ, ‘ಎಎನ್‌ಐ ಸರ್ಕಾರದ ಪ್ರಚಾರ ಸಾಧನ’ ಎಂದು ಸೇರಿಸಿದ್ದರು. ಇದರ ವಿರುದ್ಧ ಎಎನ್‌ಐ ಕೋರ್ಟ್ ಮೊರೆ ಹೋಗಿ 2 ಕೋಟಿ ರು. ಮಾನಹಾನಿ ದಾವೆ ಹೂಡಿತ್ತು. ಆಗ ಇದನ್ನು ಎಡಿಟ್ ಮಾಡಿದವರು ಮೂವರು ವ್ಯಕ್ತಿಗಳು ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು.
ಈ ವೇಳೆ, ಎಡಿಟ್ ಮಾಡಿದವರ ಮಾಹಿತಿ ಬಹಿರಂಗಗೊಳಿಸುವಂತೆ ಕೋರ್ಟ್ ಸೂಚಿಸಿತ್ತು. ಆದರೆ ವಿಕಿಪಿಡಿಯಾ, ‘ಭಾರತದಲ್ಲಿ ನಮ್ಮ ಕೇಂದ್ರ ಕಚೇರಿ ಇಲ್ಲ. ತಕ್ಷಣಕ್ಕೆ ಮಾಹಿತಿ ಸಿಗದು’ ಎಂಬ ಕುಂಟು ನೆಪವೊಡ್ಡಿ, ಮಾಹಿತಿ ಎಡಿಟ್ ಮಾಡಿದ ಮೂವರು ಬಳಕೆದಾರರ ವಿವರಗಳನ್ನು ಬಹಿರಂಗ ಪಡಿಸಲು ತಡ ಮಾಡಿತ್ತು.
ಹೀಗಾಗಿ ವಿಕಿಪೀಡಿಯಾ ವಿರುದ್ಧ ದಿಲ್ಲಿ ಹೈಕೋರ್ಟ್ ಗರಂ ಆಗಿದ್ದು‘ ಇದು ವಿಕಿಪಿಡಿಯಾ ಭಾರತದ ಸಂಸ್ಥೆ ಅಲ್ಲ ಎನ್ನುವ ಪ್ರಶ್ನೆ ಅಲ್ಲ. ಭಾರತದಲ್ಲಿ ಇದ್ದರೆ ಇಲ್ಲಿನ ಕಾನೂನು ಪಾಲಿಸಬೇಕು. ನೀವು ಭಾರತವನ್ನು ಇಷ್ಟ ಪಡದಿದ್ದರೆ ಭಾರತದಲ್ಲಿ ಕೆಲಸ ಮಾಡಬೇಡಿ. ನೀವು ಇಲ್ಲಿ ಹೊಂದಿರುವ ವ್ಯವಹಾರಗಳನ್ನು ಬಂದ್ ಮಾಡುವಂತೆ ನಾವು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕಾಗುತ್ತದೆ’ ಎಂದಿದೆ.